ADVERTISEMENT

ಕಾಪಿ ರೈಟ್‌ ಉಲ್ಲಂಘನೆ ಆರೋಪ: ನಟ ರಕ್ಷಿತ್ ಶೆಟ್ಟಿ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 14:49 IST
Last Updated 15 ಜುಲೈ 2024, 14:49 IST
ರಕ್ಷಿತ್ ಶೆಟ್ಟಿ
ರಕ್ಷಿತ್ ಶೆಟ್ಟಿ   

ಬೆಂಗಳೂರು: ಕಾಪಿ ರೈಟ್‌ ಉಲ್ಲಂಘನೆ ಆರೋಪದಡಿ ಪರಂವಃ ಸ್ಟುಡಿಯೋಸ್‌ ಪ್ರೈವೆಟ್‌ ಲಿಮಿಟೆಡ್‌ ಹಾಗೂ ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ನ್ಯಾಯ ಎಲ್ಲಿದೆ’ ಚಿತ್ರದ ‘ನ್ಯಾಯ ಎಲ್ಲಿದೆ..’ ಹಾಡು ಮತ್ತು ‘ಗಾಳಿ ಮಾತು’ ಚಿತ್ರದ ‘ಒಮ್ಮೆ ನಿನ್ನನ್ನು’ ಹಾಡನ್ನು ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ಅನಧಿಕೃತವಾಗಿ ಬಳಕೆ ಮಾಡಲಾಗಿದೆ. ಹಕ್ಕುಸ್ವಾಮ್ಯ ಹಾಗೂ ಪ್ರಸಾರದ ಹಕ್ಕು ಅನ್ನು ಖರೀದಿ ಮಾಡದೇ ಹಾಡುಗಳ ಬಳಕೆಯಾಗಿದೆ’ ಎಂದು ಎಂಆರ್‌ಟಿ ಮ್ಯೂಸಿಕ್ ಪಾಲುದಾರರಾಗಿರುವ ನವೀನ್ ಕುಮಾರ್ ದೂರಿನಲ್ಲಿ ಆರೋಪಿಸಿದ್ದಾರೆ. 

‘2024ರ ಜನವರಿಯಲ್ಲಿ ಚಿತ್ರದ ಹಾಡುಗಳ ಬಳಕೆಗೆ ಸಂಬಂಧಿಸಿದಂತೆ ರಾಜೇಶ್ ಎಂಬವರ ಮೂಲಕ ಮಾತುಕತೆಯಾಗಿತ್ತು. ಆದರೆ, ಈ ಸಿನಿಮಾದ ಹಾಡಿನ ಬಳಕೆ ಬಗ್ಗೆ ಮಾತುಕತೆ ಸರಿ ಹೊಂದದ ಕಾರಣ ಅಲ್ಲಿಗೆ ನಿಲ್ಲಿಸಲಾಗಿತ್ತು. ಬಳಿಕ ಮಾರ್ಚ್‌ನಲ್ಲಿ ಒಟಿಟಿಯಲ್ಲಿ ರಕ್ಷಿತ್ ಶೆಟ್ಟಿ ಅವರ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾ ನೋಡಿದಾಗ ಎರಡು ಚಿತ್ರಗಳ ಹಾಡು ಬಳಸಲಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ. 

ADVERTISEMENT

ಅನುಮತಿ ಇಲ್ಲದೆ ಹಾಡುಗಳನ್ನು ಬಳಸಿಕೊಂಡು ಕಂಪನಿಗೆ ಮೋಸ ಮಾಡಿದ್ದಾರೆ. ಹಾಗಾಗಿ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. 

ಎಂಆರ್‌ಟಿ ಮ್ಯೂಸಿಕ್, ಸಿನಿಮಾದ ಹಾಡು, ಆಲ್ಬಂ ಹಾಡು ಹಾಗೂ ಇತ್ಯಾದಿ ಹಾಡುಗಳ ಹಕ್ಕುಸ್ವಾಮ್ಯ ಹಾಗೂ ಪ್ರಸರಣದ ಹಕ್ಕು ಖರೀದಿ ಮಾಡಿ ಪ್ರಸಾರ ಮಾಡುವ ಕಂಪನಿಯಾಗಿದೆ.

‘ಪ್ರಕರಣ ಕುರಿತು ವಿಚಾರಣೆಗೆ ಹಾಜರಾಗುವಂತೆ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಸಿನಿಮಾ ಚಿತ್ರೀಕರಣ ಸಂಬಂಧ ಹೊರ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ಇದ್ದಾರೆ. ಅವರು ಬೆಂಗಳೂರಿಗೆ ಬಂದ ಬಳಿಕ ಹಾಜರಾಗುವುದಾಗಿ ಹೇಳಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.  

ಹಿಂದೆಯೂ ದೂರು: 2016ರ ಡಿಸೆಂಬರ್ 30ರಂದು ಬಿಡುಗಡೆ ಆದ ‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ‘ಹೇಯ್‌ ಹೂ ಆರ್‌ ಯೂ’ ಹಾಡನ್ನು ಲಹರಿ ಸಂಸ್ಥೆಯ ಅನುಮತಿ ಇಲ್ಲದೆ ಬಳಸಲಾಗಿತ್ತು. ‘ಶಾಂತಿ ಕ್ರಾಂತಿ’ ಚಿತ್ರದ ಹಾಡನ್ನು ಚಿತ್ರದಲ್ಲಿ ಬಳಸಿಕೊಂಡಿದ್ದರಿಂದ ಲಹರಿ ಸಂಸ್ಥೆ 2017ರ ಜ. 11ರಂದು ದೂರು ದಾಖಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.