ADVERTISEMENT

ಈ ವಾರ ನಾಲ್ಕು ಸಿನಿಮಾಗಳು ತೆರೆಗೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 0:23 IST
Last Updated 22 ಆಗಸ್ಟ್ 2025, 0:23 IST
   

ರಜನಿಕಾಂತ್‌ ನಟನೆಯ ‘ಕೂಲಿ’ ಹಾಗೂ ಹೃತಿಕ್‌ ರೋಷನ್‌–ಜೂನಿಯರ್‌ ಎನ್‌ಟಿಆರ್‌ ನಟನೆಯ ‘ವಾರ್‌–2’ ಸಿನಿಮಾ ಬಿಡುಗಡೆಯ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ಕನ್ನಡ ಸಿನಿಮಾಗಳೇ ತೆರೆಕಂಡಿರಲಿಲ್ಲ. ಇಂದು (ಆ.22) ನಾಲ್ಕು ಕನ್ನಡ ಸಿನಿಮಾಗಳು ಬಿಡುಗಡೆಯಾಗಿವೆ. 

ಲವ್‌ ಮ್ಯಾಟ್ರು

ವಿರಾಟ ಬಿಲ್ವ ನಟಿಸಿ, ನಿರ್ದೇಶಿಸಿರುವ ಸಿನಿಮಾವಿದು. ಹಲವು ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡಿದ ಅನುಭವವಿರುವ ವಿರಾಟ ಬಿಲ್ವ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ಭಿನ್ನವಾದ ಪ್ರೇಮಕಥೆಯನ್ನು ಹೊಂದಿದೆ. ಕಳೆದ ಆ.1ರಂದೇ ತೆರೆಕಾಣಬೇಕಿದ್ದ ಈ ಸಿನಿಮಾ ಚಿತ್ರಮಂದಿರಗಳ ಕೊರತೆ ಕಾರಣದಿಂದ ಮುಂದೂಡಲಾಗಿತ್ತು. ಬೆಂಗಳೂರು ಹಾಗೂ ಕುದುರೆಮುಖದಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ. ವಂದನಾ ಪ್ರಿಯ ಈ ಸಿನಿಮಾ ನಿರ್ಮಾಣ ಮಾಡಿದ್ದು, ನಟಿ ಸೋನಲ್‌ ಮೊಂತೆರೋ ನಾಯಕಿಯಾಗಿದ್ದಾರೆ. ಎರಡು ಕಾಲಘಟ್ಟಗಳ ಪಯಣ ಇರುವ ಚಿತ್ರ ಇದಾಗಿದ್ದು, ಅಚ್ಯುತ್‌ ಕುಮಾರ್‌, ಅನಿತಾ ಭಟ್‌, ಸುಮನ್‌ ರಂಗನಾಥ್ ಮುಂತಾದವರು ಚಿತ್ರದಲ್ಲಿದ್ದಾರೆ. ಸೋಲಮಾನ್ ಸಂಗೀತ, ಪರಮ್‌ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.  

ADVERTISEMENT

ಕಮರೊ2

‘ಕಮರೊಟ್ಟು ಚೆಕ್‌ಪೋಸ್ಟ್‌’ ನಿರ್ದೇಶಿಸಿದ್ದ ಪರಮೇಶ್‌ ನಿರ್ದೇಶನದ ಚಿತ್ರವಿದು. ಕನ್ನಡದಲ್ಲಿ ತೀರ ಅಪರೂಪ ಎನ್ನಬಹುದಾದ ಪ್ಯಾರಾ ನಾರ್ಮಲ್ ಜಾನರ್‌ನ ‘ಕಮರೊ2’ ಹಾರಾರ್ ಕಥಾಹಂದರ ಹೊಂದಿದೆ. ಪವನ್ ಗೌಡ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಮೊದಲ ಬಾರಿಗೆ ವಿಭಿನ್ನಪಾತ್ರದಲ್ಲಿ ಪ್ರಿಯಾಂಕ ಉಪೇಂದ್ರ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು,  ಧಾರಾವಾಹಿಗಳಲ್ಲಿ ನಟಿಸಿರುವ ಅನಂತಸ್ವಾಮಿ, ರಜನಿ ಭಾರದ್ವಾಜ್ ಮುಖ್ಯಭೂಮಿಕೆಯಲ್ಲಿದ್ದಾರೆ. ನೀನಾಸಂ ಅಶ್ವಥ್, ನಾಗೇಂದ್ರ ಅರಸ್, ಮಹೇಶ್ ರಾಜ್, ಬೇಬಿ ಖುಷಿ ತಾರಾಬಳಗದಲ್ಲಿದ್ದಾರೆ. ವಿಶೇಷ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಬಣ್ಣಹಚ್ಚಿದ್ದಾರೆ.

ಜಸ್ಟ್‌ ಮ್ಯಾರೀಡ್‌

ನಟ ಶೈನ್‌ ಶೆಟ್ಟಿ ಹಾಗೂ ನಟಿ ಅಂಕಿತಾ ಅಮರ್‌ ಈ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್.ಬಾಬಿ ಅವರು ಎಬಿಬಿಎಸ್‌ ಸ್ಟುಡಿಯೊಸ್‌ ಲಾಂಛನದಲ್ಲಿ ನಿರ್ಮಾಣ ಮಾಡಿದ್ದು, ಸಿ.ಆರ್ ಬಾಬಿ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ದೇವರಾಜ್, ಅಚ್ಯುತ್‌ ಕುಮಾರ್, ಮಾಳವಿಕ ಅವಿನಾಶ್, ಅನೂಪ್ ಭಂಡಾರಿ, ಶ್ರುತಿ ಹರಿಹರನ್, ಶ್ರುತಿ ಕೃಷ್ಣ, ಸಾಕ್ಷಿ ಅಗರವಾಲ್, ಶ್ರೀಮಾನ್, ರವಿಶಂಕರ್ ಗೌಡ, ರವಿ ಭಟ್, ವಾಣಿ ಹರಿಕೃಷ್ಣ, ಸಂಗೀತ, ಅನಿಲ್, ವೇದಿಕಾ ಕಾರ್ಕಳ್ ಹೀಗೆ ದೊಡ್ಡ ತಾರಾಬಳಗವೇ ಇದೆ. ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ. 

ಹಚ್ಚೆ  

ಅಶ್ವ ಫಿಲಂಸ್ ಲಾಂಛನದಲ್ಲಿ ಯಶೋಧರ ಅವರು ಕಥೆ, ಚಿತ್ರಕಥೆ ಸಂಭಾಷಣೆ ಬರೆದು ಈ ಚಿತ್ರ ನಿರ್ದೇಶಿಸಿದ್ದಾರೆ. ಮೈಸೂರಿನ ರಂಗಭೂಮಿ ನಟ ಅಭಿಮನ್ಯು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೆಜ್ಜೆ ಇಡುತ್ತಿದ್ದಾರೆ. ನಾಯಕಿಯಾಗಿ ಆದ್ಯಾ ಪ್ರಿಯಾ ನಟಿಸಿದ್ದಾರೆ. ಅನುಪ್ರೇಮ, ಗುರುರಾಜ್ ಹೊಸಕೋಟೆ, ದುಷ್ಯಂತ್, ಶ್ರೀಮಂತ್ ಸುರೇಶ್, ಚಂದ್ರು ಬಂಡೆ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ. ವಿವೇಕ್ ಚಕ್ರವರ್ತಿ ಸಂಗೀತ ನಿರ್ದೇಶನ, ಸುರೇಶ್ ಆರ್ಮುಗಂ ಸಂಕಲನ ಹಾಗೂ ಯಾಸಿನ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.