ಮುಂಬೈ: ಮನೆ ಬಾಗಿಲು ಬಡಿಯುವುದು, ಕಳ್ಳತನ ಮಾಡುವುದು, ಮನೆ ಹೊರಗಿನಿಂದ ಜೋರಾದ ಶಬ್ದ ಮಾಡುವುದು... ಹೀಗೆ ನಾನಾ ರೀತಿಯಲ್ಲಿ ನನ್ನ ಮನೆಯಲ್ಲಿಯೇ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಬಾಲಿವುಡ್ ನಟಿ ತನುಶ್ರೀ ದತ್ತಾ ಹೇಳಿದ್ದಾರೆ.
ಈ ಬಗ್ಗೆ ಇನ್‌ಸ್ಟಾಗ್ರಾಂ ವಿಡಿಯೊದಲ್ಲಿ ಮಾತನಾಡಿರುವ ಅವರು, 2020ರಿಂದ ಈ ಕಷ್ಟಗಳನ್ನು ಅನುಭವಿಸುತ್ತಿದ್ದೇನೆ ಎಂದು ಕಣ್ಣೀರಿಟ್ಟಿದ್ದಾರೆ.
‘ನನ್ನ ಮನೆಯಲ್ಲೇ ನನಗೆ ಕಿರುಕುಳ ನೀಡಲಾಗುತ್ತಿದೆ. ಈ ಬಗ್ಗೆ ನಾನು ಪೊಲೀಸರಿಗೆ ಕರೆ ಮಾಡಿ ಹೇಳಿದ್ದೇನೆ. ಠಾಣೆಗೆ ಬಂದು ದೂರು ದಾಖಲಿಸುವಂತೆ ಪೊಲೀಸರು ನನಗೆ ಹೇಳಿದ್ದಾರೆ. ನನಗೆ ಆರೋಗ್ಯ ಸರಿಯಿಲ್ಲ. ಕಳೆದ ಐದು ವರ್ಷಗಳಿಂದ ತುಂಬಾ ಕಿರುಕುಳ ಅನುಭವಿಸುತ್ತಿದ್ದು, ನನ್ನ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ’ ಎಂದು ಹೇಳಿಕೊಂಡಿದ್ದಾರೆ.
‘ನನ್ನ ಮನೆಯ ಹೊರಗಿನಿಂದ ಜೋರಾದ ಶಬ್ದ ಕೇಳಿಬರುತ್ತದೆ. ಒಮ್ಮೊಮ್ಮೆ ಮನೆಯ ಬಾಗಿಲು ಬಡಿಯುತ್ತಾರೆ. ಮನೆ ಕೆಲಸಕ್ಕೆಂದು ಬಂದು ಕಳ್ಳತನ ಮಾಡುತ್ತಾರೆ. ಈ ಬಗ್ಗೆ ಕಟ್ಟಡದ ಆಡಳಿತ ಮಂಡಳಿಗೆ ತಿಳಿಸಿದ್ದೇನೆ. ಆದರೆ, ಅದರಿಂದ ಪ್ರಯೋಜನವಾಗಿಲ್ಲ’ ಎಂದು ಅಳಲು ತೋಡಿಕೊಂಡಿದ್ದಾರೆ.
‘ನನಗೆ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲಸದವರ ಮೇಲೂ ನಂಬಿಕೆ ಕಳೆದುಕೊಂಡಿದ್ದರಿಂದ ಕೆಲಸಕ್ಕಾಗಿ ಯಾರನ್ನು ನೇಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆರೋಗ್ಯ ಸಮಸ್ಯೆ ನಡುವೆಯೇ ಮನೆಯ ಎಲ್ಲಾ ಕೆಲಸವನ್ನು ನಾನೇ ಮಾಡಿಕೊಳ್ಳುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.
‘ಕಿರುಕುಳಗಳ ನಡುವೆಯೇ ನಾನು ಬದುಕು ಸಾಗಿಸುತ್ತಿದ್ದೇನೆ. ಇದರಿಂದ ನನ್ನ ಮನಸ್ಸನ್ನು ಬೇರೆಡೆ ಸೆಳೆಯಲು ಪ್ರಯತ್ನ ಮಾಡುತ್ತಿದ್ದೇನೆ. ಹೊರಗಿನ ಶಬ್ಧ ಕೇಳದಿರಲೆಂದು ಹೆಡ್‌ಫೋನ್ ಹಾಕಿಕೊಂಡೇ ಕುಳಿತುಕೊಳ್ಳುತ್ತೇನೆ’ ಎಂದಿದ್ದಾರೆ.
‘ಇಂತಹ ಪರಿಸ್ಥಿತಿಯಲ್ಲಿ ನನಗೆ ಸಹಾಯ ಬೇಕಿದೆ. ದಯವಿಟ್ಟು ಯಾರಾದರೂ ಸಹಾಯ ಮಾಡಿ’ ಎಂದು ಅಂಗಲಾಚಿದ್ದಾರೆ.
ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳ ಬಗ್ಗೆ ಮುಕ್ತವಾಗಿ ಮಾತನಾಡಿ ಭಾರತದಲ್ಲಿ #MeToo ಅಭಿಯಾನಕ್ಕೆ ಚಾಲನೆ ನೀಡಿದ್ದ ತನುಶ್ರೀ ದತ್ತಾ, ಬಾಲಿವುಡ್ ನಟ ನಾನಾ ಪಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಅದಾದ ನಂತರ ಚಿತ್ರ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ವಿರುದ್ಧವೂ ಆರೋಪ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.