ADVERTISEMENT

‘ಗಲ್ಲಿಬಾಯ್‌’ಗೆ ಫಿಲಂಫೇರ್‌ ಮನ್ನಣೆ

ವಿಶಾಖ ಎನ್.
Published 16 ಫೆಬ್ರುವರಿ 2020, 19:30 IST
Last Updated 16 ಫೆಬ್ರುವರಿ 2020, 19:30 IST
   

ಮುಂಬೈನ ಕೊಳೆಗೇರಿಗಳ ನಡುವಿನ ಪ್ರತಿಭಾವಂತನೊಬ್ಬ ದೊಡ್ಡ ‘ರ‍್ಯಾಪ್’ ಗಾಯಕನಾಗಿ ಹೊಮ್ಮುವ ಭಾವಪೂರಿತ ಕಥನದ ಸಿನಿಮಾ ‘ಗಲ್ಲಿ ಬಾಯ್’.

ಬರ್ಲಿನ್‌ನ ಅತಿ ದೊಡ್ಡ ತೆರೆಯ ಮೇಲೆ ಈ ಸಿನಿಮಾ ಪ್ರದರ್ಶನಗೊಂಡಿತ್ತು. ಬೇರೆ ಬೇರೆ ಸಂಸ್ಕೃತಿಗಳ 1800 ಜನ ಅದನ್ನು ನೋಡಿದ್ದರು. ಭಾಷೆ ಅವರಲ್ಲಿ ಅನೇಕರಿಗೆ ಅಪರಿಚಿತ. ಆದರೆ, ದೃಶ್ಯಭಾಷೆ ಎಲ್ಲರನ್ನೂ ಹಿಡಿದಿಟ್ಟಿತ್ತು. ಪ್ರದರ್ಶನದ ನಂತರ ಕೆಲವರು ತಮ್ಮ ಬದುಕಿನಲ್ಲೂ ಅಂತಹದೇ ಕಥೆಗಳಿವೆ ಎಂದು ಹೇಳಿಕೊಂಡಿದ್ದರು.

ಕೊಳೆಗೇರಿಯ ಹೊಸಕಾಲದ ಕವಿಗಳನ್ನು (ಶಿಷ್ಟರು ಹೇಳುವಂತೆ ಅವರು ಬರೆಯುವುದೆಲ್ಲ ಗಪದ್ಯ) ಹಾಗೂ ಶಿಷ್ಟ ಕವಿಯೂ ಆದ ತಮ್ಮ ತಂದೆ ಜಾವೆದ್‌ ಅಖ್ತರ್‌ ಅವರನ್ನು ಒಂದೇ ಕೋಣೆಯಲ್ಲಿ ಕುಳ್ಳಿರಿಸಿ, ಸಾಲುಗಳನ್ನು ಬರೆಸಿದವರು ಝೋಯಾ. ರಾಜಕಾರಣಿ ಕನ್ಹಯ್ಯ ಕುಮಾರ್ ಪದೇ ಪದೇ ಹಾಡುವ ‘ಆಜಾದಿ’ ಹಾಡಿನ ಸಾಲನ್ನು ಕಡಪಡೆದು ಹೊಸತೇ ಕಾವ್ಯವನ್ನು ಈ ಸಿನಿಮಾಗೆಂದು ಝೋಯಾ ಬರೆಸಿದ್ದು ವಿಶೇಷ.

ADVERTISEMENT

ನ್ಯೂಯಾರ್ಕ್ ಯೂನಿವರ್ಸಿಟಿ ಫಿಲ್ಮ್‌ನಲ್ಲಿ ಚಲನಚಿತ್ರ ತಯಾರಿಕೆಯ ಸೂಕ್ಷ್ಮಗಳನ್ನು ಕಲಿತ ವರು ಝೋಯಾ. ಸೃಜನಶೀಲತೆ ಅವರಿಗೆ ಆನು ವಂಶಿಕ. ಅಪ್ಪ ಜಾವೇದ್ ಅಖ್ತರ್ ಕವಿಯಾಗಿ ಹಲವು ಜನಪ್ರಿಯ ಚಿತ್ರಗೀತೆಗಳನ್ನು ಬರೆದವರು. ಅಮ್ಮ ಹನಿ ಇರಾನಿ ಚಿತ್ರಕಥಾ ಕೌಶಲಗಳಿಗೆ ಹಲವು ಉದಾಹರಣೆಗಳಿವೆ.

2015ರಲ್ಲಿ ‘ದಿಲ್ ಧಡಕ್ನೆ ದೋ’ ಹಿಂದಿ ಸಿನಿಮಾಗೆ ಸಂಕಲನ ಕಾರ್ಯ ನಡೆಯುತ್ತಿತ್ತು. ಆಗ ‘ಆಫತ್’ ಎಂಬ ದೇಸಿ ಹಾಡು ಝೋಯಾ ಕಿವಿಮೇಲೆ ಬಿತ್ತು. ಸಂಗೀತಗಾರರೂ ಆದ ಸಂಕಲನಕಾರ ಆನಂದ್ ಸುಬ್ಬಯ ಆ ಹಾಡನ್ನು ಕೇಳಿಸಿದ್ದು. ಚಿಕ್ಕಂದಿನಿಂದ ವಿದೇಶಿ ರ‍್ಯಾಪ್ ಹಾಡುಗಳ ಕೇಳಿ ಬೆಳೆದಿದ್ದ ಝೋಯಾ ಅವರಿಗೆ ಅದರಲ್ಲಿ ಹೊಸತೇ ಧ್ವನಿ, ಕಾವ್ಯ ಇದೆ ಎನ್ನಿಸಿತು. ಆ ಹಾಡು ಕಟ್ಟಿದ್ದ ದೇಸಿ ರ‍್ಯಾಪರ್ ನೇಜಿ. ಅವರನ್ನು ಭೇಟಿ ಮಾಡಿದ ಝೋಯಾ ಬದುಕಿನ ಹಿನ್ನೆಲೆ, ಹಾಡು ಹುಟ್ಟಿದ ಸಮಯವನ್ನು ತಿಳಿದು ಕೊಂಡರು. ಆಗಲೇ ಅಂಥದೊಂದು ಕಥೆಯ ಸಿನಿಮಾ ಮಾಡಬೇಕೆಂಬ ಬಯಕೆ ಮೊಳೆತದ್ದು.

ರ‍್ಯಾಪರ್‌ಗಳ ಕುರಿತು ಬಂದಿದ್ದ ಹಲವು ಸಿನಿಮಾಗಳನ್ನು ನೋಡಿದರು. ಮುಂಬೈ ಕೊಳೆ ಗೇರಿಯ ಹೊಸಕಾಲದ ಹುಡುಗರ ಹಿಪ್-ಹಾಪ್ ಸಂಸ್ಕೃತಿ ಸಮಕಾಲೀನ ವಸ್ತು ಎನಿಸಿತು. ಅದೇ ಚಿತ್ರಕಥೆಯಾಯಿತು. ಈ ಪ್ರಕ್ರಿಯೆಯಲ್ಲಿ ಅವರಿಗೆ ಜೊತೆಯಾದವರು ಇನ್ನೊಬ್ಬ ನಿರ್ದೇಶಕಿ ರೀಮಾ ಕಾಗ್ಟಿ.

ಐದು ವರ್ಷಗಳ ಶ್ರಮವೊಂದು ಹೀಗೆ ‘ಗಲ್ಲಿ ಬಾಯ್’ ಆಯಿತು. ಅದಕ್ಕೀಗ ಫಿಲ್ಮ್‌ಫೇರ್ ಪ್ರಶಸ್ತಿಗಳ ಸುರಿಮಳೆಯ ಸಂಭ್ರಮ.

ಫಿಲಂಫೇರ್‌: ಇತಿಹಾಸ ಸೃಷ್ಟಿಸಿದ ‘ಗಲ್ಲಿ ಬಾಯ್’

‘ಗಲ್ಲಿಬಾಯ್‌’– ಫಿಲಂಫೇರ್‌ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿದ್ದ ಎಲ್ಲ 13 ವಿಭಾಗಗಳಲ್ಲೂ ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದೆ. ಇಲ್ಲಿವರೆಗೆ 11 ಪ್ರಶಸ್ತಿಗಳನ್ನು ಗಳಿಸಿದ್ದ ‘ಬ್ಲಾಕ್’ ಅತಿಹೆಚ್ಚು ಪ್ರಶಸ್ತಿ ಗೆದ್ದ ದಾಖಲೆ ಇತ್ತು. ಗುವಾಹಟಿಯಲ್ಲಿ ಶನಿವಾರ ರಾತ್ರಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಫಿಲಂಪೇರ್‌ ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಲ್ಲಿದೆ

ಅತ್ಯುತ್ತಮ ಚಿತ್ರ– ಗಲ್ಲಿಬಾಯ್, ಅತ್ಯುತ್ತಮ ನಿರ್ದೇಶಕಿ– ಝೋಯಾ ಅಖ್ತರ್ (ಗಲ್ಲಿಬಾಯ್), ಅತ್ಯುತ್ತಮ ಸಿನಿಮಾ, ಅತ್ಯುತ್ತಮ ಸಿನಿಮಾ (ವಿಮರ್ಶಕರ ಆಯ್ಕೆ)– ಅನುಭವ್ ಸಿನ್ಹಾ (ಆರ್ಟಿಕಲ್ 15) ಮತ್ತು ಸೊಂಚಿರಿಯಾ (ಅಭಿಷೇಕ್ ಚುಬೆ).

ಅತ್ಯುತ್ತಮ ನಾಯಕ ನಟ– ರಣವೀರ್ ಸಿಂಗ್ (ಗಲ್ಲಿ ಬಾಯ್), ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ)– ಅಯುಷ್ಮಾನ್ ಖುರಾನಾ, ಅತ್ಯುತ್ತಮ ನಾಯಕ ನಟಿ– ಆಲಿಯಾ ಭಟ್ (ಗಲ್ಲಿ ಬಾಯ್), ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ)– ಭೂಮಿ ಪೆಡ್ನೇಕರ್ ಮತ್ತು ತಾಪ್ಸೀ (ಸಾಂದ್ ಕಿ ಆಂಖ್).

ಅತ್ಯುತ್ತಮ ಪೋಷಕ ನಟಿ– ಅಮೃತಾ ಸುಭಾಷ್ (ಗಲ್ಲಿ ಬಾಯ್), ಅತ್ಯುತ್ತಮ ಪೋಷಕ ನಟ– ಸಿದ್ಧಾಂತ್ ಚತುರ್ವೇದಿ (ಗಲ್ಲಿ ಬಾಯ್), ಬೆಸ್ಟ್ ಮ್ಯೂಸಿಕ್ ಆಲ್ಬಂ– ಗಲ್ಲಿ ಬಾಯ್ (ಝೋಯಾ ಆಖ್ತರ್ ಮತ್ತು ಅಕುರ್ ತಿವಾರಿ), ಕಬೀರ್ ಸಿಂಗ್ (ಮಿಥುನ್, ಅಮಲ್ ಮಲ್ಲಿಕ್, ವಿಶಾಲ್ ಮಿಶ್ರಾ, ಸಾಚೆತ್ ಪರಂಪರಾ ಮತ್ತು ಅಖಿಲ್ ಸಚ್‌ದೇವ್).

ಅತ್ಯುತ್ತಮ ಸಾಹಿತ್ಯ– ಡಿವೈನ್ ಮತ್ತು ಅಂಕುರ್ ತಿವಾರಿ (ಗಲ್ಲಿಬಾಯ್ ಚಿತ್ರದ ಅಪ್ನಾ ಟೈಂ ಆಯೇಗಾ), ಅತ್ಯುತ್ತಮ ಹಿನ್ನೆಲೆ ಗಾಯಕ– ಅರ್ಜಿತ್ ಸಿಂಗ್ (ಕಲಂಕ್ ನಹಿ), ಅತ್ಯುತ್ತಮ ಹಿನ್ನೆಲೆ ಗಾಯಕಿ– ಶಿಲ್ಪಾ ರಾವ್ (ಉರಿ).

ಉದಯೋನ್ಮುಖ ನಿರ್ದೇಶಕ– ಆದಿತ್ಯ ಧರ್ (ಉರಿ), ಉದಯೋನ್ಮುಖ ನಟ– ಅಭಿಮನ್ಯು ದಸ್ಸನಿ (ಮರ್ದ್‌ ಕೊ ದರ್ದ್‌ ನಹಿ ಹೋತಾ), ಉದ್ಯೋನ್ಮುಖ ನಟಿ– ಅನನ್ಯಾ ಪಾಂಡೆ (ಸ್ಟುಡೆಂಟ್ ಆಫ್ ದಿ ಇಯರ್ 2, ಅತಿ ಪತ್ನಿ ಔರ್), ಅತ್ಯುತ್ತಮ ಕಥೆ– ಆರ್ಟಿಕಲ್ 15 (ಅನುಭವ್ ಸಿನ್ಹಾ ಮತ್ತು ಗೌರವ್ ಸೋಲಂಕಿ), ಅತ್ಯುತ್ತಮ ಚಿತ್ರಕಥೆ– ಗಲ್ಲಿ ಬಾಯ್ (ರೀಮಾ ಕಾಗ್ತಿ ಮತ್ತು ಝೋಯಾ ಅಖ್ತರ್), ಅತ್ಯುತ್ತಮ ಸಂಭಾಷಣೆ– ಗಲ್ಲಿ ಬಾಯ್ (ವಿಜಯ್ ಮಯೂರ)

ಜೀವಮಾನ ಸಾಧನೆ ಪ್ರಶಸ್ತಿ– ರವೀಂದ್ರ ಸಿಪ್ಪಿ ಮತ್ತು ಗೋವಿಂದ, ಆರ್‌.ಬರ್ಮನ್ ಉದಯೋನ್ಮುಖ ಪ್ರತಿಭೆ ಪ್ರಶಸ್ತಿ– ಶಾಶ್ವತ್ ಸಚ್‌ದೇವ್ (ಉರಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.