ADVERTISEMENT

ಇಂದಿರಾ ಬಲಿಷ್ಠರೆಂದು ಭಾವಿಸಿದ್ದೆ, ಸಂಶೋಧನೆಯಲ್ಲಿ ದುರ್ಬಲರೆಂದು ತಿಳಿಯಿತು:ಕಂಗನಾ

ಪಿಟಿಐ
Published 9 ಜನವರಿ 2025, 10:23 IST
Last Updated 9 ಜನವರಿ 2025, 10:23 IST
<div class="paragraphs"><p>ಕಂಗನಾ ರನೌತ್</p></div>

ಕಂಗನಾ ರನೌತ್

   

ಮುಂಬೈ: ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರು ಬಹಳ ಗಟ್ಟಿಗಿತ್ತಿ ಎಂದು ಭಾವಿಸಿದ್ದೆ. ಆದರೆ, ಅವರು ಅತ್ಯಂತ ದುರ್ಬಲರು ಮತ್ತು ತಮ್ಮ ಬಗ್ಗೆಯೇ ತಮಗೆ ಸ್ಪಷ್ಟತೆ ಇಲ್ಲವರಾಗಿದ್ದರು ಎಂಬುದು ನಾನು ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ ಎಂದು ‘ಎಮರ್ಜೆನ್ಸಿ’ ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರ ನಿರ್ವಹಿಸಿರುವ ಬಿಜೆಪಿ ಸಂಸದೆ, ನಟಿ ಕಂಗನಾ ರನೌತ್ ಹೇಳಿದ್ದಾರೆ.

ಪ್ರಚೋದನಕಾರಿ ಹೇಳಿಕೆ ಮೂಲಕ ಸದಾ ಸುದ್ದಿಯಲ್ಲಿರುವ ಮಂಡಿ ಕ್ಷೇತ್ರದ ಸಂಸದೆ, ಸದ್ಯ ನನ್ನ ಚಿತ್ರಗಳನ್ನು ನಿರ್ದೇಶಿಸಲು ಅರ್ಹ ನಿರ್ದೇಶಕರೇ ಈಗ ಇಲ್ಲ ಎಂದಿದ್ದಾರೆ.

ADVERTISEMENT

'ಇಂದು ಚಿತ್ರರಂಗದಲ್ಲಿ ನಾನು ಇಷ್ಟಪಟ್ಟು ಕೆಲಸ ಮಾಡಬಹುದಾದ ಒಬ್ಬನೇ ಒಬ್ಬ ನಿರ್ದೇಶಕನಿಲ್ಲ ಎಂದು ನಾನು ಬಹಳ ಹೆಮ್ಮೆಯಿಂದ ಹೇಳುತ್ತೇನೆ. ಏಕೆಂದರೆ, ನಿರ್ದೇಶಕರು ಅಂತಹ ಗುಣಮಟ್ಟವನ್ನು ಹೊಂದಿಲ್ಲ ... ನನ್ನನ್ನು ನಿರ್ದೇಶಿಸುವಷ್ಟು ಅರ್ಹತೆ ಅವರಿಗೆ ಇಲ್ಲ ಎಂದು ಭಾವಿಸುತ್ತೇನೆ’ಎಂದು ರನೌತ್ ಪಿಟಿಐಗೆ ತಿಳಿಸಿದ್ದಾರೆ.

ಬಿಡುಗಡೆಗೆ ಸಿದ್ಧಗೊಂಡಿರುವ ‘ಎಮರ್ಜೆನ್ಸಿ’ ಚಿತ್ರದ ಕುರಿತಾದ ಪಿಟಿಐ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

1975ರಲ್ಲಿ 21 ತಿಂಗಳ ಕಾಲ ದೇಶದಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯ ಕಥಾಹಂದರವನ್ನು ಒಳಗೊಂಡಿರುವ ಚಿತ್ರ ಇದಾಗಿದೆ. ಚಿತ್ರವನ್ನು ಕಂಗನಾ ರನೌತ್ ಅವರೇ ನಿರ್ಮಿಸಿ, ನಿರ್ದೇಶಿಸಿದ್ದಾರೆ.

ಇಂದಿರಾ ಗಾಂಧಿಯವರ ಬಗ್ಗೆ ನನಗೆ ಅತ್ಯಂತ ಸಹಾನುಭೂತಿ ಇದೆ. ಏಕೆಂದರೆ, ಚಿತ್ರದಲ್ಲಿ ತೊಡಗಿಸಿಕೊಳ್ಳುವುದಕ್ಕೂ ಮುನ್ನ ಇಂದಿರಾ ಅತ್ಯಂತ ಬಲಿಷ್ಠ ಮಹಿಳೆ ಎಂದು ಭಾವಿಸಿದ್ದೆ. ಆದರೆ, ಅವರ ಬಗ್ಗೆ ಚಿತ್ರಕ್ಕಾಗಿ ಸಂಶೋಧನೆ ಆರಂಭಿಸಿದ ಬಳಿಕ ಅವರು(ಇಂದಿರಾಗಾಂಧಿ) ಅತ್ಯಂತ ದುರ್ಬಲರಾಗಿದ್ದರು ಎಂಬುದು ತಿಳಿಯಿತು‌. ಅವರು ಯಾವಾಗಲೂ ನಿಯಂತ್ರಣವನ್ನು ಬಯಸುತ್ತಿದ್ದರು. ಅವರ ಬಗ್ಗೆಯೇ ಅವರಿಗೆ ಸ್ಪಷ್ಟತೆ ಇರಲಿಲ್ಲ. ಅತ್ಯಂತ ದುರ್ಬಲರಾಗಿದ್ದರು ಎಂದಿದ್ದಾರೆ.

'ಅವರು ತಮ್ಮ ಸುತ್ತಲೂ ಅನೇಕ ಬೆಂಬಲಿಗರನ್ನು ಹೊಂದಿದ್ದರು. ಯಾವುದೇ ನಿರ್ಧಾರಕ್ಕೂ ಅವರಿಂದ ನಿರಂತರವಾಗಿ ಒಂದು ರೀತಿಯ ಮೌಲ್ಯೀಕರಣವನ್ನು ಬಯಸುತ್ತಿದ್ದರು. ಅನೇಕರ ಮೇಲೆ ಅಪಾರವಾಗಿ ಅವಲಂಬಿತರಾಗಿದ್ದರು. ಅವರಲ್ಲಿ ಒಬ್ಬರು ಸಂಜಯ್ ಗಾಂಧಿ’ ಎಂದಿದ್ದಾರೆ.

ಚಿತ್ರದಲ್ಲಿ ಇಂದಿರಾಗಾಂಧಿ ಮತ್ತು ತುರ್ತು ಪರಿಸ್ಥಿತಿ ಸಮಯದ ದಿನಗಳ ಬಗ್ಗೆ ಚಿತ್ರಿಸುವುದರಲ್ಲಿ ಯಾವುದೇ ಹಿಂದೇಟು ಹಾಕಿಲ್ಲ ಎಂದಿದ್ದಾರೆ.

ಸಂಸತ್ತಿನಲ್ಲಿ ಇಂದಿರಾ ಗಾಂಧಿಯವರ ಮೊಮ್ಮಗಳು ಮತ್ತು ಸಹ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿ ಮಾಡಿ ಚಿತ್ರದ ವಿಷಯವನ್ನು ಪ್ರಸ್ತಾಪಿಸಿದ್ದೇನೆ ಎಂದು ರನೌತ್ ಹೇಳಿದ್ದಾರೆ.

‘ನಾನು ಸಂಸತ್ತಿನಲ್ಲಿ ಪ್ರಿಯಾಂಕಾ ಗಾಂಧಿಯನ್ನು ಭೇಟಿಯಾಗಿದ್ದೆ. ಎಮರ್ಜೆನ್ಸಿ ಚಿತ್ರದಲ್ಲಿ ನನ್ನ ನಟನೆ ಮತ್ತು ನನ್ನ ಕೂದಲಿನ ಬಗ್ಗೆ ಅವರು ನನ್ನನ್ನು ಅಭಿನಂದಿಸಿದರು. ಹಾಗಾಗಿ, ಚಿತ್ರವನ್ನು ವೀಕ್ಷಿಸುವಂತೆ ಪ್ರಿಯಾಂಕಾಗೆ ಆಹ್ವಾನ ನೀಡಿದೆ. ಅವರು ಓಕೆ ಹೇಳಿದರು’ ಎಂದಿದ್ದಾರೆ.

ಚಿತ್ರದ ಸೆನ್ಸಾರ್ ಸರ್ಟಿಫಿಕೇಟ್ ಕುರಿತು ತಿಂಗಳುಗಳ ಕಾಲ ನಡೆದ ವಿವಾದದ ಬಳಿಕ ಇದೇ 17ರಂದು ಚಿತ್ರ ತೆರೆಗೆ ಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.