ADVERTISEMENT

ಕನ್ನಡ ಚಿತ್ರರಂಗಕ್ಕೆ ನೆರವು ನೀಡಿ: ಕಲಾವಿದರಿಂದ ಸರ್ಕಾರಕ್ಕೆ ಮನವಿ

ಶಿವರಾಜ್‌ಕುಮಾರ್‌ ನೇತೃತ್ವದ ನಿಯೋಗದಿಂದ ಮುಖ್ಯಮಂತ್ರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 17:21 IST
Last Updated 9 ಸೆಪ್ಟೆಂಬರ್ 2020, 17:21 IST
ಕನ್ನಡ ಚಿತ್ರರಂಗದ ನಿಯೋಗ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬುಧವಾರ ಮನವಿ ಸಲ್ಲಿಸಿತು
ಕನ್ನಡ ಚಿತ್ರರಂಗದ ನಿಯೋಗ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬುಧವಾರ ಮನವಿ ಸಲ್ಲಿಸಿತು   

ಬೆಂಗಳೂರು: ಲಾಕ್‌ಡೌನ್‌ ಪರಿಣಾಮ ಕನ್ನಡ ಚಿತ್ರರಂಗ ಸಂಕಷ್ಟದ ಸುಳಿಗೆ ಸಿಲುಕಿದೆ. ಹೀಗಾಗಿ ಚಿತ್ರರಂಗದ ಕಾರ್ಮಿಕರಿಗೆ ಆರ್ಥಿಕ ನೆರವು, ಆದಷ್ಟು ಬೇಗ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ನಟ ಶಿವರಾಜ್‌ಕುಮಾರ್‌ ನೇತೃತ್ವದಲ್ಲಿ ಕನ್ನಡ ಚಿತ್ರರಂಗದ ನಿಯೋಗವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿತು.

ನಿಯೋಗದ ಅಹವಾಲು ಆಲಿಸಿದ ಮುಖ್ಯಮಂತ್ರಿ, ‘ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಚಿತ್ರರಂಗಕ್ಕೆ ಸಾಧ್ಯವಾಗುವ ಎಲ್ಲ ರೀತಿಯ ನೆರವು ನೀಡಲು ಬದ್ಧ’ ಎಂದು ಭರವಸೆ ನೀಡಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌ ಡಿ.ಆರ್‌., ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ನಟರಾದ ಯಶ್‌, ‘ದುನಿಯಾ’ ವಿಜಯ್‌, ನಟಿ ತಾರಾ ಅನುರಾಧಾ ಸೇರಿದಂತೆ ನಿರ್ದೇಶಕರು, ನಿರ್ಮಾಪಕರು ನಿಯೋಗದಲ್ಲಿದ್ದರು.

ADVERTISEMENT

ಲಾಕ್‌ಡೌನ್‌ನಿಂದಾಗಿ ಸಿನಿಮಾ ಚಟುವಟಿಕೆ ಸ್ಥಗಿತಗೊಂಡಿದೆ. ಹೀಗಾಗಿ, ಈ ಉದ್ಯಮ ನಂಬಿಕೊಂಡಿರುವ ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿಗೆ ನಿಯೋಗ ಮನವರಿಕೆ ಮಾಡಿಕೊಟ್ಟಿತು.

ಚಿತ್ರೋದ್ಯಮವನ್ನು ಕೈಗಾರಿಕೋದ್ಯಮವಾಗಿ ಪರಿಗಣಿಸಬೇಕು, ಸ್ಟುಡಿಯೊಗಳಿಗೆ ವಿದ್ಯುತ್‌ ಶುಲ್ಕ, ನೀರಿನ ಶುಲ್ಕ, ಆಸ್ತಿ ತೆರಿಗೆಯಲ್ಲಿ ವಿನಾಯಿತಿ ನೀಡಬೇಕು, ಏಕಪರದೆಯ ಚಿತ್ರಮಂದಿರಗಳಲ್ಲಿರುವ ಕಾರ್ಮಿಕರನ್ನು ಕಾರ್ಮಿಕ ಇಲಾಖೆಯ ಪರಿಮಿತಿಯಲ್ಲಿ ಪರಿಗಣಿಸುವುದು ಸೇರಿ ಒಟ್ಟು 14 ಬೇಡಿಕೆಗಳ ಮನವಿಯನ್ನು ಮುಖ್ಯಮಂತ್ರಿಯವರಿಗೆ ನಿಯೋಗ ಸಲ್ಲಿಸಿದೆ.

ಇತ್ತೀಚೆಗೆ ಚಿತ್ರತಂಡದ ನಿಯೋಗವು ಸಚಿವ ಸಿ.ಟಿ. ರವಿ ಮತ್ತು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರನ್ನೂ ಭೇಟಿ ಮಾಡಿ ಚರ್ಚಿಸಿತ್ತು.

ಸಭೆಯ ಬಳಿಕ ಮಾತನಾಡಿದ ಶಿವರಾಜ್‌ಕುಮಾರ್‌, ‘ಲಾಕ್‌ಡೌನ್‌ನಿಂದ ಚಿತ್ರರಂಗಕ್ಕೆ ಆಗಿರುವ ನಷ್ಟದ ಬಗ್ಗೆ ಮುಖ್ಯಮಂತ್ರಿಗೆ ಮಾಹಿತಿ ನೀಡಿದ್ದೇವೆ. ನಟರು ಎಂದಾಕ್ಷಣ ಸಮಸ್ಯೆಯೇ ಇಲ್ಲ ಎಂದು ಭಾವಿಸಬಾರದು. ಚಿತ್ರರಂಗದ ಸಮಸ್ಯೆ ಬಗ್ಗೆ ಮನವಿ ಮಾಡಿಕೊಂಡಿದ್ದೇವೆ. ಆದಷ್ಟು ಬೇಗ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದರು.

ನಟ ಯಶ್‌ ಮಾತನಾಡಿ, ‘ಕನ್ನಡ ಚಿತ್ರರಂಗ ಸಮೃದ್ಧವಾಗಿದೆ. ನಾಡಿನ ವಿವಿಧ ಮೂಲೆಗಳಿಂದ ಚಿತ್ರೋದ್ಯಮದಲ್ಲಿ ದುಡಿಯಲು ಕನಸುಗಳನ್ನು ಹೊತ್ತುಕೊಂಡು ಸಾವಿರಾರು ಯುವಕರು ಬರುತ್ತಿದ್ದಾರೆ. ಆದರೆ, ಅವರಿಗೆ ಸಿನಿಮಾ ಬಗ್ಗೆ ತರಬೇತಿ ನೀಡುವ ಸರಿಯಾದ ಸಂಸ್ಥೆಯಿಲ್ಲ. ಕೂಡಲೇ, ಗುಣಮಟ್ಟದ ತರಬೇತಿ ಸಂಸ್ಥೆ ಆರಂಭಿಸುವಂತೆಯೂ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.