ADVERTISEMENT

‘ಗರ’ ಬಿಡುಗಡೆ ಬಾಗಿಲಿಗೆ ಬಂತು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 6:34 IST
Last Updated 25 ಏಪ್ರಿಲ್ 2019, 6:34 IST
ಕೆ.ಆರ್‌.ಮುರಳಿಕೃಷ್ಣ
ಕೆ.ಆರ್‌.ಮುರಳಿಕೃಷ್ಣ   

ವಕೀಲ ಕಂ ನಿರ್ದೇಶಕ ಕೆ.ಆರ್‌.ಮುರಳಿಕೃಷ್ಣ ನಿರ್ದೇಶನದ ‘ಗರ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಮೇ 3ರಂದು ಈ ಸಿನಿಮಾ ತೆರೆಗೆ ಬರಲಿದೆ.‌ ಈ ಸಂತಸವನ್ನು ಹಂಚಿಕೊಳ್ಳಲು ಮುರಳಿಕೃಷ್ಣ ಅವರು ಚಿತ್ರತಂಡದೊಂದಿಗೆ ಸುದ್ದಿಗೋಷ್ಠಿಗೆ ಬಂದಿದ್ದರು.

ತನ್ನ ಸಹೋದರ ನಿರ್ದೇಶಕ ಶಾಂತಾರಾಂ ಅವರನ್ನು ಕಳೆದುಕೊಂಡಿರುವ ದುಃಖದಿಂದ ಇನ್ನೂ ಹೊರಬಾರದಿರುವ ಅವರು, ‘ಈ ಸಿನಿಮಾವನ್ನು ಹಣ ಸಂಪಾದನೆಗಾಗಿ ಮಾಡಿಲ್ಲ. ಗೆಲುವಿನ ದಾಹ ನೀಗಿಸಿಕೊಳ್ಳಲು,ಒಂದು ಆತ್ಮಕ್ಕೆ ತೃಪ್ತಿಕೊಡಿಸಲು ಮಾಡಿದ್ದೇನೆ’ ಎಂದು ಭಾವುಕರಾಗಿಯೇ ಹೇಳಿಕೊಂಡರು.

ಆರ್‌.ಕೆ.ನಾರಾಯಣ್‌ ಅವರ ಆಸ್ಟ್ರೋಲಜಸ್ ಡೇ ಎನ್ನುವ ಕಥೆಯನ್ನು ಓದುವಾಗ ಸ್ಪೂರ್ತಿಗೊಂಡು ಬರೆದ ಕಥೆಯೇ ‘ಗರ’. ‘ಆಸ್ಟ್ರೋಲಜಸ್‌ ಡೇ’ ಓದುವಾಗ ನನ್ನಲ್ಲಿ ಓದುಗನಾಗಿ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡವು. ಆ ಪ್ರಶ್ನೆಗಳಿಗೆ ಆ ಕಥೆಯಲ್ಲಿ ಉತ್ತರ ಸಿಗಲಿಲ್ಲ. ಹುಡುಕುತ್ತಾ ಓದಾಗ ನನಗೆ ದಕ್ಕಿದ ಉತ್ತರಗಳನ್ನು ಸಮೀಕರಣ ಮಾಡಿದಾಗ ಸಿಕ್ಕಿದ ಕಥೆಯೇ ‘ಗರ’ ಸಿನಿಮಾದ ಚಿತ್ರಕಥೆ ಎಂದು ಮಾತು ವಿಸ್ತರಿಸಿದರು. ಸಿನಿಮಾದ ನಿರ್ಮಾಪಕರ ಹೆಸರನ್ನು ಬಿಟ್ಟುಕೊಡದ ನಿರ್ದೇಶಕರು, ಮೇ 3ರ ನಂತರ ಅವರನ್ನು ಮಾಧ್ಯಮಗಳ ಮುಂದೆ ಕರೆತರುವುದಾಗಿ ಹೇಳಿ ಕುತೂಹಲ ಕಾಯ್ದುಕೊಂಡರು.

ADVERTISEMENT

ಈ ಚಿತ್ರದಲ್ಲಿ ಅಭನಯಿಸಿರುವ ಹಿರಿಯ ನಟ ಉಮೇಶ್‌ ಅವರ 74ನೇ ಹುಟ್ಟು ಹಬ್ಬವನ್ನು ಚಿತ್ರತಂಡ ಪತ್ರಿಕಾಗೋಷ್ಠಿಯಲ್ಲಿ ಸಂಭ್ರಮದಿಂದಲೇ ಆಚರಿಸಿತು. 69 ವರ್ಷಗಳ ಹಿಂದೆ ರಂಗ ಭೂಮಿಗೆ ಕಾಲಿಟ್ಟ ಉಮೇಶ್‌ ಅವರು, ಚಿತ್ರರಂಗಕ್ಕೆ ಬಂದು 59 ವರ್ಷಗಳಾಯಿತೆಂದರು. ಗುಬ್ಬಿ ವೀರಣ್ಣ, ಪುಟ್ಟಣ್ಣ ಕಣಗಾಲ್‌,ಬಿ.ಆರ್‌.ಪಂತುಲು, ಡಾ.ರಾಜ್‌ಕುಮಾರ್‌,ಡಾ.ವಿಷ್ಣುವರ್ಧನ್‌ ಅವರೊಂದಿಗಿನ ಒಡನಾಟ ಸ್ಮರಿಸಿದರು.

ಚಿತ್ರದ ಥೀಮ್ ಸಾಂಗ್‌ ‘ಗುಂಗುಂ ಗರ....’ ಹಾಡನ್ನು ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ಬಿಡುಗಡೆ ಮಾಡಿತು. ಈ ಚಿತ್ರದಲ್ಲಿ ನಟಿಸಿರುವ ನಟ ಬಿಗ್‌ಬಾಸ್‌ ಖ್ಯಾತಿಯ ರೆಹಮಾನ್‌ ಹಾಸನ, ‘ಈ ಹಾಡು ಚಿತ್ರದ ಥೀಮ್‌ ಸಾಂಗ್‌,ಇಡೀ ಚಿತ್ರದ ಕಥೆ ಏನೆಂದು ಹೇಳುತ್ತದೆ. ಎಲ್ಲರಿಗೂ ಇಷ್ಟವಾಗಲಿದೆ’ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಜಾನಿ ಲಿವರ್‌ ಮತ್ತು ಸಾಧುಕೋಕಿಲ ‘ಜುಗಾರಿ ಸಹೋದರ’ರಾಗಿ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಕೇರಳದ ನಟಿ ಪ್ರಿಯಾಂಕಾ (ಆವಂತಿಕಾ ಮೋಹನ್), ಕನ್ನಡತಿ ನೇಹಾ ಪಾಟೀಲ್, ಆರ್‌.ಎನ್‌.ಪ್ರದೀಪ್‌, ಹಿರಿಯ ಕಲಾವಿದರಾದ ಉಮೇಶ್‌, ಮನ್‌ದೀಪ್‌, ಸುನೀತಾ ತಾರಾಗಣದಲ್ಲಿಇದ್ದಾರೆ. ಸಾಗರ್‌ ಗುರುರಾಜ್‌ ಸಂಗೀತ ನಿರ್ದೇಶನವಿದೆ. ವೇಣು ಅವರಛಾಯಾಗ್ರಹಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.