
‘ಧ್ವಜ’ ಸಿನಿಮಾ ಮೂಲಕ ನಾಯಕನಾಗಿ ಚಂದನವನದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದ ನಟ ರವಿ ಗೌಡ, ‘ಐ ಆ್ಯಮ್ ಗಾಡ್’ ಎಂಬ ಸಿನಿಮಾ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಈ ಸಿನಿಮಾ ಇಂದು (ನ.7) ತೆರೆಕಂಡಿದೆ. ನಟನೆ, ನಿರ್ದೇಶನದ ಜೊತೆಗೆ ಈ ಸಿನಿಮಾದ ನಿರ್ಮಾಣವನ್ನೂ ಅವರೇ ಮಾಡಿದ್ದು ಈ ಕುರಿತು ಸಿನಿಮಾ ರಂಜನೆ ಜೊತೆಗೆ ಮಾತಿಗೆ ಸಿಕ್ಕಾಗ...
‘ನಾನು ‘ಧ್ವಜ’ ಸಿನಿಮಾ ರಿಲೀಸ್‌ಗೂ ಮುನ್ನವೇ ‘ಉಪ್ಪಿ–2’ನಲ್ಲಿ ನಿರ್ದೇಶನ ತಂಡದಲ್ಲಿ ಕೆಲಸ ಮಾಡಿದ್ದೆ. ‘ಧ್ವಜ’ ರಿಮೇಕ್ ಸಿನಿಮಾವಾಗಿತ್ತು. ಇದಾದ ಬಳಿಕ ಈ ಕ್ಷೇತ್ರದಲ್ಲಿ ಮುಂದುವರಿಯಬೇಕೇ, ಬೇಡವೇ ಎನ್ನುವುದರಲ್ಲೇ ಒಂದು ವರ್ಷ ಕಳೆದೆ. ಬಳಿಕ ಸಿನಿಮಾ ಮಾಡಲು ಸ್ಕ್ರಿಪ್ಟ್ ಹುಡುಕತೊಡಗಿದೆ. ಯಾವುದೂ ಸಿಗದೇ ಇದ್ದಾಗ ನಾನೇ ಕಥೆ ಬರೆಯಲು ಕುಳಿತೆ. ಯಾವುದೇ ಅನುಭವ ಇಲ್ಲದೇ ಈ ಕೆಲಸಕ್ಕೆ ಕೈಹಾಕಿದ ಕಾರಣ ಹಾಗೂ ಒಂದು ಕೊನೆಯ ಪ್ರಯತ್ನವೆಂಬಂತೆ ನನ್ನ ಹೆಜ್ಜೆ ಇದ್ದ ಕಾರಣ ಕೊಂಚ ಹೆಚ್ಚಿನ ಅವಧಿಯನ್ನೇ ಇದಕ್ಕಾಗಿ ತೆಗೆದುಕೊಂಡೆ. ಸಿನಿಮಾದ ಶೂಟಿಂಗ್ ಆರಂಭಿಸಿದ ಬಳಿಕವೂ ಕೆಲ ಕ್ಷುಲ್ಲಕ ಕಾರಣಗಳಿಂದ ಚಿತ್ರೀಕರಣ ವಿಳಂಬವಾಗುತ್ತಾ ಬಂತು. ಈ ಸಿನಿಮಾದ ನಿರ್ದೇಶಕ, ನಾಯಕ, ನಿರ್ಮಾಪಕ ನಾನೇ. ಇದರಿಂದ ಸಿನಿಮಾಗೆ ಯಾವ ರೀತಿಯೂ ತೊಂದರೆ ಆಗಿಲ್ಲ. ಈ ಜವಾಬ್ದಾರಿಯಿಂದ ಸ್ವಲ್ಪ ಕಷ್ಟವಾಯಿತು ಬಿಟ್ಟರೆ ಹೆಚ್ಚಿನ ವಿಷಯಗಳನ್ನು ಕಲಿತೆ ಎನ್ನಬಹುದು. ಕಲಾವಿದರ ಡೇಟ್ ಸಮಸ್ಯೆ, ಹಾಡೊಂದು ತಡವಾಯಿತು ಹೀಗೆ ನಾನಾ ಕಾರಣಗಳಿಂದ ಸಿನಿಮಾ ಮುಂದೂಡಿಕೆಯಾಯಿತು. ನಾನೇ ನಿರ್ಮಾಪಕನಾಗಿದ್ದ ಕಾರಣ ಹೆಚ್ಚು ಸಮಸ್ಯೆಯಾಗಲಿಲ್ಲ. ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುವುದು ಸವಾಲಿನದ್ದಾಗಿತ್ತು’ ಎನ್ನುತ್ತಾರೆ ರವಿ.
‘ಉಪೇಂದ್ರ ಅವರಿಂದ ಚಿತ್ರಕಥೆಯ ಸ್ಟೈಲ್ ಕಲಿತೆ. ಯಾವುದೇ ಸಿನಿಮಾದ ಅನುಭವ ಇಲ್ಲದೇ ಅವರ ತಂಡ ಸೇರಿಕೊಂಡಿದ್ದೆ. ಸಿನಿಮಾದ ಪ್ರತಿಯೊಂದು ವಿಷಯವನ್ನೂ ಕಲಿತದ್ದು ಅಲ್ಲೇ. ನಾನು ನಟನಾಗಬೇಕು ಎನ್ನುವ ಆಸೆ ಹೊತ್ತಿದ್ದೆ. ಪ್ರೇಮಕಥೆಯೊಂದನ್ನು ಮಾಡುವ ಯೋಚನೆ ಮಾಡಿದ್ದ ನಾನು, ಥ್ರಿಲ್ಲರ್ ಅಂಶವನ್ನು ಅದಕ್ಕೆ ಸೇರಿಸಿದೆ. ಅನವಶ್ಯಕವಾಗಿ ಪ್ರೇಮಕಥೆಗೆ ಥ್ರಿಲ್ಲರ್ ಅಂಶಗಳನ್ನು ಜೋಡಿಸುವುದು ಕೆಲವೊಮ್ಮೆ ಸರಿಹೊಂದುವುದಿಲ್ಲ. ನನ್ನ ಕಥೆಯಲ್ಲಿ ಎರಡು ಕಥೆಗಳು ಸಮನಾಂತರವಾಗಿ ಸಾಗುತ್ತದೆ’ ಎನ್ನುತ್ತಾ ತಮ್ಮ ಪಾತ್ರದತ್ತ ಮಾತು ಹೊರಳಿಸಿದರು.
‘ಸಿನಿಮಾದಲ್ಲಿ ನಾನು ‘ದೇವ’ ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ನೇರನುಡಿಯ, ಒರಟು ವ್ಯಕ್ತಿತ್ವ ಈತನದು. ತನ್ನವರನ್ನು ಬಹಳ ಇಷ್ಟಪಡುವವನು ಹಾಗೂ ಅವರ ರಕ್ಷಣೆ ತನ್ನ ಜವಾಬ್ದಾರಿ ಎಂದುಕೊಂಡವನು. ಈ ಸಂದರ್ಭದಲ್ಲಿ ತನ್ನವರಿಗೆ ತೊಂದರೆಯಾದಾಗ ಅದನ್ನು ಹೇಗೆ ನಿಭಾಯಿಸುತ್ತಾನೆ ಎನ್ನುವುದೇ ಸಿನಿಮಾದ ಕಥೆ. ‘ಐ ಆ್ಯಮ್ ಗಾಡ್’ ಎನ್ನುವ ಶೀರ್ಷಿಕೆ ಅಂತಿಮವಾಗಿದ್ದು ಉಪ್ಪಿ ಅವರ ಪ್ರಭಾವದಿಂದಲೇ. ಸಿನಿಮಾದೊಳಗಿರುವ ನೆಗೆಟಿವ್ ಶೇಡ್ ಗೋಡೆ ಮೇಲೆ ಬರೆಯುವ ಪದಗಳು ಇವು’ ಎಂದರು ರವಿ ಗೌಡ.
‘ಹೊಸಬರ ಸಿನಿಮಾ ಬಂದಾಗ ಎಲ್ಲರ ಮನಸ್ಸಿನಲ್ಲೂ ಸಿನಿಮಾ ಹೇಗಿರಲಿದೆಯೋ ಎನ್ನುವ ಸಂದೇಹ ಸಹಜ. ಹೀಗಿದ್ದರೂ ಹೊಸಬರ ಸಿನಿಮಾವನ್ನೇ ನೋಡುವ ಒಂದಿಷ್ಟು ಜನರಿದ್ದಾರೆ. ಅಂತಹ ಜನ ನಮ್ಮ ನಡುವೆಯೇ ಇರುತ್ತಾರೆ. ಅಂತಹ ಪ್ರೇಕ್ಷಕರೇ ಸಿನಿಮಾ ಬಗ್ಗೆ ಮಾತನಾಡಿದಾಗ ಹೊಸಬರಿಗೆ ಭರವಸೆ ಮೂಡುತ್ತದೆ. ಸಿನಿಮಾ ನೋಡಿದವರನ್ನು ಸಿನಿಮಾ ಹೇಗಿದೆ ಎಂದು ಕೇಳಿ ನಂತರದಲ್ಲಿ ಸಿನಿಮಾ ನೋಡಿ ಎನ್ನುವಷ್ಟು ಭರವಸೆಯನ್ನು ನಾನು ಈ ಕಥೆ ಮೇಲೆ ಹೊಂದಿದ್ದೇನೆ’ ಎನ್ನುತ್ತಾ ಮಾತಿಗೆ ವಿರಾಮವಿತ್ತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.