ನವದೆಹಲಿ: ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಸ್ವತಂತ್ರ ಸಿನಿಮಾಗಳು ಹಾಗೂ ನಿರ್ದೇಶಕರು ಭಾರತಕ್ಕೆ ಕೀರ್ತಿ ತಂದುಕೊಡುತ್ತಿದ್ದರೂ ಕೂಡ ಅವರಿಗೆ ಸಿಗಬೇಕಾದ ಬೆಂಬಲ ಸಿಗುತ್ತಿಲ್ಲ ಎಂದು ನಟ ನವಾಜುದ್ದೀನ್ ಸಿದ್ದಿಕಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
78ನೇ ಕಾನ್ ಚಲನಚಿತ್ರೋತ್ಸವಕ್ಕೆ ತೆರಳುವ ಮುನ್ನ ಮಾಧ್ಯಮಗಳ ಬಳಿ ಮಾತನಾಡಿದರು.
ಬಾಲಿವುಡ್‌ನ ದೊಡ್ಡ ದೊಡ್ಡ ಸಿನಿಮಾಗಳಿಗಿಂತ ನಿರ್ದೇಶಕರಾದ ಅನುರಾಗ್ ಕಶ್ಯಪ್, ಪಾಯಲ್ ಕಪಾಡಿಯಾ ಮತ್ತು ನೀರಜ್ ಘಯ್ವಾನ್ ತರಹದ ನಿರ್ದೇಶಕರ ಸಿನಿಮಾಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿವೆ ಎಂದು ಹೇಳಿದರು.
ಸ್ವತಂತ್ರ ಸಿನಿಮಾಗಳು ಭಾರತದ ಮೂಲೆಮೂಲೆಗಳನ್ನು ತೆರೆಯ ಮೇಲೆ ತರುತ್ತಿವೆ. ಸಾಮಾನ್ಯ ಜನರ ಕತೆಗಳನ್ನು ಅವುಗಳ ಪಾತ್ರಗಳು ನಿರ್ವಹಿಸುವ ಮೂಲಕ ತೆರೆಯ ಆಚೆಗೂ ಅವುಗಳು ಕಾಡುತ್ತವೆ ಎಂದರು.
ಸ್ವತಂತ್ರ ಸಿನಿಮಾಗಳನ್ನು ಚಲನಚಿತ್ರೋತ್ಸವದ ಸಿನಿಮಾಗಳೆಂದು ಪರಿಗಣಿಸಿದ್ದು, ಕೆಲವೆಡೆ ಮಾತ್ರ ಬಿಡುಗಡೆಯಾಗುತ್ತಿವೆ. ಆ ಸಿನಿಮಾಗಳಿಗೆ ಯಾವುದೇ ರೀತಿಯ ಸಹಾಯ ಕೂಡ ಸಿಗುತ್ತಿಲ್ಲ, ಆದರೆ ಈ ರೀತಿಯ ಸಿನಿಮಾಗಳು ದೇಶಕ್ಕೆ ಕೀರ್ತಿ ತರುತ್ತವೆ ಎಂದು ಹೇಳಿದರು.
ಮೇ.21ರಂದು 78ನೇ ಕಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸೇಕ್ರೆಡ್ ಗೇಮ್ಸ್ ಖ್ಯಾತಿಯ ನೀರಜ್ ಘಯ್ವಾನ್ ನಿರ್ದೇಶನದ ‘ಹೋಮ್‌ಬೌಂಡ್’ಸಿನಿಮಾ ಪ್ರದರ್ಶನಗೊಳ್ಳಲಿದೆ.
ಅನುರಾಗ್ ಕಶ್ಯಪ್ ನಿರ್ದೇಶನದ ‘ಗ್ಯಾಂಗ್ಸ್ ಆಫ್ ವಸೇಫುರ್’, ರಿತೇಶ್ ಭಾತ್ರ ಅವರ ‘ಲಂಚ್ ಬಾಕ್ಸ್’ಸೇರಿದಂತೆ ನವಾಜುದ್ದೀನ್ ಸಿದ್ದಿಕಿ ನಟಿಸಿರುವ 8 ಸಿನಿಮಾಗಳು ಕಾನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.