ADVERTISEMENT

ನಟೇಶ ಹೆಗಡೆಗೆ ಅಂತರರಾಷ್ಟ್ರೀಯ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 20:26 IST
Last Updated 19 ಅಕ್ಟೋಬರ್ 2021, 20:26 IST
ನಟೇಶ ಹೆಗಡೆ
ನಟೇಶ ಹೆಗಡೆ   

ಬೆಂಗಳೂರು: ‘ಪೆಡ್ರೊ’ ಚಿತ್ರದ ನಿರ್ದೇಶನಕ್ಕಾಗಿ ನಟೇಶ ಹೆಗಡೆ ಅವರಿಗೆ ಖ್ಯಾತ ‘ಪಿಂಗ್ಯಾವ್‌ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ.

ಬೂಸಾನ್‌ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಬಿಎಫ್‌ಐ ಲಂಡನ್‌ ಚಲನಚಿತ್ರೋತ್ಸವ ಸೇರಿದಂತೆ ಹಲವು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ‘ಪೆಡ್ರೊ’ ಪ್ರದರ್ಶನ ಕಂಡಿತ್ತು. ಮಂಗಳವಾರ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ಆಯೋಜನೆಗೊಂಡ ಪಿಂಗ್ಯಾವ್‌ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ 5ನೇ ಆವೃತ್ತಿಯಲ್ಲಿ ‘ಕ್ರೌಚಿಂಗ್‌ ಟೈಗರ್ಸ್‌’ ಸ್ಪರ್ಧಾ ವಿಭಾಗದಲ್ಲಿ, ಖ್ಯಾತ ಇಟಾಲಿಯನ್‌ ನಿರ್ದೇಶಕ ‘ರಾಬರ್ಟೊ ರೊಸಿಲೀನಿ’ ಅವರ ಹೆಸರಿನಲ್ಲಿ ನೀಡಲಾಗುವ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ನಟೇಶ ಅವರು ಪಡೆದರು. ಪ್ರಶಸ್ತಿಯ ಜೊತೆಗೆ ₹7.50 ಲಕ್ಷದ ನಗದು ಬಹುಮಾನವನ್ನೂ
ಪಡೆದಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದ ನಟೇಶ ಅವರ ಚೊಚ್ಚಲ ನಿರ್ದೇಶನದ ಚಿತ್ರ ‘ಪೆಡ್ರೊ’. ‘ಪೆಡ್ರೊ’ ಮಧ್ಯಮ ವರ್ಗದ ಎಲೆಕ್ಟ್ರಿಷಿಯನ್‌ ಒಬ್ಬನ ಕಥೆಯಾಗಿದ್ದು, ಈ ಚಿತ್ರವನ್ನು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ನಿರ್ಮಾಣ ಮಾಡಿದ್ದಾರೆ. ನಟ ರಾಜ್‌ ಬಿ.ಶೆಟ್ಟಿ ಅವರೂ ಈ ಚಿತ್ರದಲ್ಲಿ ಬಣ್ಣಹಚ್ಚಿದ್ದು, ಮುಖ್ಯಭೂಮಿಕೆಯಲ್ಲಿ ನಟೇಶ ಅವರ ತಂದೆ ಗೋಪಾಲಕೃಷ್ಣ ಹೆಗಡೆಯವರೇ ನಟಿಸಿದ್ದಾರೆ.

ADVERTISEMENT

‘ಈ ಪ್ರಶಸ್ತಿಯನ್ನು ನಾನು ತಂದೆ, ನಟ ಗೋಪಾಲ್‌ ಹೆಗಡೆ ಹಾಗೂ ತಾಯಿಗೆ ಅರ್ಪಿಸುತ್ತೇನೆ. ಸದಾ ನನ್ನ ಜೊತೆಯಾಗಿದ್ದ ರಿಷಬ್‌ ಶೆಟ್ಟಿ, ರಾಜ್‌ ಬಿ. ಶೆಟ್ಟಿ ಅವರಿಗೆ ಧನ್ಯವಾದ’ ಎಂದು ನಟೇಶ ಅವರು ಹೇಳಿದ್ದಾರೆ. ನಟರಾದ ರಿಷಬ್‌ ಶೆಟ್ಟಿ, ರಕ್ಷಿತ್‌ ಶೆಟ್ಟಿ ನಟೇಶ ಅವರಿಗೆ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.