ADVERTISEMENT

ಹಾಸ್ಯಕ್ಕೆ ಸುವರ್ಣಾವಕಾಶ

ಹಾಸ್ಯ ಸವಿಯಲು ಸುವರ್ಣಾವಕಾಶ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 19:30 IST
Last Updated 5 ಡಿಸೆಂಬರ್ 2019, 19:30 IST
ಆಶಿಕಾ
ಆಶಿಕಾ   

ಸಂಪೂರ್ಣ ಹಾಸ್ಯಮಯ ಚಿತ್ರ ‘ಸಾರ್ವಜನಿಕರಿಗೆ ಸುವರ್ಣಾವಕಾಶ’ಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣ ಸಿಕ್ಕಿದ್ದು, ಇದೇ 20ರಂದು ಚಿತ್ರ ತೆರೆಕಾಣಲಿದೆ.

ಮೊದಲ ಬಾರಿಗೆ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವ ಖುಷಿಯಲ್ಲಿರುವ ನಿರ್ದೇಶಕ ಅನೂಪ್‍ ರಾಮಸ್ವಾಮಿ ಕಶ್ಯಪ್ ಈ ಮಾಹಿತಿ ಹಂಚಿಕೊಳ್ಳಲು ಸುದ್ದಿಗೋಷ್ಠಿಗೆ ಹಾಜರಾಗಿದ್ದರು.

ಕವಲುದಾರಿ ಖ್ಯಾತಿಯ ನಟ ರಿಷಿ ಈ ಚಿತ್ರದ ನಾಯಕ. ಇದು ಅವರಿಗೆ ಮೂರನೇ ಚಿತ್ರ. ಇದರಲ್ಲಿ ನಾಯಕಿಯಾಗಿ ನಟಿಸಿರುವನಟಿ ಧನ್ಯಾರಾಮಕೃಷ್ಣಗೆ ಕನ್ನಡದಲ್ಲಿ ಮೊದಲ ಚಿತ್ರ.

ADVERTISEMENT

ಚಿತ್ರದ ನಾಯಕಎಂಬಿಎ ಪದವೀಧರ. ಅಪ್ಪ ಮಾಡಿದ ಸಾಲ ತೀರಿಸಲು ಒಂದು ಬಂಪರ್ ಆಫರ್ ಸಿಕ್ಕಿದೆ ಎಂದು ನಂಬಿ ಹೋದಾಗ ಆಗುವ ಪರಿಣಾಮ ಬೇರೆಯದ್ದೇ ಆಗಿರುತ್ತದೆ. ಅದನ್ನು ಭೇದಿಸಿ ನಾಯಕ ಹೇಗೆ ಹೊರಬರುತ್ತಾನೆ ಎನ್ನುವುದು ಚಿತ್ರದ ಕುತೂಹಲ. ಇದರಲ್ಲಿ ಭರಪೂರ ಮನರಂಜನೆ ಇದೆಯಂತೆ. ಪ್ರೇಕ್ಷಕರಿಗೂ ಹಾಸ್ಯದ ಸನ್ನಿವೇಶಗಳನ್ನು ನೋಡಿ ನಕ್ಕು ಖುಷಿಪಡಲು ಸುವರ್ಣಕಾಶವಿದೆ ಎನ್ನುವ ಮಾತು ಸೇರಿಸಿದರು ನಿರ್ದೇಶಕರು.

ಬೆಂಗಳೂರಿನಲ್ಲೇಸಂಪೂರ್ಣ ಚಿತ್ರೀಕರಣ ನಡೆಸಲಾಗಿದೆ.ಮಾರ್ಕೆಟ್‌ ದೃಶ್ಯವನ್ನು ಸೆಟ್‌ ಹಾಕಿ ಚಿತ್ರೀಕರಿಸಲಾಗಿದೆ. ಪ್ರೇಕ್ಷಕರಿಗೆ ಇರಿಸು ಮುರಿಸು ಆಗುವಂತ ದೃಶ್ಯಗಳು, ಸಂಭಾಷಣೆಗಳು ಇಲ್ಲದಿರುವುದೇ ಚಿತ್ರದ ಪ್ಲಸ್ ಪಾಯಿಂಟ್. ಸರಳ ಕಥೆಯೊಂದನ್ನು ವಿನೂತನವಾಗಿ ನಿರೂಪಿಸಲಾಗಿದೆ ಎಂದರು. ದತ್ತಣ್ಣ, ಶಾಲಿನಿ, ಮಿತ್ರ, ರಂಗಾಯಣ ರಘು, ಸಿದ್ದುಮೂಲಿಮನೆ, ಆಶಿಕಾ, ಆನಂದ್‍ ತುಮಕೂರು ಅವರ ತಾರಾಗಣವಿದೆ.

ಪ್ರಶಾಂತ್‍ ರೆಡ್ಡಿ, ದೇವರಾಜ್‍ ರಾಮಣ್ಣ ಮತ್ತು ಜನಾರ್ದನ್‍ ಚಿಕ್ಕಣ್ಣ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರಚನೆ ಜನಾರ್ದನ್‍ ಚಿಕ್ಕಣ್ಣ- ಹರಿಕೃಷ್ಣ, ಛಾಯಾಗ್ರಹಣ ವಿಘ್ನೇಶ್‍ರಾಜ್, ಸಂಕಲನ ಶಾಂತಕುಮಾರ್, ಸಾಹಸ ಶಖಿ ಸರವಣನ್, ನೃತ್ಯ ಶ್ರೀಧರ್-ಅಜರ್ ಅವರದ್ದು.

ನಾಗೇಂದ್ರಪ್ರಸಾದ್, ಅಲೋಕ್, ಅನೂಪ್‌ ರಾಮಸ್ವಾಮಿ ಸಾಹಿತ್ಯದ ನಾಲ್ಕು ಹಾಡುಗಳಿಗೆ ಮಿಥುನ್‍ಮುಕುಂದನ್ ಸಂಗೀತ ಸಂಯೋಜಿಸಿದ್ದಾರೆ. ಒಂದು ಗೀತೆಯನ್ನು ನಟ ಪುನೀತ್‍ ರಾಜ್‍ಕುಮಾರ್ ಹಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.