ADVERTISEMENT

ಸರ್ಕಾರಿ ಶಾಲೆ ದತ್ತು ಪಡೆದ ನಟಿ ಪ್ರಣೀತಾ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 19:31 IST
Last Updated 16 ಅಕ್ಟೋಬರ್ 2018, 19:31 IST
ನಟಿ ಪ್ರಣೀತಾ ಸುಭಾಷ್‌
ನಟಿ ಪ್ರಣೀತಾ ಸುಭಾಷ್‌   

ಬೆಂಗಳೂರು:ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ನಟಿ ಪ್ರಣೀತಾ ಸುಭಾಷ್‌ ಅವರು ಹಾಸನ ಜಿಲ್ಲೆಯ ಶಾಲೆಯೊಂದನ್ನು ದತ್ತು ಪಡೆದಿದ್ದಾರೆ. ಈ ಶಾಲೆಗೆ ಮೂಲ ಸೌಕರ್ಯ ಕಲ್ಪಿಸಲು ವೈಯಕ್ತಿಕವಾಗಿ ₹ 5 ಲಕ್ಷ ನೀಡಿದ್ದಾರೆ.

ಸರ್ಕಾರಿ ಶಾಲೆ ಉಳಿಸಿ ಆಂದೋಲನ ಸಮಿತಿಯು ರಾಜ್ಯದಾದ್ಯಂತ ಶಾಲೆಗಳ ಉಳಿವಿಗೆ ಹೋರಾಟ ನಡೆಸುತ್ತಿದೆ. ಈ ಆಂದೋಲನದಲ್ಲಿ ಪಾಲ್ಗೊಳ್ಳಲು ಸಿನಿಮಾ ನಟ, ನಟಿಯರಿಗೆ ಸಮಿತಿ ಕರೆ ನೀಡಿದೆ. ಸಮಿತಿಯ ಕಾರ್ಯಕ್ಕೆ ಪ್ರಣೀತಾ ಕೈಜೋಡಿಸಿದ್ದಾರೆ.

‘ನಾನು ಈ ಹಿಂದೆ ಟೀಚ್‌ ಫಾರ್‌ ಚೇಂಜ್‌ ಆಂದೋಲನದಲ್ಲಿ ಭಾಗಿಯಾಗಿದ್ದೆ. ಆಗ ಸರ್ಕಾರಿ ಶಾಲೆಗಳಿಗೆ ತೆರಳಿ ಪಾಠ ಮಾಡಿದ್ದೆ. ಆ ವೇಳೆ ನನಗೆ ಶಾಲೆಗಳ ಕರಾಳ ದರ್ಶನವಾಯಿತು. ಸೌಲಭ್ಯ ಇಲ್ಲದೆ ಸೊರಗುತ್ತಿರುವುದು ಗೊತ್ತಾಯಿತು. ಶೌಚಾಲಯ ಇಲ್ಲದಿರುವ ಪರಿಣಾಮ ಹೆಣ್ಣುಮಕ್ಕಳು ಶಾಲೆಗೆ ಬರಲು ತೊಡಕಾಗುತ್ತಿದೆ. ಹಾಗಾಗಿ, ಶಾಲೆಯನ್ನು ದತ್ತು ಪಡೆಯಲು ನಿರ್ಧರಿಸಿದ್ದೇನೆ’ ಎಂದು ಸಮಿತಿಗೆ ಮಂಗಳವಾರ ಚೆಕ್‌ ಹಸ್ತಾಂತರಿಸಿದ ಬಳಿಕ ಅವರು ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಮೀ–ಟೂ ಅಭಿಯಾನ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಸಂತ್ರಸ್ತೆಯರಿಗೆ ನ್ಯಾಯ ಸಿಗಬೇಕಿದೆ ಎಂದ ಅವರು, ವೃತ್ತಿಬದುಕಿನಲ್ಲಿ ನನಗೆ ಅಂತಹ ಅನುಭವವಾಗಿಲ್ಲ’ ಎಂದರು.

ಸಮಿತಿಯ ಅಧ್ಯಕ್ಷ ಅನಿಲ್‌ ಶೆಟ್ಟಿ ಮಾತನಾಡಿ, ‘ಮೂರು ತಿಂಗಳಿನಿಂದಲೂ ಆಂದೋಲನ ನಡೆಸಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಓದಿ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳ ಮೂಲಕ ಆಯಾ ಶಾಲೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಸಮಿತಿಯ ಸದಸ್ಯರು ರಾಜ್ಯದಾದ್ಯಂತ ಪ್ರವಾಸ ನಡೆಸಿ ಶಾಲೆಗಳ ದುಃಸ್ಥಿತಿ ಬಗ್ಗೆ ಅಧ್ಯಯನ ನಡೆಸಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ’ ಎಂದು ಹೇಳಿದರು.

ರಾಜ್ಯದಲ್ಲಿ 43 ಸಾವಿರ ಸರ್ಕಾರಿ ಶಾಲೆಗಳಿವೆ. 50 ಲಕ್ಷಕ್ಕೂ ಹೆಚ್ಚು ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಕೆಲವು ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಇದರಿಂದ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ಕ್ರಮಕೈಗೊಳ್ಳಬೇಕು. ಇಂಗ್ಲಿಷ್‌ ಅನ್ನು ಒಂದು ಭಾಷೆಯಾಗಿ ಕಲಿಸಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

‘ಹಾಸನ ಜಿಲ್ಲೆಯಲ್ಲಿ ಮೂಲ ಸೌಕರ್ಯ ವಂಚಿತ ಮೂರು ಶಾಲೆಗಳನ್ನು ಗುರುತಿಸಲಾಗಿದೆ. ಈ ಪೈಕಿ ಒಂದು ಶಾಲೆಯ ಅಭಿವೃದ್ಧಿಗೆ ಪ್ರಣೀತಾ ಅವರು ನೀಡಿರುವ ಹಣವನ್ನು ಬಳಸಿಕೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.