ADVERTISEMENT

ಈ ವಾರ ಹತ್ತು ಸಿನಿಮಾಗಳು ತೆರೆಗೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2024, 23:37 IST
Last Updated 15 ಫೆಬ್ರುವರಿ 2024, 23:37 IST
ಅದ್ವಿತಿ ಶೆಟ್ಟಿ
ಅದ್ವಿತಿ ಶೆಟ್ಟಿ   

ಈವಾರ ತೆರೆಗೆ

ಜನವರಿ–ಫೆಬ್ರುವರಿ ತಿಂಗಳು ಸ್ಯಾಂಡಲ್‌ವುಡ್‌ಗೆ ಸ್ಟಾಕ್‌ ಕ್ಲಿಯರೆನ್ಸ್‌ ತಿಂಗಳಿನಂತಾಗಿವೆ. ವಾರದಿಂದ ವಾರಕ್ಕೆ ತೆರೆ ಕಾಣುತ್ತಿರುವ ಚಿತ್ರಗಳ ಸಂಖ್ಯೆ ಹೆಚ್ಚುತ್ತಿದೆ. ಈ ವಾರ ಒಟ್ಟು ಹತ್ತು ಚಿತ್ರಗಳು ಬಿಡುಗಡೆಗೊಳ್ಳುತ್ತಿವೆ. 

5ಡಿ

ಕಲಾ ಸಾಮ್ರಾಟ್ ಎಸ್.ನಾರಾಯಣ್ ನಿರ್ದೇಶನದ ‘5ಡಿ’ ಚಿತ್ರ ಇಂದು ತೆರೆ ಕಾಣುತ್ತಿದೆ. ಆದಿತ್ಯ, ಅದಿತಿ ಪ್ರಭುದೇವ ಜೋಡಿಯಾಗಿ ನಟಿಸಿರುವ ಚಿತ್ರ ಕ್ರೈಂ, ಥ್ರಿಲ್ಲರ್‌ ಕಥೆಯನ್ನು ಹೊಂದಿದೆ. ಕೌಟಂಬಿಕ ಚಿತ್ರಗಳನ್ನು ನೀಡಿದ್ದ ಎಸ್‌.ನಾರಾಯಣ್‌ ಅವರ ಹೊಸ ಪ್ರಯತ್ನವಿದು. ಕುಮಾರ್‌ಗೌಡ ಛಾಯಾಗ್ರಹಣ ಮಾಡಿದ್ದು, 1 ಟು 100 ಡ್ರೀಮ್ ಮೂವೀಸ್ ಲಾಂಚನದಲ್ಲಿ ಸ್ವಾತಿ ಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಸಾರಾಂಶ

ನಟಿ ಶ್ರುತಿ ಹರಿಹರನ್‌ ಮುಖ್ಯಭೂಮಿಕೆಯಲ್ಲಿರುವ ‘ಸಾರಾಂಶ’ ಚಿತ್ರ ಇಂದು ತೆರೆ ಕಾಣುತ್ತಿದೆ. ಧಾರಾವಾಹಿ, ಸಿನಿಮಾಗಳ ಮೂಲಕ ನಟರಾಗಿದ್ದ ಸೂರ್ಯ ವಸಿಷ್ಠ ಈ ಚಿತ್ರದ ನಿರ್ದೇಶಕರು. ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್ ಮುಂತಾದವರ ತಾರಾಗಣ, ಉದಿತ್ ಹರಿತಾಸ್ ಸಂಗೀತ ನಿರ್ದೇಶನ, ಅಪರಾಜಿತ್ ಹಿನ್ನೆಲೆ ಸಂಗೀತ, ಅನಂತ್ ಭಾರದ್ವಾಜ್ ಛಾಯಾಚಿತ್ರಗ್ರಹಣ, ಪ್ರದೀಪ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ. 

ADVERTISEMENT

ಕೆಟಿಎಂ

ದೀಕ್ಷಿತ್ ಶೆಟ್ಟಿ, ಸಂಜನಾ ದಾಸ್, ಕಾಜಲ್ ಕುಂದರ್ ಅಭಿನಯದ ‘ಕೆಟಿಎಂ’ ಚಿತ್ರ ಕೂಡ ಇಂದೇ ತೆರೆ ಕಾಣುತ್ತಿದೆ. ಉಷಾ ಭಂಡಾರಿ, ರಘು ರಮಣಕೊಪ್ಪ, ಪ್ರಕಾಶ್ ತುಮ್ಮಿನಾಡು, ಬಾಬು ಹಿರಣ್ಣಯ್ಯ ಮೊದಲಾದವರು ತಾರಾಬಳಗದಲ್ಲಿದ್ದಾರೆ. ಈ ಮೊದಲು ‘ಅಥರ್ವ’ ಸಿನಿಮಾ ಮಾಡಿದ್ದ ಅರುಣ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.  ಮಹಾಸಿಂಹ ಮೂವೀಸ್ ಬ್ಯಾನರ್ ಅಡಿಯಲ್ಲಿ ವಿನಯ್ ನಿರ್ಮಾಣ ಮಾಡಿದ್ದಾರೆ.  ನವೀನ್ ಛಾಯಾಚಿತ್ರಗ್ರಹಣ, ಚೇತನ್ ಅವರ ಸಂಗೀತ ಸಂಯೋಜನೆ, ಅರ್ಜುನ್ ಕಿಟ್ಟು ಸಂಕಲನ ಇದೆ. 

ಶಾಖಾಹಾರಿ

ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಮುಖ್ಯಭೂಮಿಕೆಯಲ್ಲಿರುವ ‘ಶಾಖಾಹಾರಿ’ ಸಿನಿಮಾ ಇಂದು ಬಿಡುಗಡೆ ಕಾಣುತ್ತಿರುವ ಮತ್ತೊಂದು ಸಿನಿಮಾ. ಮಲೆನಾಡಿನ ಕಥೆ ಹೊಂದಿರುವ ಚಿತ್ರವನ್ನು ಸಂದೀಪ್ ಸುಂಕದ್ ನಿರ್ದೇಶಿಸಿದ್ದಾರೆ. ರಂಗಾಯಣ ರಘು ಅಡುಗೆ ಭಟ್ಟನಾಗಿ, ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಸುಜಯ್ ಶಾಸ್ತ್ರಿ ಈ ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ ಬಂಡವಾಳ ಹೂಡಿದ್ದಾರೆ. ವಿಶ್ವಜಿತ್ ರಾವ್ ಕ್ಯಾಮೆರಾ, ಶಶಾಂಕ್ ನಾರಾಯಣ ಸಂಕಲನ, ಮಯೂರ್ ಅಂಬೆಕಲ್ಲು ಸಂಗೀತ ಈ ಸಿನಿಮಾಗಿದೆ. 

ಅಬ್ಬಬ್ಬ

ಕೆ.ಎಂ.ಚೈತನ್ಯ ನಿರ್ದೇಶನದಲ್ಲಿ ಲಿಖಿತ್ ಶೆಟ್ಟಿ, ಅಮೃತ ಅಯ್ಯಂಗಾರ್ ಜೋಡಿಯಾಗಿ ನಟಿಸಿರುವ ಅಬ್ಬಬ್ಬ ತೆರೆಗೆ ಬರುತ್ತಿದೆ. ಫ್ರೈಡೇ ಫಿಲ್ಮ್‌ ಹೌಸ್ ಹಾಗೂ ಮೀರಾಮಾರ್ ಸಂಸ್ಥೆ ಈ ಚಿತ್ರ ನಿರ್ಮಿಸಿದೆ. ಅನುಷಾ ರೈ, ತಾಂಡವ್ ರಾಮ್, ಅಜಯ್ ರಾಜ್, ಧನರಾಜ್ ಆಚಾರ್, ಶರತ್ ಲೋಹಿತಾಶ್ವ, ಸಿಹಿಕಹಿ ಚಂದ್ರು, ಸುಧಾ ಬೆಳವಾಡಿ, ವಿಜಯ್ ಚೆಂಡೂರು ಮುಂತಾದವರು ತಾರಾಗಣದಲ್ಲಿದ್ದಾರೆ. ಇದು ಮಲಯಾಳದ ‘ಅದಿ ಕಪ್ಯಾರೆ ಕೂಟಮನಿ’ ಚಿತ್ರದ ರಿಮೇಕ್. 

ಧೀರ ಸಾಮ್ರಾಟ್‌

ರಾಕೇಶ್‌ ಬಿರಾದಾರ್, ಅದ್ವಿತಿ ಶೆಟ್ಟಿ ಅಭಿನಯದ ‘ಧೀರಸಾಮ್ರಾಟ್’ ತೆರೆಗೆ ಬರುತ್ತಿರುವ ಮತ್ತೊಂದು ಚಿತ್ರ. ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಪವನ್‌ಕುಮಾರ್ ಸಿನಿಮಾಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ತನ್ವಿ ಪ್ರೊಡಕ್ಷನ್ ಹೌಸ್ ಚಿತ್ರವನ್ನು ನಿರ್ಮಿಸುತ್ತಿದೆ. ಶೋಭರಾಜ್, ನಾಗೇಂದ್ರಅರಸು, ಬಲರಾಜವಾಡಿ, ರಮೇಶ್‌ ಭಟ್ ಮುಂತಾದವರು ನಟಿಸಿದ್ದಾರೆ. ರಾಘವ್‌ ಸುಭಾಷ್ ಸಂಗೀತ ಸಂಯೋಜಿಸಿದ್ದಾರೆ.

ಲೇಡೀಸ್‌ ಬಾರ್‌

ಡಿ.ಎಂ.ಸಿ. ಪ್ರೊಡಕ್ಷನ್ಸ್ ಮೂಲಕ ಟಿ.ಎಂ.ಸೋಮರಾಜು ನಿರ್ಮಿಸಿ, ಮುತ್ತು ಎ.ಎನ್. ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ಲೇಡಿಸ್‌ಬಾರ್’ ಬಿಡುಗಡೆಗೊಳ್ಳುತ್ತಿದೆ. ಬಹುತೇಕ ಹೊಸಬರೇ ಇರುವ ಚಿತ್ರಕ್ಕೆ ಹರ್ಷ ಕಾಗೋಡ್ ಅವರ ಸಂಗೀತ ನಿರ್ದೇಶನ, ವೀನಸ್‌ಮೂರ್ತಿ ಅವರ ಛಾಯಾಚಿತ್ರಗ್ರಹಣವಿದೆ. 

ಸಿದ್ದು ಕಟ್ಟಿಮನಿ ನಿರ್ದೇಶನದ ‘ಅಲೆಮಾರಿ ಈ ಬದುಕು’ ಕೂಡ ಈ ವಾರ ತೆರೆಗೆ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.