ADVERTISEMENT

ಸಲ್ಮಾನ್‌ ಖಾನ್‌ಗೆ ಪಂಚೆ, ಲುಂಗಿ ನಡುವಿನ ವ್ಯತ್ಯಾಸ ತಿಳಿಸಿದ ಮಾಜಿ ಕ್ರಿಕೆಟಿಗ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಏಪ್ರಿಲ್ 2023, 6:04 IST
Last Updated 9 ಏಪ್ರಿಲ್ 2023, 6:04 IST
   

ಇತ್ತೀಚೆಗೆ ಬಿಡುಗಡೆಯಾದ ಸಲ್ಮಾನ್‌ ಖಾನ್‌ ಹೊಸ ಚಿತ್ರದ ‘ಯೆಂಟಮ್ಮ‘ ಹಾಡಿಗೆ ಮಾಜಿ ಕ್ರಿಕೆಟಿಗ ಲಕ್ಷ್ಮಣ್‌ ಶಿವರಾಮಕೃಷ್ಣನ್‌ ಆಕ್ಷೇಪ ವ್ಯಕ್ತಪಡಿಸಿದ್ದು, ದಕ್ಷಿಣ ಭಾರತದ ಸಾಂಪ್ರಾದಾಯಿಕ ಉಡುಗೆ ಪಂಚೆಯನ್ನು ಕೀಳುಮಟ್ಟದಲ್ಲಿ ತೋರಿಸಲಾಗಿದೆ ಎಂದು ಹೇಳಿದ್ದಾರೆ. ‘ಪಂಚೆ ಮತ್ತು ಲುಂಗಿ‘ ನಡುವಿನ ವ್ಯತ್ಯಾಸದ ಬಗ್ಗೆ ಸಲ್ಮಾನ್‌ ಖಾನ್‌ಗೆ ಪಾಠ ಮಾಡಿದ್ದಾರೆ.

ನಾಲ್ಕು ದಿನದ ಹಿಂದೆ ಸಲ್ಮಾನ್ ಖಾನ್ ನಟನೆಯ ಬಹು ನಿರೀಕ್ಷಿತ ಚಿತ್ರ 'ಕೀಸಿ ಕಾ ಬಾಯಿ ಕಿಸಿ ಕೀ ಜಾನ್‌ ‘ ಚಿತ್ರದ ‘ಯೆಂಟಮ್ಮ‘ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಹಾಡಿನಲ್ಲಿ ಸಲ್ಮಾನ್ ಖಾನ್ ಜೊತೆ ತೆಲುಗು ನಟರಾದ ರಾಮ್ ಚರಣ ತೇಜ‌ ಮತ್ತು ವಿಕ್ಟರಿ ವೆಂಕಟೇಶ್ ‌ಕಾಣಿಸಿಕೊಂಡಿದ್ದಾರೆ. ಪಂಚೆಯುಟ್ಟು ಪಕ್ಕಾ ಸೌತ್ ಸ್ಟೈಲ್‌ನಲ್ಲಿ ಈ ಮೂವರು ಸಿನಿಮಾ ದಿಗ್ಗಜರು ಹಾಡಿಗೆ ಹೆಜ್ಜೆ ಹಾಕಿದ್ದರು.

ಸಲ್ಮಾನ್‌ ಖಾನ್‌ಅನ್ನು ದಕ್ಷಿಣ ಭಾರತದ ಸಾಂಪ್ರಾದಾಯಿಕ ಉಡುಗೆಯಲ್ಲಿ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ, ಈ ಹಾಡಿಗೆ ಮಾಜಿ ಕ್ರಿಕೆಟಿಗ ಲಕ್ಷ್ಮಣ್‌ ಶಿವರಾಮಕೃಷ್ಣನ್‌ ಆಕ್ಷೇಪ ವ್ಯಕ್ತಪಡಿಸಿದ್ಧಾರೆ. ‘ಪಂಚೆ ಮತ್ತು ಲುಂಗಿಯ ನಡುವೆ ವ್ಯತ್ಯಾಸವಿದೆ. ಸಲ್ಮಾನ್‌ ಹಾಡಿನಲ್ಲಿ ಹಾಕಿರುವುದು ಪಂಚೆಯೇ ವಿನಃ ಲುಂಗಿಯಲ್ಲ. ದಕ್ಷಿಣ ಭಾರತದ ಸಾಂಪ್ರಾದಾಯಿಕ ಉಡುಗೆಯಾದ ಪಂಚೆಗೆ ತನ್ನದೆಯಾದ ಘನತೆಯಿದೆ. ಹಾಡಿನಲ್ಲಿ ಪಂಚೆಯನ್ನು ಅಸಹ್ಯಕರವಾಗಿ ಬಿಂಬಿಸಲಾಗಿದೆ. ದಕ್ಷಿಣ ಸಂಸ್ಕೃತಿಯನ್ನು ಕೀಳುಮಟ್ಟದಲ್ಲಿ ಪ್ರದರ್ಶಿಸಲಾಗಿದೆ. ಇಂತಹ ಚಿತ್ರವನ್ನು ಬಹಿಷ್ಕರಿಸಬೇಕಾಗಿದೆ‘ ಎಂದು ಟ್ವೀಟ್‌ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಪಂಚೆ ಮತ್ತು ಲುಂಗಿಯ ಪೋಟೊಗಳನ್ನು ಹಂಚಿಕೊಂಡು ಅವುಗಳ ನಡುವಿನ ವ್ಯತ್ಯಾಸವನ್ನು ಚಿತ್ರತಂಡಕ್ಕೆ ತಿಳಿಸಿದ್ದಾರೆ.

ADVERTISEMENT

‘ಈ ಹಾಡನ್ನು ದೇವಸ್ಥಾನವೊಂದರಲ್ಲಿ ಚಿತ್ರೀಕರಣ ಮಾಡಿದ್ದು. ದೇವಸ್ಥಾನದೊಳಗೆ ಚಪ್ಪಲಿ ಧರಿಸಿಯೇ ಹಾಡಿಗೆ ನೃತ್ಯ ಮಾಡಲಾಗಿದೆ. ಇದು ಹಾಸ್ಯಾಸ್ಪದವಾಗಿ ಕಾಣಿಸುತ್ತಿದೆ‘ ಎಂದು ಇನ್ನೊಬ್ಬ ಟ್ವೀಟಿಗರು ಲಕ್ಷ್ಮಣ್‌ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಲಕ್ಷ್ಮಣ್‌ ಶಿವರಾಮಕೃಷ್ಣನ್‌ ಅವರ ಟ್ವೀಟ್‌ಗೆ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

ಯೆಂಟಮ್ಮ ಹಾಡನ್ನು ತೆಲುಗು ಮತ್ತು ಹಿಂದಿ ಸಾಹಿತ್ಯವನ್ನು ಬೆರೆಸಿ ರಚಿಸಲಾಗಿದೆ. ಈ ಹಾಡಿನ ಸಂಯೋಜನೆಯನ್ನು ಪಾಯಲ್‌ ದೇವ್‌ ಮಾಡಿದ್ದಾರೆ. ಈ ಹಾಡಿಗೆ ಸಾಹಿತ್ಯವನ್ನು ಶಬ್ಬೀರ್‌ ಅಹಮ್ಮದ್‌ ರಚನೆ ಮಾಡಿದ್ದು, ವಿಶಾಲ್ ದದ್ಲಾನಿ ಮತ್ತು ಪಾಯಲ್ ದೇವ್ ಹಾಡಿದ್ದಾರೆ. ಜಾನಿ ಮಾಸ್ಟರ್‌ ನೃತ್ಯ ನಿರ್ದೇಶನ ಮಾಡಿದ್ದಾರೆ. ಫಹಾದ್ ಸಬ್ಜಿ ನಿರ್ದೇಶನದ ಈ ಚಿತ್ರ ಪ್ರಿಲ್‌ 21ಕ್ಕೆ ತೆರೆ ಮೇಲೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.