ADVERTISEMENT

‘ಜಡ್ಜ್‌ಮೆಂಟ್‌’ನಲ್ಲಿ ನ್ಯಾಯಕ್ಕಾಗಿ ಹೋರಾಟ: ನಟ ದಿಗಂತ್

​ಪ್ರಜಾವಾಣಿ ವಾರ್ತೆ
Published 24 ಮೇ 2024, 0:29 IST
Last Updated 24 ಮೇ 2024, 0:29 IST
ದಿಗಂತ್‌
ದಿಗಂತ್‌   
ರವಿಚಂದ್ರನ್‌ ಜೊತೆ ನಟ ದಿಗಂತ್‌ ಮುಖ್ಯಭೂಮಿಕೆಯಲ್ಲಿರುವ ‘ದಿ ಜಡ್ಜ್‌ಮೆಂಟ್‌’ ಚಿತ್ರ ಇಂದು ತೆರೆ ಕಾಣುತ್ತಿದೆ. ಚಿತ್ರದಲ್ಲಿನ ಪಾತ್ರ ಕುರಿತು, ತಮ್ಮ ಮುಂದಿನ ಚಿತ್ರಗಳ ಕುರಿತು ನಟ ದಿಗಂತ್‌ ಮಾತನಾಡಿದ್ದಾರೆ.

‘ನಾನು ಇಲ್ಲಿಯವರೆಗೆ ಮಾಡಿರುವ ಪಾತ್ರಗಳಿಗಿಂತ ವಿಭಿನ್ನವಾದ ಪಾತ್ರ ‘ದಿ ಜಡ್ಜ್‌ಮೆಂಟ್‌’ ಸಿನಿಮಾದಲ್ಲಿದೆ. ನ್ಯಾಯಕ್ಕಾಗಿ ಹೋರಾಟ ಮಾಡುವ ಸಾಮಾನ್ಯ ಹೋರಾಟಗಾರನ ಪಾತ್ರ. ಇಂದಿನ ತಲೆಮಾರಿನ ಬೆಂಗಳೂರಿನಂತಹ ಸಿಟಿಯಲ್ಲಿರುವ ಯುವಕರನ್ನು ಪ್ರತಿನಿಧಿಸುವಂತಿದೆ ನನ್ನ ಪಾತ್ರವಿದೆ. ತನ್ನ ಇಷ್ಟದಂತೆ ಜೀವನ ನಡೆಸಲು ಹೊರಟ ಹುಡುಗನೊಬ್ಬನ ಜೀವನದಲ್ಲಿ ನಡೆಯುವ ಕೆಲವು ಅನಿರೀಕ್ಷಿತ ಘಟನೆಗಳು ಏನೆಲ್ಲ ಬದಲಾವಣೆಗಳಿಗೆ ಕಾರಣವಾಗುತ್ತದೆ ಎಂಬುದರ ಸುತ್ತ ನನ್ನ ಪಾತ್ರವಿದೆ’ ಎಂದು ಮಾತು ಪ್ರಾರಂಭಿಸಿದರು ದಿಗಂತ್‌.

‘ರವಿಚಂದ್ರನ್‌ ಅವರಂಥ ದೊಡ್ಡ ನಟರ ಜೊತೆ ಅಭಿನಯಿಸುವ ಅವಕಾಶ, ತುಂಬ ದೊಡ್ಡ ಸ್ಟಾರ್‌ ಕಾಸ್ಟಿಂಗ್‌, ತುಂಬ ವೃತ್ತಿಪರವಾಗಿರುವ ತಂಡ...ಇವೆಲ್ಲವೂ ಈ ಸಿನಿಮಾ ಒಪ್ಪಿಕೊಳ್ಳಲು ಕಾರಣವಾಯಿತು. ನಾನು ರವಿ ಸರ್‌ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು. ಮೊದಲ ಬಾರಿಗೆ ಈ ಸಿನಿಮಾದಲ್ಲಿ ಅವರೊಂದಿಗೆ ಅಭಿನಯಿಸುವ ಅವಕಾಶ ಸಿಕ್ಕಿದ್ದಕ್ಕೆ ತುಂಬ ಖುಷಿಯಾಗಿದೆ. ರವಿ ಸರ್‌ ಜೊತೆಗೆ ಶೂಟಿಂಗ್‌ ಮಾಡುವಾಗ, ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಅವರಿಂದ ಕಲಿತುಕೊಳ್ಳುವುದು, ಮಾತಿಗೆ ಕುಳಿತುಕೊಂಡರೆ ಅವರಿಂದ ತಿಳಿದುಕೊಳ್ಳುವುದು ಸಾಕಷ್ಟಿದೆ’ ಎಂದು ರವಿಚಂದ್ರನ್‌ ಜೊತೆಗಿನ ಒಡನಾಟವನ್ನು  ಹಂಚಿಕೊಂಡರು.

‘ಮೊದಲ ಬಾರಿಗೆ ನಾನು ಧನ್ಯಾ ರಾಮ್‌ಕುಮಾರ್‌ ಜೋಡಿಯಾಗಿ ಅಭಿನಯಿಸಿದ್ದೇವೆ. ನಮ್ಮಿಬ್ಬರದ್ದೂ, ಇಂದಿನ ಜನರೇಶನ್‌ ಯುವ ಜೋಡಿಯನ್ನು ಪ್ರತಿನಿಧಿಸುವಂಥ ಪಾತ್ರ.‘ಪೌಡರ್‌’ ಸಿನಿಮಾದಲ್ಲೂ ನಾವಿಬ್ಬರೂ ಒಟ್ಟಿಗೇ ಅಭಿನಯಿಸುತ್ತಿದ್ದೇವೆ. ಕನ್ನಡದ ಮಟ್ಟಿಗೆ ತುಂಬ ಅಪರೂಪವಾಗಿರುವ ಲೀಗಲ್‌-ಥ್ರಿಲ್ಲರ್‌ ಶೈಲಿಯಲ್ಲಿ ಸಿನಿಮಾ. ಜನ ಹೇಗೆ ಸ್ವೀಕರಿಸುತ್ತಾರೆಂದು ನೋಡಬೇಕು’ ಎನ್ನುತ್ತ ಸಿನಿಮಾ ಕುರಿತು ಇನ್ನಷ್ಟು ವಿವರ ನೀಡಿದರು.

ADVERTISEMENT

‘ಮಾರಿಗೋಲ್ಡ್‌ ನಂತರ ಆ್ಯಕ್ಷನ್‌ ಪಾತ್ರಗಳು ಬರುತ್ತಿವೆ. ‘ಉತ್ತರಕಾಂಡದಲ್ಲಿ ಖಡಕ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವೆ. ಮಿರ್ಚಿ ಮಲ್ಲಿಗೆ ಎಂಬ ಈ ಪಾತ್ರ ಹಿಂದೆ ಮಾಡಿದ ಪಾತ್ರಗಳಿಗಿಂತ ತುಂಬ ಭಿನ್ನವಾಗಿದೆ. ‘ಎಡಗೈ ಅಪಘಾತಕ್ಕೆ ಕಾರಣ’, ‘ಪೌಡರ್‌’ ತೆರೆಗೆ ಬರಲು ಸಿದ್ಧ ಇವೆ. ಮತ್ತೊಂದೆರಡು ಸಿನಿಮಾಗಳು ಪ್ರಾರಂಭಿಕ ಹಂತದಲ್ಲಿವೆ’ ಎಂದು ತಮ್ಮ ಮುಂದಿನ ಸಿನಿಮಾಗಳ ವಿವರ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.