ADVERTISEMENT

ವರಮಹಾಲಕ್ಷ್ಮಿ ಹಬ್ಬಕ್ಕೆ ಕುರುಕ್ಷೇತ್ರ– ಪೈಲ್ವಾನ್‌ ಮುಖಾಮುಖಿ

ಚೀನಿ ಭಾಷೆಗೂ ‘ಕುರುಕ್ಷೇತ್ರ’ ಸಿನಿಮಾ ಡಬ್ಬಿಂಗ್‌

​ಪ್ರಜಾವಾಣಿ ವಾರ್ತೆ
Published 20 ಮೇ 2019, 9:51 IST
Last Updated 20 ಮೇ 2019, 9:51 IST
‘ಕುರುಕ್ಷೇತ್ರ’ ಚಿತ್ರದಲ್ಲಿ ದರ್ಶನ್, ‘ಪೈಲ್ವಾನ್‌’ ಚಿತ್ರದಲ್ಲಿ ಸುದೀಪ್
‘ಕುರುಕ್ಷೇತ್ರ’ ಚಿತ್ರದಲ್ಲಿ ದರ್ಶನ್, ‘ಪೈಲ್ವಾನ್‌’ ಚಿತ್ರದಲ್ಲಿ ಸುದೀಪ್   

‘ಚಾಲೆಂಜಿಂಗ್‌ ಸ್ಟಾರ್’ ದರ್ಶನ್‌ ನಟನೆಯ ‘ಕುರುಕ್ಷೇತ್ರ’ ಚಿತ್ರ ಆಗಸ್ಟ್‌ 9ರಂದು ಮತ್ತು ಕಿಚ್ಚ ಸುದೀಪ್‌ ನಟನೆಯ ‘ಪೈಲ್ವಾನ್‌’ ಸಿನಿಮಾ ಆಗಸ್ಟ್‌ 8ರಂದು ಬಿಡುಗಡೆಯಾಗಲಿದ್ದು, ಸ್ಯಾಂಡಲ್‌ವುಡ್‌ನ ಗಲ್ಲಾಪೆಟ್ಟಿಗೆಯಲ್ಲಿ ಮತ್ತೊಮ್ಮೆ ಸ್ಟಾರ್‌ವಾರ್‌ಗೆ ಅಖಾಡ ಸಿದ್ಧವಾಗಿದೆ.

ನಾಗಣ್ಣ ನಿರ್ದೇಶನದ ‘ಕುರುಕ್ಷೇತ್ರ’ ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲಯಾಳ ಭಾಷೆಯಲ್ಲಿ 2D ಮತ್ತು 3Dಯಲ್ಲಿ ತೆರೆ ಕಾಣಲಿದೆ. ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ. ‘ಪೈಲ್ವಾನ್‌’ ಕೂಡ ಎಂಟು ಭಾಷೆಯಲ್ಲಿ ತೆರೆಕಾಣುತ್ತಿದೆ ಎನ್ನಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ‘ಕುರುಕ್ಷೇತ್ರ’ ಸಿನಿಮಾದ ನಿರ್ಮಾಪಕ ಮುನಿರತ್ನ, ‘ಈಗಾಗಲೇ, ಕುರುಕ್ಷೇತ್ರ ಚಿತ್ರದ ಬಿಡುಗಡೆಗೆ ಸಾಕಷ್ಟು ವಿಳಂಬವಾಗಿದೆ. ಅಭಿಮಾನಿಗಳ ತಾಳ್ಮೆಗೆ ನಾನು ಮತ್ತೊಷ್ಟು ಸವಾಲು ಒಡ್ಡುವುದಿಲ್ಲ. ವರಮಹಾಲಕ್ಷ್ಮಿ ಹಬ್ಬದಂದು ವಿಶ್ವದಾದ್ಯಂತ ಏಕಕಾಲಕ್ಕೆ ಚಿತ್ರ ಬಿಡುಗಡೆಯಾಗುವುದು ನಿಶ್ಚಿತ’ ಎನ್ನುತ್ತಾರೆ.

ADVERTISEMENT

‘ಪೈಲ್ವಾನ್‌’ ಚಿತ್ರದ ಬಿಡುಗಡೆ ಸಂಬಂಧ ಅವರು ಪ್ರತಿಕ್ರಿಯಿಸುವುದು ಹೀಗೆ: ‘ಪ್ರಸ್ತುತ ಒಂದು ವಾರಕ್ಕೆ ಐದು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇಲ್ಲಿ ದೊಡ್ಡದು ಅಥವಾ ಚಿಕ್ಕ ಸಿನಿಮಾ ಎನ್ನುವ ಪ್ರಶ್ನೆ ಉದ್ಭವಿಸುವುದಿಲ್ಲ. ಎರಡು ಸಿನಿಮಾವನ್ನು ತಡೆದುಕೊಳ್ಳುವ ಶಕ್ತಿ ಸ್ಯಾಂಡಲ್‌ವುಡ್‌ಗೆ ಇದೆ’ ಎಂದು ಉತ್ತರಿಸಿದರು.

‘ನಾವೆಲ್ಲರೂ ಒಂದೇ ಮನೆಯವರು. ಒಂದೇ ತಾಯಿಯ ಮಕ್ಕಳಿದ್ದಂತೆ. ಇಲ್ಲಿ ಯಾವ ಭೇದಭಾವವೂ ಇಲ್ಲ. ದರ್ಶನ್‌ ಮತ್ತು ಸುದೀಪ್‌ಗೆ ತಮ್ಮದೇ ಆದ ಅಭಿಮಾನಿ ಬಳಗವಿದೆ. ಹಾಗಾಗಿ, ಯಾವುದೇ ತೊಂದರೆಯಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಚೀನಿ ಭಾಷೆಗೂ ‘ಕುರುಕ್ಷೇತ್ರ’ ಡಬ್ಬಿಂಗ್

ಚೀನಿ ಭಾಷೆಗೂ ಕುರುಕ್ಷೇತ್ರ ಚಿತ್ರವನ್ನು ಡಬ್ಬಿಂಗ್‌ ಮಾಡಲಾಗುವುದು. ಕೇರಳದ ಜೀ ಮೂನ್‌ ಎಂಬುವರು ಡಬ್ಬಿಂಗ್‌ ಮಾಡಲು ಮುಂದೆ ಬಂದಿದ್ದಾರೆ. ಇನ್ನೂ ಮೂರು ಭಾಷೆಗೆ ಡಬ್ಬಿಂಗ್ ಮಾಡುವ ಬಗ್ಗೆ ಮಾತುಕತೆ ನಡೆದಿದೆ. ಅವರೊಟ್ಟಿಗೆ ಮಾತುಕತೆ ಇನ್ನೂ ಅಂತಿಮಗೊಂಡಿಲ್ಲ ಎಂದರು ಮುನಿರತ್ನ.

‘ಇತ್ತೀಚೆಗೆ ಮಾಲ್ಡೀವ್‌ನ ಸ್ನೇಹಿತರೊಬ್ಬರು ನನಗೆ ಸಿಕ್ಕಿದ್ದರು. ಅವರು ಮಾಲ್ಡೀವ್‌ನಲ್ಲಿ ‘ಕೆ.ಜಿ.ಎಫ್‌’ ಚಿತ್ರ ಬಿಡುಗಡೆಯಾದ ಎರಡು ದಿನದಲ್ಲಿ ಈ ಸಿನಿಮಾದ ಹಿಂದಿ ಅವತರಣಿಕೆಯನ್ನು ವೀಕ್ಷಿಸಿದರಂತೆ. ಸಿನಿಮಾ ಬಗ್ಗೆ ಮೆಚ್ಚುಗೆಯಿಂದ ಮಾತನಾಡಿದರು. ಪ್ರಸ್ತುತ ಕನ್ನಡ ಚಿತ್ರಗಳು ವಿಶ್ವದ ಗಮನ ಸೆಳೆಯುತ್ತಿವೆ. ಇದು ಕನ್ನಡ ಚಿತ್ರರಂಗದ ದೊಡ್ಡ ಸಾಧನೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.