ADVERTISEMENT

ಇಂದು ಚಂದನವನದ ನಾಲ್ಕು ಸಿನಿಮಾಗಳು ಬಿಡುಗಡೆ

ಪ್ರಜಾವಾಣಿ ವಿಶೇಷ
Published 21 ಜೂನ್ 2024, 0:20 IST
Last Updated 21 ಜೂನ್ 2024, 0:20 IST
   

ಇಂದು (ಜೂನ್‌ 21) ಚಂದನವನದ ತೆರೆಗಳಲ್ಲಿ ನಾಲ್ಕು ಸಿನಿಮಾಗಳು ಬಿಡುಗಡೆಯಾಗುತ್ತಿವೆ. 

ದೇಸಾಯಿ

‘ಲವ್ 360’ ಖ್ಯಾತಿಯ ಪ್ರವೀಣ್ ಕುಮಾರ್ ಅಭಿನಯದ ಚಿತ್ರ ಇದಾಗಿದೆ. ವೀರಭದ್ರೇಶ್ವರ ಕ್ರಿಯೇಟಿವ್ ಫಿಲಂಸ್ ಲಾಂಛನದಲ್ಲಿ ಮಹಾಂತೇಶ ವಿ. ಚೋಳಚಗುಡ್ಡ ಕಥೆ ಬರೆದು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನಾಗಿರೆಡ್ಡಿ ಭಡ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ‘ದೇಸಾಯಿ’ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರವಾಗಿದೆ. ಉತ್ತರ ಕರ್ನಾಟಕದ ಶೈಲಿಯಲ್ಲಿ ಮೂಡಿಬಂದಿರುವ ಈ ಚಿತ್ರದ ಚಿತ್ರೀಕರಣ ಬಾದಾಮಿ, ಬಾಗಲಕೋಟೆ ಮುಂತಾದ ಕಡೆ ನಡೆದಿದೆ. ಪ್ರವೀಣ್ ಕುಮಾರ್‌ಗೆ ಜೋಡಿಯಾಗಿ ಮೈಸೂರಿನ ರಾಧ್ಯ ನಟಿಸಿದ್ದಾರೆ. ‘ಒರಟ’ ಪ್ರಶಾಂತ್, ಚೆಲುವರಾಜು, ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ, ನಟನ ಪ್ರಶಾಂತ್, ಮಂಜುನಾಥ್ ಹೆಗಡೆ, ಸೃಷ್ಟಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಾಗಿರೆಡ್ಡಿ ಅವರಿಗೆ ಇದು ಚೊಚ್ಚಲ ನಿರ್ದೇಶನದ ಚಿತ್ರ. ನಿರ್ಮಾಪಕ ಮಹಾಂತೇಶ್ ಅವರಿಗೂ ‘ದೇಸಾಯಿ’ ಮೊದಲ ನಿರ್ಮಾಣದ ಚಿತ್ರ.

ADVERTISEMENT

ಚಿಲ್ಲಿ ಚಿಕನ್

ಬೆಂಗಳೂರಿನ ಚೈನೀಸ್ ಹೋಟೆಲ್‌ನಲ್ಲಿ ನಡೆಯುವ ಘಟನೆಗಳ ಸುತ್ತ ಸಾಗುವ ಚಿತ್ರವಿದು. ಮೆಟನೋಯ್ ಸ್ಟುಡಿಯೋಸ್ ಪ್ರೊಡಕ್ಷನ್ ಅಡಿಯಲ್ಲಿ ದೀಪ್ ಭೀಮಜಿಯಾನಿ ಮತ್ತು ಸುಧಾ ನಂಬಿಯಾರ್ ಅವರು ನಿರ್ಮಿಸಿರುವ ಚಿತ್ರಕ್ಕೆ ಪ್ರತೀಕ್ ಪ್ರಜೋಶ್ ಅವರ ನಿರ್ದೇಶನವಿದೆ.

‘ಇದು ಬಹುತೇಕ ಹೊಸ ಕಲಾವಿದರಿಂದ ಕೂಡಿದ ಚಿತ್ರ. ಕೆಲಸಕ್ಕೆಂದು ಉತ್ತರ ಭಾರತದಿಂದ ಬಂದ ಐದು ಹುಡುಗರು ಬೆಂಗಳೂರಿನಲ್ಲಿ ಚೈನೀಸ್ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತ, ತಾವೇ ಸ್ವಂತ ಹೋಟೆಲ್ ತೆರೆಯಲು ಮುಂದಾಗುತ್ತಾರೆ. ಅನಿರೀಕ್ಷಿತ ಘಟನೆಯೊಂದು ಇವರ ಪ್ರಯತ್ನಕ್ಕೆ ಅಡ್ಡಿಯಾಗುತ್ತದೆ. ಕೊನೆಗೆ ಅದೆಲ್ಲದರಿಂದ ಪಾರಾಗಿ ಗೆಲ್ಲುತ್ತಾರಾ, ಇಲ್ಲವೇ? ಎಂಬುದೇ ಚಿತ್ರದ ಕಥೆ’ ಎನ್ನುತ್ತಾರೆ ನಿರ್ದೇಶಕರು.

ಸಿದ್ಧಾಂತ್ ಸುಂದರ್ ಸಂಗೀತ, ಶ್ರೀಶ್ ತೋಮರ್ ಛಾಯಾಚಿತ್ರಗ್ರಹಣ, ಆಶಿಕ್ ಕೆ.ಎಸ್ ಅವರ ಸಂಕಲನ ಚಿತ್ರಕ್ಕಿದೆ. ಬಿ.ವಿ.ಶೃಂಗಾ, ರಿನಿ, ನಿತ್ಯಶ್ರೀ, ಬಿಜೌ ತಾಂಜಿಂ ಮುಂತಾದವರು ತಾರಾಗಣದಲ್ಲಿದ್ದಾರೆ. 

ರಮೇಶ್ ಸುರೇಶ್

ಬಹುತೇಕ ಹೊಸಬರಿಂದಲೇ ಕೂಡಿರುವ ‘ರಮೇಶ್ ಸುರೇಶ್’ ಈ ವಾರ ತೆರೆ ಕಾಣುತ್ತಿರುವ ಮತ್ತೊಂದು ಚಿತ್ರ. ಆರ್‌.ಕೆ ಟಾಕೀಸ್ ಲಾಂಛನದಲ್ಲಿ ಪಿ.ಕೃಷ್ಣ ಹಾಗೂ ಬಿ.ಶಂಕರ್ ಅವರು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ನಾಗರಾಜ್ ಮಲ್ಲಿಗೇನಹಳ್ಳಿ ಹಾಗೂ ರಘುರಾಜ್ ಗೌಡ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. 

ಗುಬ್ಬಿ ವೀರಣ್ಣ ಕುಟುಂಬದ ಬೆನಕ ಹಾಗೂ ಯಶು ರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಇದೊಂದು ಕಾಮಿಡಿ ಜಾನರ್‌ನ ಚಿತ್ರವಾದರೂ ಉತ್ತಮ ಸಂದೇಶವಿದೆ. ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ’ ಎನ್ನುತ್ತಾರೆ ನಿರ್ದೇಶಕರು. ಚಂದನ ಸೇಗು ಈ ಚಿತ್ರದ ನಾಯಕಿ. ಸಾಧು ಕೋಕಿಲ, ಬಹುಭಾಷಾ ನಟ ಸತ್ಯಪ್ರಕಾಶ್, ನೀನಾಸಂ ರಂಗನಾಥ್, ಉಮಾ ಮುಂತಾದವರು ತಾರಾಗಣದಲ್ಲಿದ್ದಾರೆ. 

ಸಂಭವಾಮಿ ಯುಗೇ ಯುಗೇ

ಯುವಕರು ಹಳ್ಳಿಗಳಲ್ಲೇ ಇದ್ದು ಕೆಲಸ ಮಾಡಬೇಕು ಎಂಬ ಸಂದೇಶ ಹೊತ್ತುಬಂದಿದೆ ಈ ಸಿನಿಮಾ. ರಾಜಲಕ್ಷ್ಮಿ ಎಂಟರ್‌ಟೈನ್‌ಮೆಂಟ್‌ ಲಾಂಛನದಲ್ಲಿ ಪ್ರತಿಭಾ ನಿರ್ಮಿಸಿರುವ ಚಿತ್ರಕ್ಕೆ ಚೇತನ್ ಚಂದ್ರಶೇಖರ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

ಹೊಸಬರಾದ ಜಯ್ ಶೆಟ್ಟಿ - ನಿಶಾ ರಜಪೂತ್ ಹಾಗೂ ಮಧುರಾಗೌಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ‘ಚಿತ್ರದಲ್ಲಿ ಕೃಷ್ಣ ಹಾಗೂ ಅರ್ಜುನನನ್ನು ಹೋಲುವ ಪಾತ್ರಗಳು ಇವೆ. ಮಂಡ್ಯ, ಚನ್ನಪಟ್ಟಣ, ರಾಮನಗರ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ. ಹಳ್ಳಿಯ ಹುಡುಗರು ವಿದ್ಯಾವಂತರಾದ ಮೇಲೆ, ಕೆಲಸದ ನಿಮಿತ್ತ ಪಟ್ಟಣಕ್ಕೆ ಅಂತ ಹೋದವರು ಅಲ್ಲೇ ನೆಲೆಸುತ್ತಾರೆ. ಇದರಿಂದ ಮುಂದಿನ ತಲೆಮಾರಿನ ಕಥೆ ಏನು? ನಮ್ಮ ಹಳ್ಳಿಗಳು ಉಳಿಯುವುದಾದರೂ ಹೇಗೆ? ಎಂಬ ಕಥೆ ಚಿತ್ರದಲ್ಲಿದೆ’ ಎನ್ನುತ್ತಾರೆ ನಿರ್ದೇಶಕ ಚೇತನ್‌.

‘ಬಹದ್ದೂರ್’ ಮರುಬಿಡುಗಡೆ:

ಧ್ರುವ ಸರ್ಜಾ ಅಭಿನಯದ ‘ಬಹದ್ದೂರ್’ ಚಿತ್ರ ತೆರೆಕಂಡು 10 ವರ್ಷಗಳಾಗಿವೆ. ಈ ಸಂಭ್ರಮದ ಬೆನ್ನಲ್ಲೇ ಈ ವಾರ ಸಿನಿಮಾ ಮತ್ತೆ ಬಿಡುಗಡೆಗೊಳ್ಳುತ್ತಿದೆ. ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶಿಸಿದ್ದರು. ರಾಧಿಕಾ‌ ಪಂಡಿತ್ ನಾಯಕಿಯಾಗಿ ನಟಿಸಿದ್ದ ಈ ಚಿತ್ರ 2014ರಲ್ಲಿ ಬಿಡುಗಡೆಯಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.