ಧರ್ಮೇಂದ್ರ ಹಾಗೂ ಹೇಮಾ ಮಾಲಿನಿ
ಎಕ್ಸ್ ಚಿತ್ರ
ಮುಂಬೈ: ‘ನನಗೆ ಅವರು ಎಲ್ಲವೂ ಆಗಿದ್ದರು. ಜತೆಗಾರ, ಮಾರ್ಗದರ್ಶಕ ಹಾಗೂ ಸ್ನೇಹಿತ. ಅವರ ಅಗಲಿಕೆಯು ನನ್ನಲ್ಲಿ ಭರಿಸಲಾಗದ ಶೂನ್ಯ ಆವರಿಸಿದಂತಾಗಿದೆ’ ಎಂದು ಸಂಸದೆಯೂ ಆಗಿರುವ ನಟಿ ಹೇಮಾ ಮಾಲಿನಿ ಅವರು ಇತ್ತೀಚೆಗೆ ಅಗಲಿದ ತಮ್ಮ ಪತಿ ಧರ್ಮೇಂದ್ರ ಕುರಿತು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಬಾಲಿವುಡ್‌ನ ಹೀ–ಮ್ಯಾನ್ ಎಂದೇ ಖ್ಯಾತರಾಗಿದ್ದ ನಟ ಧರ್ಮೇಂದ್ರ (89) ಅವರು ನ. 24ರಂದು ನಿಧನರಾದರು. ಇದಾದ ನಂತರ ಮೊದಲ ಬಾರಿಗೆ ಪೋಸ್ಟ್ ಹಂಚಿಕೊಂಡಿರುವ ಹೇಮಾ ಮಾಲಿನಿ, ತಮ್ಮ ದುಃಖವನ್ನು ಅಕ್ಷರ ರೂಪದಲ್ಲಿ ದಾಖಲಿಸಿದ್ದಾರೆ.
‘ಪ್ರೀತಿಸುವ ಪತಿಯಾಗಿ, ಪುತ್ರಿಯರಾದ ಇಶಾ ಮತ್ತು ಅಹಾನಾ ಅವರಿಗೆ ಹೆಮ್ಮೆಯ ತಂದೆಯಾಗಿ, ಜತೆಗೆ ಇಡೀ ಕುಟುಂಬ ಸದಸ್ಯರೂ ಸಲುಗೆ ಬೆಳೆಸಿಕೊಳ್ಳುವಷ್ಟರ ಮಟ್ಟಿಗೆ ಎಲ್ಲರಿಗೂ ಪ್ರೀತಿಪಾತ್ರರಾಗಿದ್ದವರು ಧರ್ಮೇಂದ್ರ ಜಿ. ಅವರು ನನಗೆ ಎಲ್ಲವೂ ಆಗಿದ್ದರು. ನನ್ನ ಎಲ್ಲಾ ಅಗತ್ಯ ಸಂದರ್ಭಗಳಲ್ಲೂ ನನಗೆ ಬೇಕಾಗಿದ್ದನ್ನು ನೀಡುತ್ತಿದ್ದ ಸ್ನೇಹಿತ, ತತ್ವಜ್ಞಾನಿ, ಮಾರ್ಗದರ್ಶನಕ, ಕವಿ ಹೀಗೆ ಎಲ್ಲವೂ. ನನ್ನ ಒಳ್ಳೆಯ ಹಾಗೂ ಕೆಟ್ಟ ಪರಿಸ್ಥಿತಿಯಲ್ಲೂ ನನ್ನೊಂದಿಗಿದ್ದರು’ ಎಂದು ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಅಹನಾ ಹಾಗೂ ಇಶಾ ದೇವಲ್ ಜತೆ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ
‘ತಮ್ಮ ಸರಳ ಹಾಗೂ ಸ್ನೇಹಪರ ವ್ಯಕ್ತಿತ್ವದ ಮೂಲಕವೇ ಅವರು ನನ್ನ ಕುಟುಂಬದ ಎಲ್ಲಾ ಸದಸ್ಯರಿಗೂ ಹತ್ತಿರವಾಗಿದ್ದರು. ಪ್ರತಿಯೊಬ್ಬರೂ ಅವರನ್ನು ಪ್ರೀತಿಸುತ್ತಿದ್ದರು’ ಎಂದಿರುವ 77 ವರ್ಷದ ಹೇಮಾ ಮಾಲಿನಿ, ಕೆಲ ಅಪರೂಪದ ಹಳೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
‘ಧರ್ಮೇಂದ್ರ ಅವರ ಅಗಲಿಕೆಯ ನಷ್ಟ ಪದಗಳಲ್ಲಿ ವಿವರಿಸುವುದು ಅಸಾಧ್ಯ. ಈ ನಿರ್ವಾತವು ಜೀವನದುದ್ದಕ್ಕೂ ಇರಲಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘ಹಲವು ವರ್ಷಗಳ ಕಾಲ ಜತೆಗಿದ್ದ ನನಗೆ ಸದಾ ಮೆಲುಕು ಹಾಕಲು ಬಹಳಷ್ಟು ಮಧುರ ನೆನಪುಗಳನ್ನು ಅವರು ಬಿಟ್ಟುಹೋಗಿದ್ದಾರೆ’ ಎಂದು ಹೇಮಾ ಮಾಲಿನಿ ಹೇಳಿದ್ದಾರೆ.
ಶೋಲೆ, ಸೀತಾ ಔರ್ ಗೀತಾ ಮತ್ತು ಪ್ರತಿಗ್ಯಾ ಚಿತ್ರಗಳಲ್ಲಿ ಹೇಮಾ ಹಾಗೂ ಧರ್ಮೇಂದ್ರ ಅವರು ಒಟ್ಟಿಗೆ ನಟಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.