ADVERTISEMENT

Bollywood | ‘ಧುರಂಧರ್’ಗೆ ಹನುಮ್ಯಾನ್‌ಕೈಂಡ್‌ ಇಂಧನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 23:30 IST
Last Updated 18 ಅಕ್ಟೋಬರ್ 2025, 23:30 IST
   

ಹನುಮ್ಯಾನ್‌ಕೈಂಡ್ (ಸೂರಜ್ ಚೆರೂಕಾಟ್) ರ‍್ಯಾಪ್‌ ಗೀತೆಗಳಿಗೆ ಮೈಯೆಲ್ಲ ಕಿವಿಯಾಗುವ ಹೊಸ ತಲೆಮಾರಿನವರ ಸಂಖ್ಯೆ ದೊಡ್ಡದಿದೆ. ಅಚ್ಚರಿ ಹುಟ್ಟಿಸುವಂತಹ ಲಯದಲ್ಲಿ ಅವರು ಕಟ್ಟುವ ಗೀತೆಗಳ ತೀವ್ರತೆ ಕಂಡು ಸಂಗೀತ ನಿರ್ದೇಶಕ ಶಾಶ್ವತ್ ಸಚ್‌ದೇವ್ ಅವರಿಂದ ‘ಧುರಂಧರ್’ ಹಿಂದಿ ಚಿತ್ರಕ್ಕೆ ಒಂದು ಹಾಡನ್ನು ಹಾಡಿಸಿದ್ದಾರೆ. ಪಂಜಾಬಿ ಜನಪದ ಹಾಗೂ ರ‍್ಯಾಪ್‌ನ ಹದವರಿತ ಮಿಶ್ರಣದ ಶೈಲಿಯಲ್ಲಿರುವ ‘ನಾ ದೇ ದಿಲ್‌ ಪರದೇಸಿ ನು’ (ಜೋಗಿ) ಎಂಬ ಗೀತೆಯನ್ನೇ ಈಗ ಚಿತ್ರದ ಶೀರ್ಷಿಕೆ ಹಾಡೆಂದು ಚಿತ್ರತಂಡ ಪ್ರಕಟಿಸಿದೆ. ಈ ಹಾಡಿನ ಓಘ ಮತ್ತು ವೇಗ ಕಂಡು ನಿಬ್ಬೆರಗಾಗಿರುವ ವರ್ಗವೊಂದು ಅದಾಗಲೇ ಗೀತೆಯ ಗುಣಾವಗುಣಗಳ ವಿಶ್ಲೇಷಣೆಯಲ್ಲಿ ತೊಡಗಿದೆ. ಇದೇ ಮೊದಲ ಬಾರಿಗೆ ಭಾರತದ ಸಿನಿಮಾವೊಂದಕ್ಕೆ ಹನುಮ್ಯಾನ್‌ಕೈಂಡ್‌ ಹಾಡು ಹಾಡಿದ್ದಾರೆನ್ನುವುದು ವಿಶೇಷ. 

2019ರಲ್ಲಿ ‘ಉರಿ– ದಿ ಸರ್ಜಿಕಲ್ ಸ್ಟ್ರೈಕ್’ ಹಿಂದಿ ಸಿನಿಮಾ ನಿರ್ದೇಶಿಸಿ ₹350 ಕೋಟಿಗೂ ಹೆಚ್ಚು ಹಣ ಗಳಿಕೆಗೆ ಕಾರಣರಾಗಿದ್ದ ಆದಿತ್ಯ ಧರ್ ಈ ಚಿತ್ರದ ನಿರ್ದೇಶಕರು. ನಿರ್ಮಾಣದಲ್ಲಿ ಕೂಡ ಅವರ ಪಾಲಿದೆ. ಲೋಕೇಶ್ ಧರ್, ಜ್ಯೋತಿ ದೇಶಪಾಂಡೆ ಅವರು ನಿರ್ಮಾಣದ ತಂಡದಲ್ಲಿರುವ ಪ್ರಮುಖರು. ವಿಕಾಶ್ ನೌಲಾಖಾ ಛಾಯಾಚಿತ್ರಗ್ರಹಣ ಇರುವ ಈ ಸಿನಿಮಾದಲ್ಲಿ ಬೇಹುಗಾರಿಕಾ ಕಥನದ ಎಳೆಯೊಂದು ಇದೆ.  2023ರಲ್ಲಿ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಹಿಂದಿ ಸಿನಿಮಾ ಜನಪ್ರಿಯ ಸಿನಿಮಾ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಗಳಿಸಿತ್ತು. ಅದಾದ ನಂತರ ರಣವೀರ್ ಸಿಂಗ್ ಮೇಲೆ ನಿರೀಕ್ಷೆ ಮೂಡಿಸಿರುವ ಚಿತ್ರವಿದು. ಹಲವು ಆಸಕ್ತಿಕರ ತಿರುವುಗಳಿರುವ, ಸಾಹಸ ದೃಶ್ಯಗಳಿಂದ ಇಡುಕಿರಿದಿರುವ ಈ ಸಿನಿಮಾ, ಬಾಲಿವುಡ್‌ಗೆ ಜೀವಾನಿಲವಾಗಬಲ್ಲದು ಎಂಬ ನಿರೀಕ್ಷೆ ಚಿತ್ರೋದ್ಯಮದಲ್ಲಿದೆ. 

ಸಂಜಯ್ ದತ್, ಆರ್.ಮಾಧವನ್, ಅಕ್ಷಯ್ ಖನ್ನ, ಅರ್ಜುನ್ ರಾಮ್‌ಪಾಲ್ ಹಾಗೂ ಸಾರಾ ಅರ್ಜುನ್ ತಾರಾ ಬಳಗದಲ್ಲಿರುವ ಈ ಸಿನಿಮಾ ಡಿಸೆಂಬರ್‌ನಲ್ಲಿ ತೆರೆಕಾಣಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.