ADVERTISEMENT

ಗುಬ್ಬಿಯ ಕಾಮಿಡಿ ಅಸ್ತ್ರ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 9:54 IST
Last Updated 3 ಆಗಸ್ಟ್ 2019, 9:54 IST
ಕವಿತಾ ಗೌಡ
ಕವಿತಾ ಗೌಡ   

ಜನಪ್ರಿಯ ನಾಣ್ನುಡಿಗಳನ್ನು ಶೀರ್ಷಿಕೆಯಾಗಿ ಇಟ್ಟುಕೊಂಡು ಬರುತ್ತಿರುವ ಕನ್ನಡ ಸಿನಿಮಾಗಳ ದೊಡ್ಡ ಪಟ್ಟಿಯನ್ನೇ ತಯಾರಿಸಬಹುದು. ಸುಜಯ್‌ ಶಾಸ್ತ್ರಿ ನಿರ್ದೇಶಿಸಿರುವ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ವೂ ಈ ಪಟ್ಟಿಯಲ್ಲಿ ಸೇರಿಕೊಳ್ಳುವ ಚಿತ್ರ. ‘ಬೆಲ್‌ ಬಾಟಂ’ ಚಿತ್ರದಲ್ಲಿ ‘ಸೆಗಣಿ ಪಿಂಟೊ’ ಪಾತ್ರಕ್ಕೆ ಜೀವ ತುಂಬಿದ್ದವರೇ ಈ ಸುಜಯ್.

ಇದು ಪಕ್ಕಾ ಕಾಮಿಡಿ ಕಥೆ ಎಂಬುದು ಟ್ರೇಲರ್‌ ನೋಡಿದಾಕ್ಷಣ ಅರ್ಥವಾಗುತ್ತಿತ್ತು. ಹಾಗೆಯೇ ಕೌಟುಂಬಿಕ ಚಿತ್ರವಾಗಿರುವ ಸುಳಿವೂ ಅದರಲ್ಲಿತ್ತು.

ಕೈಯಲ್ಲಿ ಮೈಕ್‌ ಹಿಡಿದ ಸುಜಯ್‌ ಶಾಸ್ತ್ರಿ ತಂಡದ ಸದಸ್ಯರ ಬಗ್ಗೆ ಪರಿಚಯ ಮಾಡಿಕೊಡುತ್ತಿದ್ದರು. ಸಿನಿಮಾ ಬಗ್ಗೆ ಎಲ್ಲವನ್ನೂ ಹೇಳಿಕೊಳ್ಳುವ ತವಕ ಅವರಲ್ಲಿತ್ತು. ಆದರೆ, ಕಥೆಯ ಎಳೆ ಹೇಳಲು ಹಗ್ಗಜಗ್ಗಾಟಕ್ಕೆ ಇಳಿದರು.

ADVERTISEMENT

‘ಸಂಭಾಷಣೆಗೆ ಹೆಚ್ಚು ಜೋತು ಬೀಳದೆ ಸಿನಿಮಾ ಕಟ್ಟಿಕೊಡಬೇಕೆಂಬ ಆಸೆಯಿಂದ ನಿರ್ಮಿಸಿರುವ ಚಿತ್ರ ಇದು. ನನ್ನ ಕನಸು ಇದರ ಮೂಲಕ ಸಾಕಾರಗೊಂಡಿದೆ’ ಎಂದು ಹೇಳಿ ಪಕ್ಕದಲ್ಲಿದ್ದ ಚಿತ್ರದ ನಾಯಕ ರಾಜ್‌ ಬಿ.ಶೆಟ್ಟಿ ಕೈಗೆ ಮೈಕ್‌ ಹಸ್ತಾಂತರಿಸಿದರು.

ಚಿತ್ರದಲ್ಲಿ ರಾಜ್‌ ಬಿ. ಶೆಟ್ಟಿ ಅವರದು ಸಾಫ್ಟ್‌ವೇರ್‌ ಎಂಜಿನಿಯರಿಂಗ್‌ ಪಾತ್ರ. ಗುಬ್ಬಿಯಂತಹ ಸಣ್ಣ ಪಾತ್ರದ ಮೇಲೆ ಪ್ರಪಂಚದಷ್ಟು ಗಾತ್ರದ ಸಮಸ್ಯೆ ಬಿದ್ದಾಗ ಏನಾಗುತ್ತದೆ ಎನ್ನುವುದೇ ಈ ಚಿತ್ರದ ತಿರುಳು.

‘ಈ ಸಿನಿಮಾದ ಆಶಯ ನಗಿಸುವುದಷ್ಟೇ. ಎಲ್ಲಿಯೂ ಬೇಕೆಂದು ಎಮೋಷನ್‌ಗಳ ಮಿಶ್ರಣಕ್ಕೆ ಪ್ರಯತ್ನಿಸಿಲ್ಲ. ಸಿನಿಮಾದ ಕಥೆಯಲ್ಲಿ ಇದ್ದಂತಹ ಹಾಸ್ಯವೇ ಎಲ್ಲಾ ಕಡೆಯಲ್ಲಿ ಕಾಣಲಿದೆ’ ಎಂದರು ರಾಜ್‌ ಬಿ. ಶೆಟ್ಟಿ.

‘ಚಿತ್ರದಲ್ಲಿ ಬರುವ ಜೀವನದ ಸನ್ನಿವೇಶಗಳು ದೊಡ್ಡದಾಗಿರುತ್ತವೆ. ಆದರೆ, ಪಾತ್ರಗಳ ವರ್ತನೆ ನೈಜವಾಗಿರುತ್ತದೆ. ವಿಭಿನ್ನವಾದ ಸಿನಿಮಾದಲ್ಲಿ ನಟಿಸಿದ ಖುಷಿಯಿದೆ’ ಎಂದು ವಿವರಿಸಿದರು.

ಟಿ.ಆರ್‌. ಚಂದ್ರಶೇಖರ್‌ ಇದಕ್ಕೆ ಬಂಡವಾಳ ಹೂಡಿದ್ದಾರೆ. ‘ನಮ್ಮ ಬ್ಯಾನರ್‌ ಮೂಲಕ ಇಲ್ಲಿಯವರೆಗೂ ಒಳ್ಳೆಯ ಸಿನಿಮಾಗಳನ್ನು ನೀಡಿದ್ದೇವೆ. ಮೊದಲ ಬಾರಿಗೆ ಕಾಮಿಡಿ ಚಿತ್ರ ನಿರ್ಮಿಸಲಾಗಿದೆ. ಎಲ್ಲರೂ ಪ್ರೋತ್ಸಾಹ ನೀಡಬೇಕು’ ಎಂದು ಕೋರಿದರು.

ಕವಿತಾ ಗೌಡ ಇದರ ನಾಯಕಿ. ಚಿತ್ರದ ಪಾತ್ರಕ್ಕೆ ಅವರೇ ನಾಯಕಿಯಾಗಬೇಕೆಂದು ನಿರ್ದೇಶಕರು ಕಿರುತೆರೆಯ ‘ಬಿಗ್‌ಬಾಸ್‌’ ಸ್ಪರ್ಧೆ ಮುಗಿಯುವವರೆಗೂ ಅವರಿಗಾಗಿ ಕಾಯ್ದರಂತೆ.

ಇಲ್ಲಿಯವರೆಗೂ ಸೀರಿಯಸ್‌ ಆದ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿರುವ ಪ್ರಮೋದ್‌ ಶೆಟ್ಟಿಗೆ ಕಾಮಿಡಿ ಪಾತ್ರ ಹೊಸದು.

ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಸುನಿತ್‌ ಹಲಗೇರಿ ಅವರದು. ಆಗಸ್ಟ್‌ 15ರಂದು ಥಿಯೇಟರ್‌ಗೆ ಬರಲು ಚಿತ್ರತಂಡ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.