ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಡಿಸೆಂಬರ್ 25ರಂದು ಚಿತ್ರ ತೆರೆಗೆ ಬರುತ್ತಿದೆ. ಕಲೈಪುಲಿ ಎಸ್.ಧಾನು ಹಾಗೂ ಕಿಚ್ಚ ಕ್ರಿಯೇಷನ್ಸ್ ನಿರ್ಮಿಸಿರುವ ಚಿತ್ರಕ್ಕೆ ವಿಜಯ್ ಕಾರ್ತಿಕೇಯ ನಿರ್ದೇಶನವಿದೆ. ಚಿತ್ರತಂಡ ಇತ್ತೀಚೆಗಷ್ಟೆ ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡಿತು.
‘ನನ್ನ ತಾಯಿಗೆ ಮ್ಯಾಕ್ಸ್ ನೋಡಬೇಕು ಎನ್ನುವ ಆಸೆ ಇತ್ತು. ಸಿನಿಮಾ ಮುಗಿಯುತ್ತಿದ್ದಂತೆ ತೋರಿಸು ಎಂದಿದ್ದರು. ಆದರೆ ತೋರಿಸಲು ಸಾಧ್ಯವಾಗಿರಲಿಲ್ಲ. ಈಗ ಸಿನಿಮಾ ನೋಡಲು ಅವರೇ ಇಲ್ಲ. ನನಗೆ ಆ ಕೊರಗು ಈಗಲೂ ಇದೆ. ಆಗಾಗ ಚಿತ್ರದ ಒಂದಷ್ಟು ತುಣುಕುಗಳನ್ನು ಅವರಿಗೆ ತೋರಿಸುತ್ತಿದೆ. ಅದೊಂದು ಸಮಾಧಾನವಿದೆ. ಚಿತ್ರ ಬಿಡುಗಡೆ ಪೂರ್ವ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಲು ನಿರ್ಮಾಪಕರು ಬಯಸಿದ್ದರು. ಆದರೆ ನಾನು ಅದಕ್ಕೆ ಅವಕಾಶ ನೀಡಿಲ್ಲ’ ಎಂದರು.
‘ನಾನು ಈ ಚಿತ್ರ ಒಪ್ಪುವುದಕ್ಕೆ ಕಾರಣ ನಿರ್ದೇಶಕ ವಿಜಯ್ ಕಾರ್ತಿಕೇಯ. ವಿಜಯ್ ಅವರು ಹೇಳಿದ ಕಥೆ ಚೆನ್ನಾಗಿರಲಿಲ್ಲ ಎಂದರೆ ಯಾವುದೂ ಇಲ್ಲಿಯವರೆಗೂ ಬರುತ್ತಿರಲಿಲ್ಲ. ಧಾನು ಅವರು ಹಿರಿಯ ನಿರ್ಮಾಪಕರು. ಅವರೇ ವಿಜಯ್ ಅವರನ್ನು ಕಳುಹಿಸಿಕೊಟ್ಟಿದ್ದರು. ವಿಜಯ್ ಹೇಳಿದ ಕಥೆ ಬಹಳ ಇಷ್ಟವಾಯಿತು. ಚೆನ್ನೈನಿಂದ ಕಥೆ ಹೇಳಲು ಒಂದು ದಿನಕ್ಕಾಗಿ ಬಂದ ಅವರನ್ನು ವಾರಗಳು ಇಲ್ಲೇ ಉಳಿಸಿಕೊಂಡು, ಅವರ ಜೊತೆಗೆ ಕುಳಿತು ಸಾಕಷ್ಟು ಚರ್ಚೆ ಮಾಡಿ, ಈ ಕಥೆಯನ್ನು ಇನ್ನಷ್ಟು ಗಟ್ಟಿಯಾಗಿ ರೂಪಿಸಲಾಯಿತು. ಈ ನಿರ್ಮಾಪಕರು ನಾನು ಸಾಮಾನ್ಯ ನಟನಾಗಿದ್ದಾಗ ‘ಕಾಕ್ಕಾ ಕಾಕ್ಕಾ’ ಚಿತ್ರದ ರಿಮೇಕ್ ಹಕ್ಕನ್ನು ನನಗೆ ಉಚಿತವಾಗಿ ಬರೆದುಕೊಟ್ಟಿದ್ದರು. ಆದರೆ ಆ ಚಿತ್ರ ಮಾಡಲು ನನ್ನಿಂದ ಸಾಧ್ಯವಾಗಿರಲಿಲ್ಲ. ಈ ಚಿತ್ರದ ಮೂಲಕ ಅವರ ಜೊತೆ ಕೆಲಸ ಮಾಡುವ ಅವಕಾಶ ಲಭಿಸಿತು’ ಎಂದು ಹಳೆಯ ವಿಷಯವನ್ನು ನೆನಪಿಸಿಕೊಂಡರು.
ವರಲಕ್ಷ್ಮೀ ಶರತ್‌ಕುಮಾರ್ ಚಿತ್ರದ ನಾಯಕಿ. ಸುಧಾ ಬೆಳವಾಡಿ, ಕರಿಸುಬ್ಬು, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೇ, ವಿಜಯ್ ಚೆಂಡೂರು ಮುಂತಾದವರು ಚಿತ್ರದಲ್ಲಿದ್ದಾರೆ.
‘ತಮಿಳು, ಹಿಂದಿ, ಮಲಯಾಳ ಸೇರಿದಂತೆ ಅನೇಕ ಭಾಷೆಗಳಲ್ಲಿ ರಜನಿಕಾಂತ್ ಸೇರಿದಂತೆ ಅನೇಕ ಹೆಸರಾಂತ ಕಲಾವಿದರ ಚಿತ್ರಗಳನ್ನು ನಿರ್ಮಾಣ ಮಾಡಿದ್ದೇನೆ. ಕನ್ನಡದಲ್ಲಿ ‘ಮ್ಯಾಕ್ಸ್’ ನನ್ನ ನಿರ್ಮಾಣದ ಮೊದಲ ಚಿತ್ರ. ಸುದೀಪ್ ಅವರ ಸಹಕಾರ, ತೊಡಗಿಸಿಕೊಳ್ಳುವಿಕೆಯಿಂದ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ’ ಎಂದರು ನಿರ್ಮಾಪಕರು.
ಒಂದೇ ರಾತ್ರಿಯಲ್ಲಿ ನಡೆಯುವ ಎಮೋಷನಲ್ ಆ್ಯಕ್ಷನ್ ಕಥಾಹಂದರ ಹೊಂದಿರುವ ಚಿತ್ರವಿದು. ಅಜನೀಶ್ ಲೋಕನಾಥ್ ಸಂಗೀತ, ಶೇಖರ್ ಚಂದ್ರ ಛಾಯಾಚಿತ್ರಗ್ರಹಣ, ಗಣೇಶ್ ಬಾಬು ಸಂಕಲನ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.