ADVERTISEMENT

ಚಿತ್ರ ವಿಮರ್ಶೆ | ಭೀಮಸೇನ ನಳಮಹಾರಾಜ: ತಂತ್ರದ ಕಣಕದೊಳಗೆ ಭಾವದ ಹೂರಣ

ವಿಶಾಖ ಎನ್.
Published 30 ಅಕ್ಟೋಬರ್ 2020, 10:37 IST
Last Updated 30 ಅಕ್ಟೋಬರ್ 2020, 10:37 IST
ಅರವಿಂದ್ ಅಯ್ಯರ್
ಅರವಿಂದ್ ಅಯ್ಯರ್   

ನಿರ್ಮಾಣ:ಪುಷ್ಕರ್ ಸಂಸ್ಥೆ

ನಿರ್ದೇಶನ:ಕಾರ್ತೀಕ್‌ ಸರಗೂರು

ತಾರಾಗಣ:ಅರವಿಂದ್ ಅಯ್ಯರ್, ಅರೋಹಿ,ಅಚ್ಯುತ್‌ ಕುಮಾರ್‌,ಪ್ರವೀಣ್ ಕುಮಾರ್

ADVERTISEMENT

ಈರುಳ್ಳಿಯ ಸಿಪ್ಪೆಗಳನ್ನು ಬಿಡಿಸುತ್ತಾ ಹೋದಂತೆ ಒಂದೊಂದು ಪದರವೂ ಬೇರೆಯದೇ ಬಣ್ಣ ತೋರುತ್ತಾ ಹೋಗುತ್ತದೆ. ಕಣ್ಣಲ್ಲಿ ನೀರನ್ನೂ ತರಿಸುತ್ತದೆ. ಒಗ್ಗರಣೆ ಹಾಕಿದ ಮೇಲೆ ರುಚಿ. ‘ಭೀಮಸೇನ ನಳಮಹಾರಾಜ’ ಎಂಬ ಶಿರ್ಷಿಕೆಯೂ ಅಂಥದ್ದೇ ತಂತ್ರ. ಭೀಮಸೇನ ನಳಮಹಾರಾಜ ಸಿನಿಮಾದ ನಾಯಕ ಎನ್ನುವುದೇನೋ ಹೌದು. ಅವನು ಪಾಕಪ್ರವೀಣ. ಹೀಗಿದ್ದೂ ಸಿನಿಮಾದ ಉದ್ದೇಶ ಆಹಾರ ಸಂಸ್ಕೃತಿ ಬಿಚ್ಚಿಡುವುದಲ್ಲ. ತಿಂಡಿಪೋತ ಮಗು, ಅಪ್ಪ–ಅಮ್ಮನ ಕುಟುಂಬದ ಮನೋವ್ಯಾಪಾರವನ್ನು ಕಟ್ಟಿಕೊಡುವುದು. ಒಂದು ಸರಳವಾದ ಜನಪದ ಕಥೆಯಂಥ ವಸ್ತುವನ್ನು ನಿರ್ದೇಶಕ ಕಾರ್ತೀಕ್‌ ಸರಗೂರು ಸಾಕಷ್ಟು ಮೆದುಳನ್ನು ಬಳಸಿ ಚಿತ್ರಕಥೆಯಾಗಿ ರೂಪಿಸಿದ್ದಾರೆ. ನಿರೂಪಣಾ ತಂತ್ರ ಕಣ್ಣು ಕೀಲಿಸಿಕೊಳ್ಳುವಂತಿದೆ. ಸಿನಿಮಾಟೊಗ್ರಫರ್ ರವೀಂದ್ರನಾಥ್ ಲೈಟಿಂಗ್ ಹಾಗೂ ಭಾವಕ್ಕೆ ಆದ್ಯತೆ ನೀಡಿದಂಥ ಕೆಲಸಕ್ಕೆ ದಟ್ಟವಾಗಿ ಉದಾಹರಣೆಗಳು ಸಿಗುತ್ತವೆ. ಸ್ವರ ಸಂಯೋಜಕ ಚರಣ್‌ರಾಜ್ ನಾದದಲೆಯನ್ನು ಅಳಿಸಿ ನೋಡಿದರೆ ಸಿನಿಮಾ ಸಪ್ಪೆ ಎನಿಸುವ ಸಾಧ್ಯತೆ ಇದೆ. ಸಂಕಲನವೂ ಉದ್ದೇಶಕ್ಕೆ ಪೂರಕವಾಗಿ ಒದಗಿಬಂದಿದೆ.

ಈ ಸಿನಿಮಾವನ್ನು ಯಾವ ‘ಜಾನರ್‌’ಗೆ ಸೇರಿಸುವುದೋ ಎಂಬ ಜಿಜ್ಞಾಸೆಯೂ ಹುಟ್ಟುತ್ತದೆ. ಕಥಾನಾಯಕಿ ಕಥೆಗಳನ್ನು ಹುಡುಕಿ ಹೊರಡುತ್ತಾಳೆ. ಅವಳಿಗೆ ಅವಳದ್ದೇ ಕಥೆಯನ್ನು ನಾಯಕ ಕೇಳಿಸುತ್ತಾನೆ; ಅಲ್ಲಲ್ಲ ತೋರಿಸುತ್ತಾನೆ. ಮೂರನೆಯವಳಾಗಿಯೇ ನೋಡುಗನ ಮುಂದೆ ಪ್ರಕಟಗೊಳ್ಳುತ್ತಾ ಹೋಗುವ ಅವಳು ಹೇಗೆ ಕಥೆಯ ನಾಯಕಿ ಎನ್ನುವುದು ಸಸ್ಪೆನ್ಸ್. ಆಹಾರಪ್ರೀತಿ, ತಿಂಡಿಪೋತ ಹುಡುಗಿಯ ಸಿಡುಕ ತಂದೆ ಹಿಟ್ಲರ್‌ ಆಗುವ ಪರಿ, ಅದೇ ಬದುಕಿನ ದೊಡ್ಡ ದುರಂತವೊಂದರ ಕೇಂದ್ರವಾಗುವ ಸಿನಿಮೀಯತೆ ಎಲ್ಲವೂ ಸಿನಿಮಾದಲ್ಲಿ ಇಡುಕಿರಿದಿದೆ. ಎಷ್ಟೋ ಸಲ ತಾಳ ತಪ್ಪಿದ ‘ದರ್ಶನ’ದಂತೆ ಸಿನಿಮಾ ಭಾಸವಾಗುವುದೂ ಇದೆ. ಕೊನೆಯಲ್ಲಿ ತಮ್ಮೆಲ್ಲ ‘ಟ್ರಿಕ್‌’ಗಳಿಗೆ ಅಗತ್ಯವಿರುವ ಶಿಲ್ಪವನ್ನು ನಿರ್ದೇಶಕ ದಕ್ಕಿಸಿಕೊಟ್ಟಿರುವುದು ಅವರ ಕೌಶಲವೇ ಸರಿ.

ನಾಯಕನಾಗಿ ಅರವಿಂದ್ ಅಯ್ಯರ್ ಹಾಗೂ ನಾಯಕಿ ಆರೋಹಿ ನೋಡಿಸಿಕೊಳ್ಳುವಂತೆ ಅಭಿನಯಿಸಿದ್ದಾರೆ. ಕೋಪ ತುಳುಕಿಸುವ ಪಾತ್ರದಲ್ಲೂ ಎದೆಯೊಳಗಿನ ನೋವ ಅದುಮಿದಂತೆ ಕಾಣುವ ಅಚ್ಯುತ್‌ ಕುಮಾರ್‌ ತಾವು ಯಾಕೆ ಪಳಗಿದ ನಟ ಎನ್ನುವುದಕ್ಕೆ ಸಾಕ್ಷ್ಯ ಉಳಿಸಿದ್ದಾರೆ. ಪ್ರವೀಣ್ ಕುಮಾರ್ ಜವಾರಿ ಭಾಷೆ, ಮುದ್ದುಮಗು ಆದ್ಯಾ ಚಿತ್ರದ ರಿಲೀಫ್‌ಗಳು.

ಬೇರೆಯದೇ ಲ್ಯಾಂಡ್‌ಸ್ಕೇಪ್‌ನಲ್ಲಿ ಮಬ್ಬಾದ ಬೆಳಕಿನಲ್ಲಿ ಕಥಾನಾಟಕ ತೋರುವ ಮಾರ್ಗವೊಂದನ್ನು ಪುಷ್ಕರ್ ನಿರ್ಮಾಣ ಸಂಸ್ಥೆ ಒಪ್ಪಿಕೊಂಡಿದೆ. ‘ಅವನೇ ಶ್ರೀಮನ್ನಾರಾಯಣ’ ಸಿನಿಮಾದ ಕ್ಯಾರಿಕೇಚರ್ ತರಹದ ಪಾತ್ರಗಳಲ್ಲಿ ಅದನ್ನು ನೋಡಿದ್ದೆವು. ಈ ಸಿನಿಮಾದ ಪ್ರೋಮೊ, ಪ್ರಚಾರ ಹಾಗೂ ಕಥನತಂತ್ರದ ನಡುವಿನ ಅಜಗಜಾಂತರ ನೋಡಿದರೆ ಅಂಥದ್ದೇ ‘ನೋಡುವಂತೆ ಮಾಡುವ’ ಇನ್ನೊಂದು ಶಾಣ್ಯಾತನ ಗೊತ್ತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.