ADVERTISEMENT

ಗೋದ್ರಾ – ಎಂದೂ ಮುಗಿಯದ ಯುದ್ಧ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 19:30 IST
Last Updated 23 ಜನವರಿ 2020, 19:30 IST
ಕೆ.ಎಸ್. ನಂದೀಶ್‌
ಕೆ.ಎಸ್. ನಂದೀಶ್‌   

ಎರಡು ವರ್ಷ ಸುದೀರ್ಘವಾಗಿ ಹಾದಿ ಸವೆಸಿ ‘ಗೋದ್ರಾ’ ಚಿತ್ರತಂಡ ಸುದ್ದಿಗೋಷ್ಠಿಗೆ ಬಂದು ಕುಳಿತಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ‘ಇದೊಂದು ಮೆಗಾ ಜರ್ನಿ’ ಎಂದು ನಾಯಕ ನಟ ನೀನಾಸಂ ಸತೀಶ್‌ ಮಾತಿಗಿಳಿದರು. ‘ಮಳೆಗಾಲ, ಚಳಿಗಾಲ ಮತ್ತು ಬೇಸಿಗೆ ಕಾಲದ ಚಿತ್ರಣ ಇದರಲ್ಲಿದೆ. ಮೂರು ಋತುವಿನಲ್ಲಿಯೂ ಶೂಟಿಂಗ್‌ ಮಾಡಬೇಕಿತ್ತು. ಹಾಗಾಗಿ, ಚಿತ್ರೀಕರಣ ವಿಳಂಬವಾಯಿತು’ ಎಂದು ಸಮಜಾಯಿಷಿ ನೀಡಿದರು.

‘ಎಂದೂ ಮುಗಿಯದ ಯುದ್ಧ’ ಎಂಬ ಅಡಿ ಬರಹ ಈ ಚಿತ್ರಕ್ಕಿದೆ. ಚಿತ್ರದಲ್ಲಿ ಎಡ–ಬಲ ಎಂಬ ಸೈದ್ಧಾಂತಿಕ ಹಿನ್ನೆಲೆಯಿಲ್ಲ. ಎಲ್ಲವನ್ನೂ ನೇರವಾಗಿ ಹೇಳಿದ್ದೇವೆ. ಕೆಳವರ್ಗದ ಜನರ ಬದುಕಿಗೆ ಕನ್ನಡಿ ಹಿಡಿಯುವ ಪ್ರಯತ್ನ ಇಲ್ಲಿದೆ’ ಎಂದರು.

‘ಟೀಸರ್‌ನಲ್ಲಿ ಹುಟ್ಟು ದರಿದ್ರ ಆದ್ರೂ; ಸಾವು ಚರಿತ್ರೆಯಾಗಬೇಕು...’ ಎಂಬ ಮಾತಿದೆ. ನಾನು ಬಡತನದ ಹಾಸಿಗೆ ಹೊದ್ದುಕೊಂಡೇ ಚಿತ್ರರಂಗಕ್ಕೆ ಬಂದವನು. ವ್ಯವಸ್ಥೆ ಬಗ್ಗೆ ಈ ಸಿನಿಮಾ ಮಾತನಾಡುತ್ತದೆ’ ಎಂದು ವಿವರಿಸಿದರು ಸತೀಶ್‌.

ADVERTISEMENT

ಅಂದಹಾಗೆ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ಕೆ.ಎಸ್. ನಂದೀಶ್‌. ಕಥೆ, ಚಿತ್ರಕಥೆಯನ್ನು ಅವರೇ ಬರೆದಿದ್ದಾರೆ. ‘ಗೋದ್ರಾ ಎಂಬ ಟೈಟಲ್‌ ಏಕೆ ಇಡಲಾಗಿದೆ ಎಂಬುದನ್ನು ಚಿತ್ರ ನೋಡಿಯೇ ತಿಳಿದುಕೊಳ್ಳಬೇಕು’ ಎಂದರು.

ನಾಯಕ ಮತ್ತು ನಾಯಕಿ ಪತ್ರಿಕೋದ್ಯಮದ ವಿದ್ಯಾರ್ಥಿಗಳು. ನಾಯಕ ಬಡತನದಲ್ಲಿಯೇ ಹುಟ್ಟಿ ಬೆಳೆದವ. ರ‍್ಯಾಂಕ್‌ ವಿದ್ಯಾರ್ಥಿ. ಭ್ರಷ್ಟ ಸಮಾಜದಿಂದ ಆತನ ಬದುಕು ಹೈರಾಣಾಗುತ್ತದೆ. ಕೊನೆಗೆ, ಆತ ಮುಖ ಮಾಡಿ ನಿಲ್ಲುವುದು ಚರಿತ್ರೆಯತ್ತ. ಸಮಾಜದಲ್ಲಿ ನಡೆಯುವ ಕೆಲವು ಘಟನೆಗಳನ್ನು ಕಣ್ಣಾರೆ ನೋಡಿದಾಗ ಇಬ್ಬರೂ ಕ್ರಾಂತಿಯ ಹಾದಿ ತುಳಿಯುತ್ತಾರೆ ಎಂಬುದೇ ಇದರ ಕಥಾಹಂದರ. ಮಲೆನಾಡಿನ ಮಡಿಲಿಂದ ಉತ್ತರ ಭಾರತದ ಛತ್ತೀಸಗಢದವರೆಗೂ ಇದರ ನಿಗೂಢ ನೆರಳು ಚಾಚಿಕೊಂಡಿದೆಯಂತೆ.

ಚಿತ್ರದಲ್ಲಿ ಸತೀಶ್‌ಗೆ ಜತೆಯಾಗಿರುವುದು ಶ್ರದ್ಧಾ ಶ್ರೀನಾಥ್‌. ಇದೇ ಮೊದಲ ಬಾರಿಗೆ ಇಬ್ಬರೂ ಒಟ್ಟಾಗಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

‘ನಾನು ಇಲ್ಲಿಯವರೆಗೂ ಇಂತಹ ಪಾತ್ರದಲ್ಲಿ ನಟಿಸಿರಲಿಲ್ಲ. ಸರ್ಕಾರಿ ನೌಕರನ ಪುತ್ರಿಯಾಗಿ ಕಾಣಿಸಿಕೊಂಡಿದ್ದೇನೆ’ ಎಂದರು ಶ್ರದ್ಧಾ ಶ್ರೀನಾಥ್‌.

ಜೇಕಬ್‌ ಫಿಲ್ಮ್ಸ್‌, ಲೀಡರ್‌ ಫಿಲ್ಮ್‌ ಪ್ರೊಡಕ್ಷನ್‌ನಿಂದ ಬಂಡವಾಳ ಹೂಡಲಾಗಿದೆ. ಜಾಬೇಜ್‌ ಕೆ. ಗಣೇಶ್‌ ಅವರ ಛಾಯಾಗ್ರಹಣವಿದೆ. ಮಾರ್ಚ್‌ ಅಥವಾ ಏಪ್ರಿಲ್‌ ವೇಳೆಗೆ ಜನರ ಮುಂದೆ ಬರಲು ಚಿತ್ರತಂಡ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.