ADVERTISEMENT

‘ನಟ ಕೇವಲ ಮಾಧ್ಯಮವಷ್ಟೇ’: ಗೋಪಾಲಕೃಷ್ಣ ದೇಶಪಾಂಡೆ 

ಅಭಿಲಾಷ್ ಪಿ.ಎಸ್‌.
Published 30 ಜುಲೈ 2025, 23:30 IST
Last Updated 30 ಜುಲೈ 2025, 23:30 IST
<div class="paragraphs"><p>ಕೊತ್ತಲವಾಡಿ&nbsp; ಗೋಪಾಲಕೃಷ್ಣ ದೇಶಪಾಂಡೆ&nbsp;</p></div>

ಕೊತ್ತಲವಾಡಿ  ಗೋಪಾಲಕೃಷ್ಣ ದೇಶಪಾಂಡೆ 

   

ನಟ ಗೋಪಾಲಕೃಷ್ಣ ದೇಶಪಾಂಡೆ ಅವರು ಭಿನ್ನವಾದ ಪಾತ್ರಗಳ ಮೂಲಕವೇ ಕನ್ನಡದ ಪ್ರೇಕ್ಷಕರಿಗೆ ಹತ್ತಿರವಾದವರು. ಅದು ‘ಗರುಡ ಗಮನ ವೃಷಭ ವಾಹನ’, ‘ಹೆಜ್ಜಾರು’, ‘ಟೋಬಿ’, ‘ಸಪ್ಲಯರ್‌ ಶಂಕರ’, ‘ಸಪ್ತ ಸಾಗರದಾಚೆ ಎಲ್ಲೋ’, ‘ಸ್ವಾತಿ ಮುತ್ತಿನ ಮಳೆ ಹನಿಯೇ’, ‘ಶಾಖಾಹಾರಿ’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಿರ್ದೇಶಕರು ಬರೆದ ಪಾತ್ರಗಳಿಗೆ ಜೀವ ತುಂಬಿದವರು. ಇದೀಗ ನಟ ಯಶ್‌ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ, ಪೃಥ್ವಿ ಅಂಬಾರ್‌ ನಾಯಕನಾಗಿ ನಟಿಸಿರುವ ‘ಕೊತ್ತಲವಾಡಿ’ ಸಿನಿಮಾದಲ್ಲೂ ಗೋಪಾಲಕೃಷ್ಣ ದೇಶಪಾಂಡೆ ಮುಖ್ಯಭೂಮಿಕೆಯಲ್ಲಿದ್ದಾರೆ. ಸಿನಿಪಯಣ ಹಾಗೂ ಶ್ರೀರಾಜ್‌ ನಿರ್ದೇಶನದ ‘ಕೊತ್ತಲವಾಡಿ’ಯಲ್ಲಿನ ತಮ್ಮ ಪಾತ್ರದ ಬಗ್ಗೆ ಅವರು ಮಾತಿಗಿಳಿದಾಗ... 

‘ಸದ್ಯ ನಾನು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ಥಿತಿಯಲ್ಲಿಲ್ಲ. ಇದನ್ನು ನಾನು ನಂಬುವುದೂ ಇಲ್ಲ. ತಾವು ಇಷ್ಟಪಟ್ಟ ಪಾತ್ರಗಳನ್ನು ಮಾಡುವ ಅವಕಾಶ ಬಹಳ ಕಡಿಮೆ ಜನಕ್ಕೆ ದೊರೆಯುತ್ತದೆ. ನಟನೆಯನ್ನು ನಾನು ಬಹಳ ಶ್ರದ್ಧೆಯಿಂದ ಮಾಡುತ್ತಾ ಬಂದಿದ್ದೇನೆ. ನಿರಂತರವಾಗಿ ಪೊಲೀಸ್‌ ಪಾತ್ರಗಳು ಬಂದಾಗ ಕೆಲವೊಮ್ಮೆ ಬೇಡ ಎಂದಿದ್ದೇನೆ. ಪೊಲೀಸ್‌ ಪಾತ್ರದ ಹೊರತಾಗಿಯೂ ಭಿನ್ನವಾದ ಪಾತ್ರಗಳಲ್ಲಿ ನಿರ್ದೇಶಕರು ನನ್ನನ್ನು ಕಾಣಬಯಸುತ್ತಾರೆ ಎನ್ನುವುದಕ್ಕೆ ಹಲವು ಸಿನಿಮಾಗಳು ನಿಮ್ಮ ಮುಂದೆ ಉದಾಹರಣೆಯಾಗಿವೆ’ ಎಂದು ಮಾತು ಆರಂಭಿಸಿದರು ಗೋಪಾಲಕೃಷ್ಣ ದೇಶಪಾಂಡೆ.   

ADVERTISEMENT

‘ನನಗೆ ಸಣ್ಣ ಪಾತ್ರ, ದೊಡ್ಡ ಪಾತ್ರವೆಂಬ ಯೋಚನೆಯಿಲ್ಲ. ಕೊಟ್ಟ ಪಾತ್ರಗಳನ್ನು ಹೃದಯಪೂರ್ವಕವಾಗಿ ನಿಭಾಯಿಸಿದ್ದೇನೆ. ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ ಎನ್ನುವುದೇ ಖುಷಿ. ಊರಿನಲ್ಲಿ ನನ್ನನ್ನು ನೋಡಿ ‘ನೀನು ನಟನ ರೀತಿ ಇಲ್ವಲ್ಲೋ’ ಎನ್ನುತ್ತಾರೆ. ನನ್ನ ರೀತಿಯ ಮೈಬಣ್ಣ, ಎತ್ತರ, ದೇಹ ಹೊಂದಿರುವ ನಟನಿಗೂ ನಿರಂತರವಾದ ಅವಕಾಶವಿದೆ ಎನ್ನುವುದು ಮತ್ತೊಂದು ಖುಷಿ. ನಾನು ನಿಭಾಯಿಸಿದ ಪಾತ್ರದೊಳಗೆ ಸಹಜತೆ ಕಂಡರೆ ಅದು ನಿರ್ದೇಶಕರ ಬರವಣಿಗೆಯ ಪ್ರಭಾವ. ಉದಾಹರಣೆಗೆ ‘ಗರುಡ ಗಮನ..’ ಹಾಗೂ ‘ಶಾಖಾಹಾರಿ’ಯಲ್ಲಿನ ಪೊಲೀಸ್‌ ಪಾತ್ರಗಳನ್ನು ಗಮನಿಸಿ. ಅದು ಆ ಸಿನಿಮಾಗಳ ನಿರ್ದೇಶಕರಾದ ರಾಜ್‌ ಬಿ.ಶೆಟ್ಟಿ, ಸಂದೀಪ್‌ ಸುಂಕದ್‌ ಕೈಚಳಕ. ಒಂದು ಸಿನಿಮಾದಲ್ಲಿ ಓರ್ವ ನಟ ಕೇವಲ ಮಾಧ್ಯಮವಷ್ಟೇ. ಪ್ರೇಕ್ಷಕರು ಮತ್ತು ಬರಹಗಾರರ ನಡುವಿನ ಸಂವಹನ ಮಾಧ್ಯಮ ನಾವು’ ಎನ್ನುತ್ತಾ ‘ಕೊತ್ತಲವಾಡಿ’ಯಲ್ಲಿನ ತಮ್ಮ ಪಾತ್ರದತ್ತ ಮಾತು ಹೊರಳಿಸಿದರು. 

‘ನನ್ನ ‘ಶಾಖಾಹಾರಿ’, ‘ಗರುಡ ಗಮನ..’ ಸಿನಿಮಾಗಳಲ್ಲಿ ‘ಮೌನ’ ನನ್ನ ಪಾತ್ರಗಳ ಉಸಿರಾಗಿತ್ತು. ‘ಕೊತ್ತಲವಾಡಿ’ಯಲ್ಲಿ ಈ ಹಿಂದಿನ ಸಿನಿಮಾಗಳಿಗಿಂತ ಹೆಚ್ಚಿನ ರೀತಿಯಲ್ಲಿ ಭಾವನೆ, ಮಾತುಗಳಿವೆ. ಪಾತ್ರ ವ್ಯಕ್ತಪಡಿಸುವ ಹಾವಭಾವಗಳೂ ಭಿನ್ನವಾಗಿವೆ. ರಂಗಭೂಮಿಯಲ್ಲಿರುವಂತೆ ಗ್ಯಾಲರಿಗೆ ಪ್ಲೇ ಮಾಡುವ ಸನ್ನಿವೇಶಗಳು ‘ಕೊತ್ತಲವಾಡಿ’ಯಲ್ಲಿ ಹೆಚ್ಚಿವೆ. ಈ ಸಿನಿಮಾದಲ್ಲಿ ನನ್ನ ಪಾತ್ರವನ್ನು ಇದೇ ರೀತಿ ವಿನ್ಯಾಸಗೊಳಿಸಲಾಗಿದೆ. ಯಾವುದೇ ಪಾತ್ರವನ್ನು ನಮಗೆ ವಿವರಿಸಿದಾಗ ಮೊದಲು ನಮಗೆ ಮನವರಿಕೆಯಾಗಬೇಕು, ಮೆಚ್ಚುಗೆಯಾಗಬೇಕು. ಹಾಗಾದಾಗ ಅದನ್ನು ಪ್ರೇಕ್ಷಕರಿಗೆ ದಾಟಿಸಲು ಸಾಧ್ಯ. ಈ ಪಾತ್ರವನ್ನು ಮೊದಲು ವಿವರಿಸಿದಾಗ ಕೊಂಚ ಭಯವಿತ್ತು. ನಿರ್ದೇಶಕರು ವಿನ್ಯಾಸಗೊಳಿಸಿದ ಪಾತ್ರವನ್ನು ಪ್ರೇಕ್ಷಕರಿಗೆ ದಾಟಿಸಬಲ್ಲೆನೇ ಎಂಬ ಸಂದೇಹವಿತ್ತು. ಆದರೂ ಒಮ್ಮೆ ಪ್ರಯತ್ನಿಸೋಣ ಎಂದೇ ಈ ಪಾತ್ರವನ್ನು ಒಪ್ಪಿಕೊಂಡೆ. ನನ್ನ ಪಾತ್ರಕ್ಕೆ ಎಷ್ಟು ಶೇಡ್ಸ್‌ ಇವೆ ಎನ್ನುವುದನ್ನು ಸಿನಿಮಾದಲ್ಲೇ ನೋಡಬೇಕು. ಸುಮ್ಮನೆ ಇದ್ದ ಒಬ್ಬ ಮನುಷ್ಯ ಆಸೆಗೆ ಬಿದ್ದಾಗ ಅದು ಏನೇನು ಮಾಡಿಸುತ್ತದೆ, ಅಧಿಕಾರ ಸಿಕ್ಕಾಗ–ಅಧಿಕಾರ ಹೋದಾಗ ಆಗುವ ಬದಲಾವಣೆಗಳನ್ನು ಈ ಪಾತ್ರದ ಮೂಲಕ ಹೇಳಲಾಗಿದೆ’ ಎಂದರು.  

‘ಸುದೀಪ್‌ ಅವರ ಜೊತೆಗೊಂದು ಸಿನಿಮಾ, ಪಿಆರ್‌ಕೆಯವರ ಒಂದು ವೆಬ್‌ಸರಣಿ, ಪವನ್‌ ಒಡೆಯರ್‌, ‘ಆಡು ಆನೆಯ ನುಂಗಿ’ ಎಂಬ ಕಿರುಚಿತ್ರ ಮಾಡಿದ್ದ ಪುನೀತ್‌ ಅವರ ಜೊತೆಗೊಂದು ಸಿನಿಮಾ ಮಾಡುತ್ತಿದ್ದೇನೆ. ‘ಶಾಖಾಹಾರಿ’ ನಿರ್ದೇಶಕ ಸಂದೀಪ್‌ ಸುಂಕದ್‌ ನಿರ್ದೇಶನದ ‘ಪಬ್ಬಾರ್‌’ನಲ್ಲಿ ನಟಿಸುತ್ತಿದ್ದೇನೆ. ಇನ್ನೂ ಒಂದಿಷ್ಟು ಚಿತ್ರಗಳು ಕೈಯಲ್ಲಿವೆ’ ಎಂದು ಅವರು ಮಾತಿಗೆ ವಿರಾಮವಿತ್ತರು.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.