ADVERTISEMENT

ಏಪ್ರಿಲ್‌ನಲ್ಲಿ ‘ಹಿಟ್ಲರ್‌’ ತೆರೆಗೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 18:14 IST
Last Updated 8 ಫೆಬ್ರುವರಿ 2021, 18:14 IST
ಹಿಟ್ಲರ್‌ ಚಿತ್ರದಲ್ಲಿ ಸಸ್ಯ ಮತ್ತು ಲೋಹಿತ್‌
ಹಿಟ್ಲರ್‌ ಚಿತ್ರದಲ್ಲಿ ಸಸ್ಯ ಮತ್ತು ಲೋಹಿತ್‌   

‘ಹಿಟ್ಲರ್‌’ ಚಿತ್ರದ ಟೀಸರ್‌ ಬಿಡುಗಡೆಯಾದ 12 ಗಂಟೆಗಳ ಒಳಗೆ ಒಂದು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಈ ಚಿತ್ರ ಏಪ್ರಿಲ್‌ 9ರಂದು ತೆರೆಗೆ ಬರಲಿದೆ. ಬಿಡುಗಡೆಯ ದಿನಾಂಕವನ್ನು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಿಡುಗಡೆ ಮಾಡಿದರು.

ಜನಾರ್ದನ ರೆಡ್ಡಿ ಮಾತನಾಡಿ, ‘ಇಡೀ ಜಗತ್ತಿಗೆ ಹೆಸರು ತಂದು ಕೊಟ್ಟ ಸಿನಿಮಾ ಅಂದರೆ ‘ಕೆಜಿಎಫ್’. 2008ರ ‘ಹಂಪಿ ಉತ್ಸವ’ದಲ್ಲಿ ಯಶ್ ಅವರು ಶ್ರೀಕೃಷ್ಣದೇವರಾಯನ ಒಂದು ಪಾತ್ರವನ್ನು ಚೆನ್ನಾಗಿ ಮಾಡಿದ್ದರು. ನಿಮಗೆ ಒಳ್ಳೆಯ ಭವಿಷ್ಯವಿದೆ. ಎಲ್ಲರೂ ಹೊಗಳುವಂತೆ ಆಗುವಿರಿ ಎಂದು ಅಂದು ಹೇಳಿದ್ದೆ. ಕಿನ್ನಾಳ್‌ರಾಜ್ ‘ಕೆಜಿಎಫ್’ ಚಿತ್ರದಲ್ಲಿ ಅಮ್ಮನ ಬಗ್ಗೆ ಬರೆದ ಹಾಡು ಮನ ಮುಟ್ಟುತ್ತದೆ. ಉತ್ತರ ಕರ್ನಾಟಕದ ಪ್ರತಿಭೆಗಳು ಈ ಮಟ್ಟಕ್ಕೆ ಬಂದಿರುವುದು ಸಂತಸ ತಂದಿದೆ. ಇದು ಕೂಡ ಯಶ್ ಸಿನಿಮಾದಂತೆ ಆಗಲಿ’ ಎಂದು ಹಾರೈಸಿದರು.

ಹಿಟ್ಲರ್‌ ಚಿತ್ರದ ಕಥೆ, ಎಲ್ಲ ಸಾಹಿತ್ಯ ಬರೆದ ಕಿನ್ನಾಳರಾಜ್‌ ಮಾತನಾಡಿ, ‘ಬರವಣಿಗೆ ನನ್ನ ಇಷ್ಟದ ಕೆಲಸ. ವರ್ಷಕ್ಕೊಮ್ಮೆ ನಿರ್ದೇಶನ ಮಾಡುವ ಬಗ್ಗೆ ಯೋಚನೆ ಇದೆ. ‘ಹಿಟ್ಲರ್‌’ ಕಥೆಯ ಒಂದು ಎಳೆಯನ್ನು ನಿರ್ಮಾಪಕರಿಗೆ ಹೇಳಿದೆ. ಚೆನ್ನಾಗಿದೆ. ನಾನೇ ಮಾಡುತ್ತೇನೆ ಎಂದು ಭರವಸೆ ನೀಡಿದರು. ಇಲ್ಲಿಯತನಕ ತಂದು ನಿಲ್ಲಿಸಿದೆ. ಭೂಗತಲೋಕದಲ್ಲಿ ಅನಾಥ ಹುಡುಗನೊಬ್ಬ ಕಾನೂನುಬಾಹಿರ ಚಟುವಟಿಕೆಗಳನ್ನು ಮಾಡುತ್ತಿರುತ್ತಾನೆ. ಮುಂದೆ ತನ್ನ ದಾರಿ ಸರಿಯಿಲ್ಲ ಎಂದು ಅರಿತು, ಅದರಿಂದ ಹೊರ ಬಂದಾಗ ಏನೇನು ಕಷ್ಟಗಳು ಎದುರಾಗುತ್ತವೆ. ಅದನ್ನು ಹೇಗೆ ನಿಭಾಯಿಸುತ್ತಾನೆ ಎಂಬುದು ಚಿತ್ರದ ಸಾರಾಂಶ’ ಎಂದರು.

ADVERTISEMENT

‘ನಿರ್ದೇಶಕರೊಂದಿಗೆ ಹನ್ನೆರಡು ವರ್ಷದ ಒಡನಾಟವಿದೆ. ಅಂದೇ ನನ್ನ ಸಂಗೀತದಲ್ಲಿ ಅವರು ನಿರ್ದೇಶನ ಮಾಡಬೇಕಿತ್ತು. ಕಾಲಕೂಡಿ ಬರಲಿಲ್ಲ. ಅವರಿಗೆ ಎಲ್ಲಾ ಛಾಯೆಗಳ ಬರವಣಿಗೆ ಗೊತ್ತಿದೆ. ಅವರುಗಳ ಶ್ರಮ ತೆರೆಯ ಮೇಲೆ ಬಂದಿದೆ. ಇನ್ನೆನಿದ್ದರೂ ಪ್ರೇಕ್ಷಕರು ನಮಗೆ ಹರಸಬೇಕು’ ಎಂದು ಸಂಗೀತ ಸಂಯೋಜಕ ರವಿಬಸ್ರೂರು ಹೇಳಿದರು.

ಕೆಜಿಎಫ್‌ಖ್ಯಾತಿಯ ಗರುಡರಾಮ್ ಮಾತನಾಡಿದರು.

ನಾಯಕ ಲೋಹಿತ್, ಗಾರ್ಮೆಂಟ್ಸ್ ಹುಡುಗಿಯಾಗಿ ಸಸ್ಯ, ಮಾಜಿ ರೌಡಿಯಾಗಿ ಬಲರಾಜವಾಡಿ, ಖಳನಾಗಿ ವರ್ಧನ್‌ ತೀರ್ಥಹಳ್ಳಿ, ಸಂಗೀತ ನಿರ್ದೇಶಕ ಆಕಾಶ್‌ಪರ್ವ, ಎಸ್ಕಾರ್ಟ್ ಶಂಕರ್, ಮನಮೋಹನ್‌ರೈ, ವಿಜಯ್‌ಚೆಂಡೂರು ಇದ್ದರು. ಗಾನಶಿವ ಮೂವೀಸ್ ಮುಖಾಂತರ ಮಮತಾ ಲೋಹಿತ್ ಈ ಚಿತ್ರ ನಿರ್ಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.