ADVERTISEMENT

ಸಿನಿಮಾಗಳಿಗೆ ಖಾಲಿ ಖಾಲಿ; ಐಪಿಎಲ್‌ಗೆ ಹೌಸ್‌ಫುಲ್‌!

ಅಭಿಲಾಷ್ ಪಿ.ಎಸ್‌.
Published 4 ಜೂನ್ 2025, 0:30 IST
Last Updated 4 ಜೂನ್ 2025, 0:30 IST
<div class="paragraphs"><p>ಎಐ ಚಿತ್ರ: ಕಣಕಾಲಮಠ</p></div>

ಎಐ ಚಿತ್ರ: ಕಣಕಾಲಮಠ

   
ರಾಜ್ಯದ 20ಕ್ಕೂ ಅಧಿಕ ಮಲ್ಟಿಪ್ಲೆಕ್ಸ್‌ಗಳಲ್ಲಿ ಕ್ರಿಕೆಟ್‌ ಮ್ಯಾಚ್‌  | ₹350–₹1200 ಟಿಕೆಟ್‌ ದರ

ಕಳೆದ ಐದು ತಿಂಗಳಲ್ಲಿ ರಾಜ್ಯದ ಚಿತ್ರಮಂದಿರಗಳ ಎದುರು ‘ಚಿತ್ರಮಂದಿರ ಭರ್ತಿಯಾಗಿದೆ’ ಎನ್ನುವ ಬೋರ್ಡ್‌ ಕಂಡಿದ್ದು ವಿರಳ. ಟಿಕೆಟ್‌ಗಳು ಸೋಲ್ಡ್‌ ಔಟ್‌(ಪೂರ್ಣ ಬಿಕರಿ) ಆಗಿದೆ ಎನ್ನುವ ಮಾತುಗಳನ್ನು ಕೇಳಿಯೂ ಹಲವು ತಿಂಗಳುಗಳೇ ಉರುಳಿವೆ. ಆದರೆ ಮಂಗಳವಾರ(ಜೂನ್‌ 3) ಬೆಂಗಳೂರು, ಮೈಸೂರು, ಧಾರವಾಡ ಹಾಗೂ ಮಂಗಳೂರಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿದ್ದವು. ಆದರೆ ಇವು ಸಿನಿಮಾಗಳಿಗಲ್ಲ! 

ಜನವರಿಯಿಂದ ಮೇ ಅಂತ್ಯದವರೆಗೆ ನೂರಕ್ಕೂ ಅಧಿಕ ಕನ್ನಡ ಸಿನಿಮಾಗಳು ತೆರೆಕಂಡಿವೆ. ಇವುಗಳಿಗೆ ಕಿಕ್ಕಿರಿದು ಜನ ತುಂಬಿದ್ದನ್ನು ಯಾರೂ ಕಂಡಿಲ್ಲ. ಆದರೀಗ ಮಲ್ಟಿಪ್ಲೆಕ್ಸ್‌ಗಳು ಜನರಿಂದ ತುಂಬಿರುವುದು ಐಪಿಎಲ್‌ ಕ್ರೇಜ್‌ನಿಂದಾಗಿ!

ADVERTISEMENT

ಬೆಂಗಳೂರಿನಲ್ಲೇ ಸುಮಾರು 20 ಮಲ್ಟಿಪ್ಲೆಕ್ಸ್‌ಗಳಲ್ಲಿ ಆರ್‌ಸಿಬಿ ಮತ್ತು ಪಂಜಾಬ್‌ ಕಿಂಗ್ಸ್‌ ನಡುವಿನ ಐಪಿಎಲ್‌ ಫೈನಲ್‌ ಪಂದ್ಯಾವಳಿ ನೇರವಾಗಿ ಬಿತ್ತರಗೊಂಡಿದೆ. ಈ ಪೈಕಿ ಹನ್ನೆರಡು ಮಲ್ಟಿಪ್ಲೆಕ್ಸ್‌ಗಳಲ್ಲಿ ಎರಡು ತೆರೆಗಳಲ್ಲಿ ಪಂದ್ಯಾವಳಿಯನ್ನು ಹಾಕಲಾಗಿತ್ತು. ಧಾರವಾಡದ ಸ್ಮಾರ್ಟ್‌ಸಿಟಿ ಮಾಲ್‌ನ ಐನಾಕ್ಸ್‌ನ ನಾಲ್ಕು ಪರದೆಗಳಲ್ಲಿ ಫೈನಲ್‌ ಪಂದ್ಯಾವಳಿಯಿತ್ತು. ಬಹುತೇಕ ಎಲ್ಲಾ ಮಲ್ಟಿಪ್ಲೆಕ್ಸ್‌ಗಳ ತೆರೆಗಳು ಹೌಸ್‌ಫುಲ್‌ ಆಗಿದ್ದವು. ಕನಿಷ್ಠ ₹350–ಗರಿಷ್ಠ ₹1200 ನೀಡಿ ಜನರು ಬೃಹತ್‌ ಪರದೆಗಳಲ್ಲಿ ಕ್ರಿಕೆಟ್‌ ಪಂದ್ಯಾವಳಿ ವೀಕ್ಷಿಸಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಗುಜರಾತ್‌, ಪಂಜಾಬ್‌, ಪಶ್ಚಿಮ ಬಂಗಾಳ, ರಾಜಸ್ಥಾನ ಮುಂತಾದ ರಾಜ್ಯಗಳ ಪ್ರಮುಖ ನಗರಗಳ ಮಲ್ಟಿಪ್ಲೆಕ್ಸ್‌ಗಳಲ್ಲಿಯೂ ಕ್ರಿಕೆಟ್‌ ಹವಾ ಜೋರಾಗಿದೆ.  

ಸಿನಿಮಾ ಮತ್ತು ಕ್ರಿಕೆಟ್‌; ಇವೆರಡು ಅತಿ ಹೆಚ್ಚು ಜನರನ್ನು ಆಕರ್ಷಿಸುವ ವಿಷಯಗಳು. ಈ ರೀತಿ ಚಿತ್ರಮಂದಿರಗಳಲ್ಲಿ ಕ್ರಿಕೆಟ್‌ ಪ್ರದರ್ಶನ ಹೊಸದೇನಲ್ಲ. ಭಾರತ ತಂಡದ ಮುಖ್ಯ ಪಂದ್ಯಗಳು ಇರುವ ಸಂದರ್ಭದಲ್ಲೂ ಈ ರೀತಿ ಪ್ರದರ್ಶನಗಳು ನಡೆದಿವೆ. ಈ ಬಗ್ಗೆ ಮಾತನಾಡಿದ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್‌, ‘ಈ ರೀತಿ ಪ್ರದರ್ಶನಕ್ಕೆ ಜಿಲ್ಲಾಧಿಕಾರಿಯವರ ವಿಶೇಷ ಒಪ್ಪಿಗೆ ಪಡೆಯಬೇಕು. ಸಾಮಾನ್ಯವಾಗಿ ಏಕಪರದೆ ಚಿತ್ರಮಂದಿರಗಳು ಈ ರೀತಿ ಪ್ರದರ್ಶನ ಹಾಕುವುದಿಲ್ಲ. ಏಕೆಂದರೆ ಇಂತಹ ಬಹುತೇಕ ಚಿತ್ರಮಂದಿರಗಳಲ್ಲಿ 800ಕ್ಕೂ ಅಧಿಕ ಆಸನಗಳು ಇರುತ್ತವೆ. ಈ ರೀತಿ ಕ್ರಿಕೆಟ್‌ ಪಂದ್ಯಾವಳಿಯನ್ನು ಪ್ರದರ್ಶನ ಮಾಡಲು ಪ್ರತಿ ಪ್ರದರ್ಶನಕ್ಕೆ ಸುಮಾರು ₹1.50 ಲಕ್ಷವನ್ನು ಬ್ರಾಡ್‌ಕಾಸ್ಟರ್‌ಗೆ ನೀಡಬೇಕು. ಬೆಂಗಳೂರಿನ ಹಲವೆಡೆ ಮೈದಾನಗಳಲ್ಲಿ ಬೃಹತ್‌ ಎಲ್‌ಇಡಿ ಪರದೆ ಹಾಕಿ ಟಿಕೆಟ್‌ ಇಟ್ಟು ಕ್ರಿಕೆಟ್‌ ಪ್ರದರ್ಶನ ಮಾಡಿದ್ದಾರೆ. ಜನರು ಬರುವಂತಹ ಚಿತ್ರಗಳ ಕೊರತೆಯೂ ಇಂತಹ ಕ್ರಿಕೆಟ್‌ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿದೆ’ ಎಂದರು. 

ಲೈವ್‌ ಬೆಟ್ಟಿಂಗ್‌ಗೆ ಅವಕಾಶ, ಸಿನಿಮಾಗಳಿಗೆ ಹೊಡೆತ 

ಮಲ್ಟಿಪ್ಲೆಕ್ಸ್‌ ಕಂಪನಿಗಳ ಈ ನಡೆಗೆ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ ವಿರೋಧಿಸಿದೆ. ‘ನಾವು ಈ ರೀತಿ ಕ್ರಿಕೆಟ್‌ ಪ್ರದರ್ಶನವನ್ನು ವಿರೋಧಿಸುತ್ತಲೇ ಬಂದಿದ್ದೇವೆ. ಕ್ರಿಕೆಟ್‌ ಪಂದ್ಯಾವಳಿಯಿಂದ ಕನಿಷ್ಠ 6 ಗಂಟೆ ಸಿನಿಮಾ ಪ್ರದರ್ಶನ ಸ್ಥಗಿತಗೊಳ್ಳುತ್ತದೆ. 6 ಗಂಟೆ ಎಂದರೆ ಎರಡು ಪ್ರದರ್ಶನಗಳು. ಕೇವಲ ಕನ್ನಡ ಸಿನಿಮಾಗಳಿಗೆಂದಲ್ಲ, ಒಟ್ಟಾರೆ ದೇಶದ ಸಿನಿಮಾ ಉದ್ಯಮಕ್ಕೇ ಇದು ಹೊಡೆತ ನೀಡುತ್ತದೆ. ಎರಡು ಪ್ರದರ್ಶನಗಳ ಕೊರತೆಯಿಂದಾಗಿ ನಿರ್ಮಾಪಕರಿಗೆ ಆಗುವ ನಷ್ಟವನ್ನು ತುಂಬಿಸುವವರು ಯಾರು? ಈ ರೀತಿ ಒಪ್ಪಿಗೆ ನೀಡುವ ಸರ್ಕಾರ ಮೊದಲು ಈ ಅಂಶಗಳತ್ತ ಗಮನಹರಿಸಬೇಕು. ಇಂತಹ ಪ್ರದರ್ಶನಗಳು ಲೈವ್‌ ಬೆಟ್ಟಿಂಗ್‌ಗೂ ಅವಕಾಶ ಮಾಡಿಕೊಡುತ್ತಿದೆ’ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ ಬಣಕಾರ್‌ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.