ADVERTISEMENT

6 ಸಿನಿಮಾಗಳ ಬಿಡುಗಡೆ: ಚಂದನವನದ ತೆರೆಗಳಲ್ಲಿ ಸಿನಿ ಹಬ್ಬ

​ಪ್ರಜಾವಾಣಿ ವಾರ್ತೆ
Published 31 ಜನವರಿ 2025, 1:57 IST
Last Updated 31 ಜನವರಿ 2025, 1:57 IST
<div class="paragraphs"><p>&nbsp; ದೀಪಿಕಾ ದಾಸ್</p></div>

  ದೀಪಿಕಾ ದಾಸ್

   

ಇಂದು(ಜ.31) ಚಂದನವನದ ತೆರೆಗಳಲ್ಲಿ ಆರು ಸಿನಿಮಾಗಳು ತೆರೆಕಾಣುತ್ತಿವೆ. 

ಗಣ: ಪ್ರಜ್ವಲ್‌ ದೇವರಾಜ್‌ ನಟನೆ ಈ ಸಿನಿಮಾ ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ ಹೊಂದಿದೆ. ಆ ಎರಡು ಕಾಲಘಟ್ಟಕ್ಕೆ ಸೇತುವೆ ಆಗಿರುವುದು ಲ್ಯಾಂಡ್‌ಲೈನ್‌ ಫೋನ್.‌ ಒಮ್ಮೆ 1993ರ ಕಾಲಘಟ್ಟಕ್ಕೆ ಕಥೆ ಸಾಗಿದರೆ, ಇನ್ನೊಮ್ಮೆ ಪ್ರಸ್ತುತ ಸಂದರ್ಭದಲ್ಲಿ ಕಥೆ ಹೊರಳುತ್ತದೆ. ಹೀಗೆ ಟೈಮ್‌ ಟ್ರಾವೆಲಿಂಗ್‌ ಹಿನ್ನೆಲೆಯಲ್ಲಿ ಚಿತ್ರದ ಕಥಾಹಂದರವಿದೆ. ಪ್ರಜ್ವಲ್‌ಗೆ ಯಶಾ ಶಿವಕುಮಾರ್‌, ವೇದಿಕಾ ನಾಯಕಿಯರಾಗಿ ನಟಿಸಿದ್ದಾರೆ. ಪಾರ್ಥು ತಮ್ಮ ಚೆರಿ ಕ್ರಿಯೇಷನ್ಸ್ ಬ್ಯಾನರ್‌ ಮೂಲಕ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಹರಿಪ್ರಸಾದ್‌ ಜಕ್ಕ ಚಿತ್ರದ ನಿರ್ದೇಶಕರು. ಅನೂಪ್ ಸೀಳಿನ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಜೈ ಆನಂದ್ ಛಾಯಾಚಿತ್ರಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಸತೀಶ್ ಎ. ಕಲಾ ನಿರ್ದೇಶನ ಚಿತ್ರಕ್ಕಿದೆ. ಕೃಷಿ ತಾಪಂಡ, ವಿಶಾಲ್ ಹೆಗಡೆ, ರವಿ ಕಾಳೆ, ಸಂಪತ್ ರಾಜ್, ಶಿವರಾಜ್ ಕೆ.ಆರ್ ಪೇಟೆ, ರಮೇಶ್ ಭಟ್ ಮುಂತಾದವರು ತಾರಾಬಳಗದಲ್ಲಿದ್ದಾರೆ. 

ADVERTISEMENT

ನೋಡಿದವರು ಏನಂತಾರೆ: ನವೀನ್‌ ಶಂಕರ್‌ ನಟನೆಯ, ಕುಲದೀಪ್‌ ಕಾರಿಯಪ್ಪ ನಿರ್ದೇಶನದ ಚಿತ್ರವಿದು. ಸಿನಿಮಾದಲ್ಲಿ ‘ಸಿದ್ಧಾರ್ಥ್‌ ದೇವಯ್ಯ’ ಎಂಬ ಪಾತ್ರದ ಮುಖಾಂತರ ನವೀನ್‌ ಪ್ರೇಕ್ಷಕರೆದುರಿಗೆ ಬರಲಿದ್ದಾರೆ. ಭಿನ್ನವಾದ ಭಾವನಾತ್ಮಕ ಕಥೆಯೊಂದು ಚಿತ್ರದಲ್ಲಿದೆ. ಚಿತ್ರವನ್ನು ನಾಗೇಶ್ ಗೋಪಾಲ್ ನಿರ್ಮಾಣ ಮಾಡಿದ್ದಾರೆ. ಅಪೂರ್ವ ಭಾರದ್ವಾಜ್ ನಾಯಕಿಯಾಗಿ ನಟಿಸಿದ್ದಾರೆ. ಮಯೂರೇಶ್ ಅಧಿಕಾರಿ ಸಂಗೀತ ಸಂಯೋಜನೆ, ಅಶ್ವಿನ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. ಕುಲದೀಪ್ ಬರೆದ ಕಥೆ ಮತ್ತು ಚಿತ್ರಕಥೆಗೆ ಸಾಯಿ ಶ್ರೀನಿಧಿ, ಪ್ರಜ್ವಲ್ ರಾಜ್ ಮತ್ತು ಸುನಿಲ್ ವೆಂಕಟೇಶ್ ಸಂಭಾಷಣೆ ಬರೆದಿದ್ದಾರೆ.

ಬೇಗೂರು ಕಾಲೋನಿ: ‘ಬಿಗ್‌ಬಾಸ್‌’ ಖ್ಯಾತಿಯ ರಾಜೀವ ಹನು ಅಭಿನಯದ ಚಿತ್ರವಿದು. ಫ್ಲೈಯಿಂಗ್‌ ಕಿಂಗ್‌ ಮಂಜು ನಿರ್ದೇಶನದ ಈ ಚಿತ್ರ ಹೋರಾಟದ ಕಥೆಯಾಗಿದೆ. ಕಾಲೋನಿಯಲ್ಲಿರುವ ಮಧ್ಯಮವರ್ಗದ ಜನರ ಕಥೆಯೂ ಆಗಿದೆ. ಹೋರಾಟ ನಡೆಯುವುದು ಆಟದ ಮೈದಾನಕ್ಕಾಗಿ. ಮೈದಾನಗಳೆಲ್ಲಾ ಮನೆಗಳಾಗುತ್ತಿವೆ. ಮಕ್ಕಳಿಗೆ ಆಡಲು ಜಾಗವಿಲ್ಲ.‌ ಈ ಅಂಶವನ್ನು ಪ್ರಮುಖವಾಗಿಟ್ಟುಕೊಂಡು ಕಥೆ ಹೆಣೆಯಲಾಗಿದೆ ಎಂದಿದೆ ಚಿತ್ರತಂಡ. ‘ರಾಘವ’ ಎಂಬ ಪಾತ್ರದಲ್ಲಿ ರಾಜೀವ ನಟಿಸಿದ್ದಾರೆ. ಶ್ರೀಮಾ ಸಿನಿಮಾಸ್ ಲಾಂಛನದಲ್ಲಿ ಎಂ. ಶ್ರೀನಿವಾಸ್ ಬಾಬು ಚಿತ್ರ ನಿರ್ಮಿಸಿದ್ದಾರೆ. ಪಲ್ಲವಿ ಪರ್ವ, ಕೀರ್ತಿ ಭಂಡಾರಿ, ಪೋಸಾನಿ ಕೃಷ್ಣ ಮುಂತಾದವರು ತಾರಾಬಳಗದಲ್ಲಿದ್ದಾರೆ. 

ಪಾರು ಪಾರ್ವತಿ: ‘ಬಿಗ್‌ಬಾಸ್‌’ ಖ್ಯಾತಿಯ ದೀಪಿಕಾ ದಾಸ್ ಅಭಿನಯದ ಈ ಚಿತ್ರವನ್ನು ರೋಹಿತ್‌ ಕೀರ್ತಿ ನಿರ್ದೇಶಿಸಿದ್ದಾರೆ. 1836 ಪಿಕ್ಚರ್ಸ್‌ ಲಾಂಛನದಲ್ಲಿ ಪಿ.ಬಿ. ಪ್ರೇಂನಾಥ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ದೀಪಿಕಾ ದಾಸ್, ಪೂನಂ ಸರ್‌ನಾಯಕ್‌ ಹಾಗೂ ಫವಾಜ್ ಅಶ್ರಫ್ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಅಡ್ವೆಂಚರ್‌ ಕಾಮಿಡಿ ಜಾನರ್‌ನಲ್ಲಿ ಈ ಚಿತ್ರದ ಕಥಾಹಂದರವಿದ್ದು, ಬೆಂಗಳೂರು, ಗೋವಾ, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಉತ್ತರಾಖಂಡ್‌ನಲ್ಲಿ ಚಿತ್ರೀಕರಣ ನಡೆದಿದೆ. ಅಬಿನ್ ರಾಜೇಶ್ ಛಾಯಾಚಿತ್ರಗ್ರಹಣ, ಆರ್. ಹರಿ ಸಂಗೀತ ನಿರ್ದೇಶನ ಹಾಗೂ ಸಿ.ಕೆ.ಕುಮಾರ ಸಂಕಲನ ಚಿತ್ರಕ್ಕಿದೆ.

ಕಾಡುಮಳೆ: ಕಾಸ್ಮೋಸ್‌ ಮೂವೀಸ್‌ ನಿರ್ಮಾಣದ, ಸಮರ್ಥ ನಿರ್ದೇಶನದ ಚಿತ್ರ ಇದಾಗಿದೆ. ಹರ್ಷನ್‌, ಸಂಗೀತ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ಭ್ರಮೆ ಮತ್ತು ವಾಸ್ತವದ ಹೋರಾಟವೇ ಈ ‘ಕಾಡುಮಳೆ’. ಭೂಮಿ ಮೇಲೆ ಖಂಡಗಳು, ಸಮುದ್ರಗಳು, ಸ್ವರಗಳು, ವಾರ ಎಲ್ಲವೂ ಏಳು. ಇದನ್ನೇ ಆಧಾರವಾಗಿಟ್ಟುಕೊಂಡು ಮಾಡಿರುವ ಸಿನಿಮಾವಿದು ಎಂದಿದೆ ಚಿತ್ರತಂಡ. ಕೆಆರ್‌ಜಿ ಈ ಸಿನಿಮಾದ ವಿತರಣೆ ಮಾಡುತ್ತಿದೆ. ರಾಜು ಎನ್ ಎಂ ಅವರ ಛಾಯಾಚಿತ್ರಗ್ರಹಣ, ಮಹಾರಾಜ ಸಂಗೀತ ಚಿತ್ರಕ್ಕಿದೆ. 

ರಾವುತ:  ರಾಜ್ ಪ್ರವೀಣ್, ಭವಾನಿ ಪುರೋಹಿತ್ ನಟನೆಯ ಈ ಸಿನಿಮಾವನ್ನು ಸಿದ್ದು ವಜ್ರಪ್ಪ ನಿರ್ದೇಶಿಸಿದ್ದಾರೆ. ಶ್ರೀ ವಿಶ್ವಕರ್ಮ ಸಿನಿಮಾಸ್ ಬ್ಯಾನರ್‌ನಡಿ ಈ ಚಿತ್ರವನ್ನು ಈರಣ್ಣ ಶುಭಾಷ್‌ ಬಡಿಗೇರ ನಿರ್ಮಾಣ ಮಾಡಿದ್ದಾರೆ. ನಿರ್ಮಾಪಕ ಜಾಕ್ ಮಂಜು ಅವರ ಶಾಲಿನಿ ಆರ್ಟ್ಸ್ ಸಂಸ್ಥೆಯ ಮುಖಾಂತರ ರಾಜ್ಯದಾದ್ಯಂತ ಚಿತ್ರ ಬಿಡುಗಡೆಗೊಳ್ಳುತ್ತಿದೆ. 

ಅಪೂರ್ವ ಭಾರದ್ವಾಜ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.