ADVERTISEMENT

ಮಲೆನಾಡಿನ ಗಾಲ್ಫ್‌ನಲ್ಲಿ ‘ಜಾಕ್ವೆಲಿನ್’ ಕಲರವ

ಚಂದ್ರಹಾಸ ಹಿರೇಮಳಲಿ
Published 19 ಜನವರಿ 2021, 2:52 IST
Last Updated 19 ಜನವರಿ 2021, 2:52 IST
ಜಾಕ್ವೆಲಿನ್
ಜಾಕ್ವೆಲಿನ್   

ಒಂದೂವರೆ ತಿಂಗಳ ಹಿಂದಷ್ಟೆ ಇಲ್ಲಿನ ಸಾಗರ ರಸ್ತೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದ್ದ ಕಿಮ್ಮನೆ ಗಾಲ್ಫ್ ಕ್ಲಬ್‌ ವಾರಾಂತ್ಯದಲ್ಲಿ ಕಳೆಕಟ್ಟಿತ್ತು. ಅದಕ್ಕೆ ಕಾರಣ ಬಾಲಿವುಡ್‌ ತಾರೆ ಜಾಕ್ವೆಲಿನ್ ಫರ್ನಾಂಡಿಸ್.

ಜಾಕ್ವೆಲಿನ್ ಎರಡು ದಿನಗಳು ಶಿವಮೊಗ್ಗದಲ್ಲೇ ಬೀಡುಬಿಟ್ಟಿದ್ದಾರೆ. ಯಾವುದೋ ಸಿನಿಮಾ ಶೂಟಿಂಗ್ ಅಂತೆ, 'ಕಿಚ್ಚ' ಸುದೀಪ್‌ ಅಭಿನಯದ ‘ಫ್ಯಾಂಟಮ್’ ಚಿತ್ರದ ವಿಶೇಷ ಹಾಡಿನ ಚಿತ್ರೀಕರಣ ನಡೆಯುತ್ತಿದೆ ಎಂಬ ಸುದ್ದಿ ಹಬ್ಬಿತ್ತು. ಗಾಲ್ಫ್‌ ಕ್ಲಬ್‌ನಿಂದ ಹೊರಟ ನಂತರ ಸ್ವತಃ ಅವರೇ ಶಿವಮೊಗ್ಗ ಭೇಟಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳನ್ನು ಅಪ್‌ಲೋಡ್‌ ಮಾಡಿದ ನಂತರವೇ ಗಾಸಿಪ್‌ಗಳಿಗೆಲ್ಲ ತೆರೆಬಿದ್ದಿದೆ.

ಅಂದ ಹಾಗೆ ಶ್ರೀಲಂಕಾ ಮೂಲದ ಈ ಚೆಲುವೆ ಸ್ನೇಹಿತರ ಜತೆ ಮಲೆನಾಡಿನ ಮಡಿಲಿನ ಗಾಲ್ಫ್‌ಕ್ಲಬ್‌ಗೆ ಭೇಟಿ ನೀಡಿದ್ದು ವಾರಾಂತ್ಯದ ರಜೆ ಕಳೆಯಲು. ಎರಡು ದಿನ ಐಷಾರಾಮಿ ಕ್ಲಬ್‌ನಲ್ಲಿ ತಂಗಿದ್ದ ಅವರು ಪ್ರಕೃತಿಯ ಸೊಬಗು ಸವಿಯುತ್ತಾ ಸ್ನೇಹಿತರ ಜತೆ ಗಾಲ್ಫ್‌ ಆಡಿ ಸಂಭ್ರಮಿಸಿದ್ದಾರೆ. ಒಂದಷ್ಟು ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ‘ಬೆಸ್ಟ್ ವೀಕೆಂಡ್ ಎವರ್’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಸುದೀಪ್ ನಟನೆಯ ‘ಫ್ಯಾಂಟಮ್’ನಲ್ಲಿ ಜಾಕ್ವೆಲಿನ್: ಜಾಕ್ವೆಲಿನ್ ಸದ್ಯ ಬಾಲಿವುಡ್‌ನ ಸಾಲುಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಕ್ಷಯ್ ಕುಮಾರ್ ಜತೆ ‘ಬಚ್ಚನ್ ಪಾಂಡೆ’ಯಲ್ಲಿ ಅಭಿನಯಿಸುತ್ತಿದ್ದಾರೆ. ಅಟ್ಯಾಕ್, ಭೂತ್ ಪೊಲೀಸ್, ಸರ್ಕಸ್ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಜಾಕ್ವೆಲಿನ್ ಸುದೀಪ್ ಅಭಿನಯದ ‘ಫ್ಯಾಂಟಮ್’ ಚಿತ್ರದ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಏಪ್ರಿಲ್‌ನಲ್ಲಿ ಹಾಡಿನ ಚಿತ್ರೀಕರಣ ನಡೆಯುವ ಸಾಧ್ಯತೆ ಇದೆ ಎನ್ನುವ ಸುದ್ದಿಯೂ ಜೋರಾಗಿ ಕೇಳಿಬರುತ್ತಿದೆ.

ಜಾಕ್ವೆಲಿನ್ ಗಾಲ್ಫ್ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಸದ್ದು ಮಾಡುತ್ತಿದೆ. ಜಾಕ್ವೆಲಿನ್ ಈ ವಿಡಿಯೋ ಅನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ 24 ತಾಸುಗಳೊಳಗೆ ಸುಮಾರು 16.87 ಲಕ್ಷ ಮಂದಿ‌ ವೀಕ್ಷಿಸಿದ್ದಾರೆ.

ಜಾಕ್ವೆಲಿನ್ ಇತ್ತೀಚಿಗೆ ಫೋಟೊಶೂಟ್ ಮಾಡಿಸಿಕೊಂಡು ಆ ಫೋಟೊಗಳನ್ನುಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಮಾದಕ ಭಂಗಿಯಲ್ಲಿರುವ ಫೋಟೊ ಮತ್ತು‌ ವಿಡಿಯೊಗೆ ನೆಟ್ಟಿಗರು ಫಿದಾ ಆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.