ADVERTISEMENT

Interview | ಲೋಕಿಯ ‘ದಿಲ್‌ದಾರ್‌’ ಪಯಣ

​ಪ್ರಜಾವಾಣಿ ವಾರ್ತೆ
Published 28 ಮೇ 2025, 23:30 IST
Last Updated 28 ಮೇ 2025, 23:30 IST
ಸೌರವ್‌ ಲೋಕೇಶ್‌
ಸೌರವ್‌ ಲೋಕೇಶ್‌   

‘ಭಜರಂಗಿ’ ಚಿತ್ರದಲ್ಲಿ ಖಳನಾಯಕನಾಗಿ ಜನಪ್ರಿಯರಾದ ಸೌರವ್ ಲೋಕೇಶ್, ಶ್ರೇಯಸ್‌ ಮಂಜು, ರವಿಚಂದ್ರನ್‌ ನಟನೆಯ ‘ದಿಲ್‌ದಾರ್‌’ ಚಿತ್ರದ ಪ್ರಮುಖ ಖಳನಟನಾಗಿ ನಟಿಸುತ್ತಿದ್ದಾರೆ. ತೆಲುಗಿನ ಸ್ಟಾರ್‌ ನಟರೊಬ್ಬರ ಚಿತ್ರದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಹಲವು ಭಾಷೆಯ ಸಿನಿಮಾಗಳಲ್ಲಿ ಬ್ಯೂಸಿಯಾಗಿರುವ ಅವರು ತಮ್ಮ ಸಿನಿಪಯಣದ ಕುರಿತು ಮಾತನಾಡಿದ್ದಾರೆ...

‘ದಿಲ್‌ದಾ‌ರ್’ ಚಿತ್ರದಲ್ಲಿ ಲೋಕಿ ಅವರ ಪಾತ್ರವನ್ನು ಪರಿಚಯಿಸುವ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಮಧು ಜಿ. ಗೌಡ ಆ್ಯಕ್ಷನ್-ಕಟ್ ಹೇಳುತ್ತಿರುವ ಚಿತ್ರ ಕಾಲೇಜ್ ಕ್ಯಾಂಪಸ್‌ನಲ್ಲಿ ನಡೆಯುವ ಪ್ರೇಮಕಥೆಯನ್ನು ಹೊಂದಿದೆ. ಕೆ.ಮಂಜು ಪುತ್ರ ಶ್ರೇಯಸ್‌ ಮಂಜು ನಾಯಕನಾಗಿದ್ದು, ರವಿಚಂದ್ರನ್‌ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಚಿತ್ರ ಎರಡು ವರ್ಷಗಳ ಹಿಂದೆ ಸೆಟ್ಟೇರಿತ್ತು. 

‘ಮಿ.ಆ್ಯಂಡ್ ಮಿಸಸ್ ರಾಮಾಚಾರಿ’, ‘ಜಾಗ್ವಾರ್’ ಚಿತ್ರಗಳ ಬಳಿಕ ಮತ್ತೆ ಕಾಲೇಜ್ ಕಥೆಯಲ್ಲಿ ನಟಿಸಿದ್ದೇನೆ. ಇದೊಂದು ಕಮರ್ಷಿಯಲ್ ಚಿತ್ರ. ಕಾಲೇಜಿನ ಎರಡು ಪ್ರತಿಸ್ಪರ್ಧಿಗಳ ನಡುವಿನ ಸೆಣಸಾಟ ಎನ್ನಬಹುದು. ನಾಯಕನ ವಿರುದ್ಧ ಹೋರಾಡುವ ರಗಡ್‌ ಪಾತ್ರ. ನನ್ನ ಜನ್ಮದಿನದ ಪ್ರಯುಕ್ತ ಚಿತ್ರತಂಡ ಟೀಸರ್‌ ಬಿಡುಗಡೆಗೊಳಿಸಿ ಶುಭ ಹಾರೈಸಿದ್ದು ಖುಷಿಯನ್ನು ಇಮ್ಮಡಿಗೊಳಿಸಿದೆ’ ಎಂದು ಮಾತು ಪ್ರಾರಂಭಿಸಿದರು ಲೋಕಿ.

ADVERTISEMENT

‘ಸವಾರಿ’ಯಿಂದ ಪ್ರಾರಂಭ

2009ರಲ್ಲಿ ಸಿನಿ ‘ಸವಾರಿ’ ಪ್ರಾರಂಭಿಸಿದ ಅವರು ಈತನಕ 40ಕ್ಕೂ ಹೆಚ್ಚು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ‘ಭಜರಂಗಿ’, ‘ರಥಾವರ’ ಅವರ ವೃತ್ತಿ ಬದುಕಿಗೆ ತಿರುವು ನೀಡಿದ ಚಿತ್ರಗಳು. ‘ಆಚಾರ್ಯ’, ‘ಸಲಾರ್’ನಂತಹ ತೆಲುಗಿನ ಚಿತ್ರಗಳಲ್ಲೂ ಕಾಣಿಸಿಕೊಂಡಿರುವ ಇವರು ಚಿರಂಜೀವಿ ಅಭಿನಯದ ‘ವಿಶ್ವಂಭರ’ದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ಚಿತ್ರೀಕರಣ ಪೂರ್ಣಗೊಂಡು ಚಿತ್ರದ ಪೋಸ್ಟ್‌-ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಚಿರಂಜೀವಿಯಂಥ ಮೆಗಾಸ್ಟಾರ್‌ ಜತೆ ನಟಿಸುವ ಅವಕಾಶ ಸಿಕ್ಕಿರುವುದೇ ಒಂದು ಖುಷಿಯ ಸಂಗತಿ. ಚಿತ್ರದಲ್ಲಿ ಇಬ್ಬರು ವಿಲನ್‌ಗಳಿದ್ದು, ನಾನು ಮತ್ತು ಕುನಾಲ್ ಕಪೂರ್ ನಟಿಸಿದ್ದೇವೆ’ ಎಂದರು. 

ಪವನ್‌ ಕಲ್ಯಾಣ್‌ ಜತೆ ನಟಿಸುತ್ತಿರುವಿರಾ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ‘ಇದೀಗ ಮುಂಬೈನಲ್ಲಿ ಮತ್ತೊಂದು ತೆಲುಗು ಸ್ಟಾರ್‌ ಸಿನಿಮಾದ ಚಿತ್ರೀಕರಣದಲ್ಲಿರುವೆ. ಆದರೆ ಈ ಬಗ್ಗೆ ಚಿತ್ರತಂಡವೇ ಅಧಿಕೃತ ಮಾಹಿತಿ ನೀಡಲಿದೆ. ತೆಲುಗಿನ ‘ಘೋಡಾ’ ಚಿತ್ರ ಬಿಡುಗಡೆಗೆ ಸಿದ್ಧವಿದೆ. ಈಗ ಕಲಾವಿದರಿಗೆ, ಕಲೆಗೆ ಭಾಷೆಯ ಗಡಿಯಿಲ್ಲ. ಯಾವುದೇ ಭಾಷೆಯಲ್ಲಿಯೂ ಕೆಲಸ ಮಾಡಬಹುದು. ವಿಶ್ವಂಭರ ಚಿತ್ರಕ್ಕೆ ಆರು ದಿನಗಳ ಕಾಲ ಡಬ್ಬಿಂಗ್ ನಾನೇ ಮಾಡಿದ್ದೇನೆ’ ಎನ್ನುತ್ತಾರೆ.

‘ನಾನು ಈ ನಡುವೆ ಎಲ್ಲ ಚಿತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ‘ರಥಾವರ’ ಬಳಿಕ ತೃತೀಯ ಲಿಂಗಿ ಪಾತ್ರಕ್ಕಾಗಿ ಸಾಕಷ್ಟು ಚಿತ್ರಗಳಿಂದ ಅವಕಾಶ ಬಂತು. ಆದರೆ ಯಾವುದನ್ನೂ ಒಪ್ಪಿಕೊಳ್ಳಲಿಲ್ಲ. ವಿಶ್ವಂಭರಕ್ಕೆ ವರ್ಷಗಳ ಕಾಲ ಮೀಸಲಿಟ್ಟೆ. ಅದಕ್ಕೂ ಮೊದಲೇ ಒಪ್ಪಿಕೊಂಡ ಮತ್ತೊಂದು ಚಿತ್ರ ಮುಗಿಸುತ್ತಿರುವೆ. ನಟನಾಗಬೇಕೆಂದು ಕನಸು ಕಂಡವನು. 15 ವರ್ಷಗಳ ಸಿನಿಪಯಣ. ಸಣ್ಣ, ಸಣ್ಣ ಪಾತ್ರಗಳನ್ನು ಮಾಡಿಕೊಂಡು ಬಂದೆ. ಇಂದು ಉತ್ತಮ ಪಾತ್ರಗಳು ಸಿಗುತ್ತಿವೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಇಷ್ಟೇ ತಿನ್ನಬೇಕು, ಇಷ್ಟೇ ವರ್ಕಟ್ ಮಾಡಬೇಕು ಎಂಬ ತತ್ವ ನನ್ನದು. ಶಿಸ್ತನ್ನು ಯಾವತ್ತೂ ಬಿಡಬಾರದು, ಯಾವುದೋ ಪಾತ್ರಕ್ಕೆ ತೂಕ ಹೆಚ್ಚಿಸಿಕೊಳ್ಳಬೇಕು ಅಥವಾ ಕಡಿಮೆ ಮಾಡಿಕೊಳ್ಳಬೇಕು ಎಂದಾಗ ಎರಡಕ್ಕೂ ತಯಾರಿರಬೇಕು. ಹೀಗಾಗಿ ನಾನು ಯಾವಾಗಲೂ ಸಿದ್ಧತೆಯಲ್ಲಿರುತ್ತೇನೆ. ಜತೆಗೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಫಿಟ್ನೆಸ್‌ ಮುಖ್ಯ’ ಎಂದು ಮಾತಿಗೆ ವಿರಾಮವಿತ್ತರು. 


ನಾಯಕನಾಗುವ ಇರಾದೆಯಿಲ್ಲ ‘ನಾಯಕನಾಗಿ ಕಾಣಿಸಿಕೊಳ್ಳಬೇಕು ಎಂಬ ಇರಾದೆ ಅಷ್ಟೊಂದು ಇಲ್ಲ. ಹೀಗೆ ಆಗುತ್ತೇನೆ ಆಗಬೇಕು ಎಂದು ಯಾವತ್ತೂ ಅಂದುಕೊಂಡಿಲ್ಲ. ಸಿಕ್ಕ ಕೆಲಸ ಮಾಡುತ್ತ ಬಂದಿರುವೆ. ಒಂದು ಸಲ ಖಳನಾಯಕನಾದರೆ ಎಲ್ಲ ಪಾತ್ರಗಳಲ್ಲಿಯೂ ಆ ಶೇಡ್‌ ಕಾಣಿಸುತ್ತದೆ. ಆದರೆ ನಟನಾಗಿ ಎಲ್ಲ ಬಗೆಯ ಚಿತ್ರಗಳಲ್ಲಿಯೂ ನಟಿಸಬೇಕು ಎಂಬ ಆಸೆಯಿದೆ. ‘ಭಜರಂಗಿ’ಯಲ್ಲಿ ಖಳನಾಯಕ. ‘ಭಜರಂಗಿ–2’ ಚಿತ್ರದಲ್ಲಿ ಸಂಪೂರ್ಣ ಪಾಸಿಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡೆ. ನಾನು ಮಾಡದ ಯಾವುದೇ ಪಾತ್ರ ಬಂದರೂ ನನಗೆ ಇಷ್ಟ. ಯಾವುದೇ ಒಂದು ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ನನಗೇ ಅನ್ನಿಸಿದರೆ ಅಂಥ ಪಾತ್ರ ಮಾಡುವುದಿಲ್ಲ’ ಎನ್ನುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.