ಹೃತಿಕ್ ರೋಷನ್
ಇನ್‌ಸ್ಟಾಗ್ರಾಂ ಚಿತ್ರ
ಮುಂಬೈ: ಶಾರುಕ್ ಖಾನ್, ಸಲ್ಮಾನ್ ಖಾನ್ ಹಾಗೂ ಆಮಿರ್ ಖಾನ್ ಅವರಂಥ ಸ್ಟಾರ್ ನಟರು ಮಾಡುತ್ತಾರೆ ಎಂದುಕೊಂಡಿದ್ದ ‘ಕಹೋ ನಾ ಪ್ಯಾರ್ ಹೇ’ ಕಥೆಯಲ್ಲಿ ನೀನು ನಾಯಕ ಎಂದು ತಂದೆ ರಾಕೇಶ್ ರೋಷನ್ ಹೇಳಿದ ಮಾತು ನನ್ನಲ್ಲಿ ಅಚ್ಚರಿ, ಕುತೂಹಲ, ಭಯ ಎಲ್ಲವನ್ನೂ ಮೂಡಿಸಿತ್ತು.
2000 ಇಸವಿಯಲ್ಲಿ ಬಿಡುಗಡೆಯಾದ ಈ ಬ್ಲಾಕ್‌ಬಸ್ಟರ್ ಸಿನಿಮಾ ಮೂಲಕ ಹೃತಿಕ್ ರೋಷನ್ ಪೂರ್ಣ ಪ್ರಮಾಣದಲ್ಲಿ ನಾಯಕ ನಟನಾಗಿ ಹೊರಹೊಮ್ಮಿದರು. ಚಿತ್ರದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಕಹೋ ನಾ ಪ್ಯಾರ್ ಹೇ ಸಿನಿಮಾ ಚಿತ್ರಮಂದಿರಗಳಲ್ಲಿ ಮತ್ತೊಮ್ಮೆ ಬಿಡುಗಡೆ ಕಂಡಿದೆ.
ಸಿನಿಮಾದ ನಾಯಕ ನಟಿ ಅಮಿಶಾ ಪಟೇಲ್ ಹಾಗೂ ಇತರ ಪಾತ್ರವರ್ಗಗಳ ಕುರಿತು ಹೃತಿಕ್ ಮೆಲುಕು ಹಾಕಿದ್ದಾರೆ. ಕಿಂಗ್ ಅಂಕಲ್, ಕರಣ್ ಅರ್ಜುನ್ ಹಾಗೂ ಕೊಯ್ಲಾ ಸಿನಿಮಾಗಳಲ್ಲಿ ತಂದೆ ರಾಕೇಶ್ ರೋಷನ್ ಜತೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ಹೃತಿಕ್ ‘ಕಹೋ ನಾ... ಪ್ಯಾರ್ ಹೇ’ ಚಿತ್ರದ ನಾಯಕ ಯಾರು ಎಂಬ ಕುತೂಹಲದಲ್ಲಿದ್ದರು. ಆದರೆ ಈ ಚಿತ್ರಕಥೆ ನಿನಗಾಗಿ ಸಿದ್ಧಪಡಿಸಿದ್ದು ಎಂಬ ತಂದೆಯ ಉತ್ತರ ಕೇಳಿ ಅಚ್ಚರಿಗೊಂಡಿದ್ದನ್ನು ನೆನಪಿಸಿಕೊಂಡಿದ್ದಾರೆ.
‘ನಾಲ್ಕು ತಿಂಗಳಲ್ಲಿ ಚಿತ್ರಕ್ಕೆ ಸಜ್ಜಾಗುವಂತೆ ತಂದೆ ಸೂಚಿಸಿದರು. ನಾನು ಆರು ತಿಂಗಳು ಕೇಳಿದೆ. ಹೀಗೆ ಈ ಚಿತ್ರದ ನಿರ್ಮಾಣ ಆರಂಭವಾಯಿತು’ ಎಂದು 51 ವರ್ಷದ ಹೃತಿಕ್ ರೋಷನ್ ಹೇಳಿದ್ದಾರೆ.
ಕಹೋ ನಾ ಪ್ಯಾರ್ ಹೇ ಚಿತ್ರದಲ್ಲಿ ಹೃತಿಕ್ ರೋಷನ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಬಡ ಗಾಯಕ ರೋಹಿತ್‌ನನ್ನು ಶ್ರೀಮಂತ ಮನೆಯ ಸೋನಿಯಾ ಪ್ರೀತಿಸುತ್ತಾಳೆ. ಆದರೆ ಆತನ ಕೊಲೆಯಾಗುತ್ತದೆ. ನ್ಯೂಜಿಲೆಂಡ್‌ಗೆ ತೆರಳಿದ ನಾಯಕಿಗೆ ತನ್ನ ಗೆಳೆಯನನ್ನೇ ಹೋಲುವ ರಾಜ್ ಎಂಬಾತ ಭೇಟಿಯಾಗುತ್ತಾನೆ. ಸ್ನೇಹಕ್ಕೆ ತಿರುಗುವ ಈ ಭೇಟಿಯ ನಂತರ, ರಾಜ್ ಸಾವಿನ ರಹಸ್ಯವನ್ನು ಭೇದಿಸುವ ಯತ್ನ ನಡೆಸುವುದೇ ಈ ಚಿತ್ರದ ಕಥಾ ಹಂದರ.
ಚಿತ್ರದಲ್ಲಿ ಅನುಪಮ್ ಖೇರ್, ದಲೀಪ್ ತಾಹಿಲ್, ಮೊನಿಷ್ ಬಾಲ್, ಆಶೀಶ್ ವಿದ್ಯಾರ್ಥಿ, ಸತೀಶ್ ಶಾ, ಫರೀದಾ ಜಲಾಲ್ ಹಾಗೂ ತನ್ನಾಝ್ ಇರಾನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ನಂತರ ಹೃತಿಕ್ ಅತ್ಯಂತ ಬೇಡಿಕೆಯ ನಟರಾದರು. ಕಭಿ ಖುಷಿ ಕಭಿ ಘಂ, ಕೋಯಿ ಮಿಲ್‌ಗಯಾ, ಲಕ್ಷ್ಯ, ಧೂಮ್–2, ಜೋಧಾ ಅಖ್ಬರ್, ಕ್ರಿಷ್, ಝಿಂದಗಿ ನಾ ಮಿಲೇಂಗೆ ದೊಬಾರಾ, ಸೂಪರ್ 30, ವಾರ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
‘ಝಿಂದಿಗಿ ನಾ ಮಿಲೇಂಗೆ ದೊಬಾರಾ’ದಂತ ಚಿತ್ರಗಳು ಎಂದೂ ಮಾಸವುದಿಲ್ಲ. ಇಂಥ ಚಿತ್ರದ ಭಾಗವಾಗಿದ್ದು ನನಗೆ ಹೆಮ್ಮೆ ಎನಿಸುತ್ತದೆ. ಲಕ್ಷ್ಯ ಚಿತ್ರದ ‘ಮೇ ಐಸಾ ಕ್ಯೋ ಹೂಂ...’ ಗೀತೆಗೆ ಪ್ರಭು ದೇವಾ ನೃತ್ಯ ಸಂಯೋಜನೆ ಮಾಡಿದ್ದರು. ಇದು ನಾನು ಮಾಡಿದ ಅತ್ಯಂತ ಸವಾಲಿನ ನೃತ್ಯವಾಗಿತ್ತು. ಇದಕ್ಕಾಗಿ ಎರಡು ತಿಂಗಳ ಸಮಯ ತೆಗೆದುಕೊಂಡಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.
‘ಬಹಳಷ್ಟು ಜನರಿಗೆ ಸ್ಟಾರ್ ಆಗುವುದೇ ಖುಷಿ ಕೊಡುತ್ತದೆ. ಆದರೆ ನನಗೆ ನಟ ಎಂಬ ಪದವೇ ಹೆಚ್ಚು ಹೆಮ್ಮೆ ಪಡುವ ವಿಚಾರವಾಗಿದೆ. ಸ್ಟಾರ್ ಆದರೆ ಸಿಗುವ ಅಭಿಮಾನಿಗಳು ಹಾಗೂ ಅವರ ಪ್ರೀತಿ ಎಂದಿಗೂ ಮರೆಯಲಾಗದು. ಇದು ಜವಾಬ್ದಾರಿಯನ್ನೂ ಹೆಚ್ಚಿಸುತ್ತದೆ. ಆದರೆ ಸ್ಟಾರ್‌ಗಿರಿಯನ್ನಿಟ್ಟುಕೊಂಡು ಏನು ಮಾಡುವುದು ಎಂಬುದೇ ನನಗೆ ಅರ್ಥವಾಗಿಲ್ಲ. ಹೀಗಾಗಿ ಸರಳವಾಗಿದ್ದುಬಿಡುವುದನ್ನೇ ರೂಢಿಸಿಕೊಂಡಿದ್ದೇನೆ’ ಎಂದಿದ್ದಾರೆ ಹೃತಿಕ್.
ಹೃತಿಕ್ ರೋಷನ್ ಅವರು ವಾರ್–2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದು ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಜತೆ ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದಾರೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.