ADVERTISEMENT

ರೇಸ್‌ನಿಂದ ಹೊರಬಿದ್ದ 'ಗಲ್ಲಿ ಬಾಯ್‌', ಕೈಗೆಟುಕದ ಆಸ್ಕರ್‌ ಎಂಬ ಹುಳಿ ದ್ರಾಕ್ಷಿ!

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2019, 9:36 IST
Last Updated 24 ಡಿಸೆಂಬರ್ 2019, 9:36 IST
ಗಲ್ಲಿ ಬಾಯ್‌
ಗಲ್ಲಿ ಬಾಯ್‌   

92ನೇ ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಜೋಯಾ ಅಖ್ತರ್ ನಿರ್ದೇಶನದ ಭಾರತೀಯ ಸಿನಿಮಾ ‘ಗಲ್ಲಿ ಬಾಯ್‌’ ಸ್ಪರ್ಧೆಯಿಂದ ಹೊರಬಿದ್ದಿದೆ. ಈ ಬಾರಿಯಾದರೂ ‘ಗಲ್ಲಿ ಬಾಯ್‌‘ಭಾರತೀಯರ ಬಹು ದಿನಗಳ ಆಸೆಯಾಗಿರುವ ಆಸ್ಕರ್‌ ಪ್ರಶಸ್ತಿಯ ಕನಸು ಈಡೇರಿಸಬಹುದು ಎಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಇದರಿಂದ ತೀವ್ರ ನಿರಾಸೆಯಾಗಿದೆ.

ಆಸ್ಕರ್‌ ಅಕಾಡೆಮಿಯು ಪ್ರಕಟಿಸಿದ ಅಂತರರಾಷ್ಟ್ರೀಯ ಸಿನಿಮಾ ವಿಭಾಗದ ಅಂತಿಮ ಸುತ್ತಿನ ಟಾಪ್‌ 10 ಚಿತ್ರಗಳ ಪಟ್ಟಿಯಲ್ಲಿ ಸ್ತಾನ ಗಿಟ್ಟಿಸಲು ‘ಗಲ್ಲಿ ಬಾಯ್‌’ ವಿಫಲವಾಗಿದೆ.ಹಂಗೇರಿ, ಸೆನೆಗಲ್‌, ದಕ್ಷಿಣ ಕೋರಿಯಾ, ಸ್ಪೇನ್‌,ಫ್ರಾನ್ಸ್‌, ಜೆಕ್ ಗಣರಾಜ್ಯ, ಪೊಲೇಂಡ್‌ ಸೇರಿದಂತೆ ರಷ್ಯಾ ಸಿನಿಮಾಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.

2018ರ ಫೆಬ್ರುವರಿಯಲ್ಲಿ ತೆರೆಗೆ ಬಂದಿದ್ದ ‘ಗಲ್ಲಿ ಬಾಯ್‌’ ಸಿನಿಮಾ ಮೂಲಕ ರಣವೀರ್ ಸಿಂಗ್‌ ಮತ್ತು ಅಲಿಯಾ ಭಟ್‌ ಮೊದಲ ಬಾರಿಗೆ ತೆರೆ ಹಂಚಿಕೊಂಡಿದ್ದರು. ರಣವೀರ್ ಸಿಂಗ್ ಸ್ಟ್ರೀಟ್‌ ರ‍್ಯಾಪರ್‌ ಆಗಿ ಕಾಣಿಸಿಕೊಂಡಿದ್ದರು. ವಿಜಯ್‌ ರಾಜ್‌, ಸಿದ್ದಾಂತ್ ಚತುರ್ವೇದಿ, ವಿಜಯ್‌ ವರ್ಮಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು.

ADVERTISEMENT

ಮುಂಬೈನ ಬೀದಿಗಳಲ್ಲಿ ಹಿಪ್‌ಹಾಪ್‌ ನೃತ್ಯ ಮತ್ತು ‘ಮೇರೆ ಗಲಿ ಮೇ’ ಹಾಡಿನಿಂದ ವಿಖ್ಯಾತಿ ಪಡೆದ ರ‍್ಯಾಪರ್‌ಗಳಾದ ವಿವಿ‌ಯನ್ ಫರ್ನಾಂಡಿಸ್ ಅಲಿಯಾಸ್ ಡಿವೈನ್‌ ಮತ್ತು ನಾವೇದ್‌ ಶೇಖ್‌ ಅಲಿಯಾಸ್ ನಾಜಿ ಅವರ ಜೀವನಾಧರಿತ ಕತೆಯೇ ‘ಗಲ್ಲಿ ಬಾಯ್‌’ ಆಗಿ ಮೂಡಿಬಂದಿದೆ.

‘ಗಲ್ಲಿ ಬಾಯ್‌‘ ಹಲವು ವಿದೇಶಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಇತ್ತೀಚಿಗೆ ಏಷ್ಯನ್‌ ಅಕಾಡೆಮಿ ಕ್ರಿಯೇಟಿವ್ ವಿಭಾಗದಲ್ಲಿ ‘ಭಾರತದ ಅತ್ಯುತ್ತಮ ಸಿನಿಮಾ’ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.ಇಲ್ಲಿಯವರೆಗೂ ಭಾರತೀಯ ಯಾವುದೇ ಸಿನಿಮಾ ಆಸ್ಕರ್‌ ಪ್ರಶಸ್ತಿಯನ್ನು ಪಡೆದಿಲ್ಲ. ಅಂತಿಮ ಸುತ್ತಿನ ಟಾಪ್‌ ಹತ್ತರಲ್ಲಿ ಮದರ್‌ ಇಂಡಿಯಾ (1958), ಸಲಾಂ ಬಾಂಬೆ (1958), ಲಗಾನ್‌ (2001) ಚಿತ್ರಗಳು ಸ್ಥಾನ ಪಡೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.