ADVERTISEMENT

ಚಿತ್ರರಂಗಕ್ಕೆ ಡ್ರಗ್ಸ್ ನಂಟು: ತಪ್ಪು ಮಾಡಿದವರನ್ನು ಬೆತ್ತಲೆ ಮಾಡಿ ಎಂದ ಜಗ್ಗೇಶ್‌

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2020, 11:10 IST
Last Updated 29 ಆಗಸ್ಟ್ 2020, 11:10 IST
ಜಗ್ಗೇಶ್
ಜಗ್ಗೇಶ್   

ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಬೆಳವಣಿಗೆಯ ನಡುವೆಯೇ ನಟ ಜಗ್ಗೇಶ್‌ ಅವರು, ಸಿನಿಮಾ ರಂಗ ಮತ್ತು ಸಮಾಜವು ಡ್ರಗ್ಸ್‌ನಿಂದ ಹಾಳಾಗುತ್ತಿರುವ ಕುರಿತು ಸರಣಿ ಟ್ವೀಟ್‌ ಮಾಡಿದ್ದಾರೆ. ಚಿತ್ರರಂಗದ ಹಲವು ನಟ, ನಟಿಯರು ಮಾದಕವಸ್ತುಗಳಿಗೆ ದಾಸರಾಗಿರುವುದು ಇದರಿಂದ ಬಯಲಾಗಿದೆ.

‘ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗಬೇಕು’ ಎಂದಿದ್ದಾರೆ ‘ನವರಸನಾಯಕ’. ಜೊತೆಗೆ, ಅವರು ಒಂದು ಘಟನೆಯನ್ನೂ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಬಲವಂತಕ್ಕೆ 2017ರಲ್ಲಿ ಒಬ್ಬ ರಾಜಕಾರಣಿಯ ಪಾರ್ಟಿಗೆ ಹೋಗಿದ್ದೆ. ಅರ್ಧಗಂಟೆಗೆ ಆ ಜಾಗ, ಅಲ್ಲಿದ್ದವರ ಆರ್ಭಟ!ಬಂದು ಸೇರಿದ ಅರ್ಧ ಉಡುಗೆಯ ಸುಂದರಿಯರು! ಅದಕಂಡು ನಾನು ನನ್ನ ಆತ್ಮೀಯ ಯುವ ನಟ ಹೇಳದೆ ಕೇಳದೆ ಲಿಫ್ಟು ಬಳಸದೆ 12 ಮಹಡಿ ಇಳಿದು ಓಡಿದೆವು. ಅದೇ ಕಡೆ ಇಂದಿಗೂ ನನಗೆ ಯಾರು ಕರೆ ಮಾಡದಂತೆ ಮೊಬೈಲ್ ವರ್ಜಿಸಿದೆ. ಅಲ್ಲಿದ್ದವರು ಸಮಾಜದ ಎಲ್ಲ ಮುಖಗಳು’ ಎಂದು ಬರೆದುಕೊಂಡಿದ್ದಾರೆ.

ADVERTISEMENT

‘ಸರಿಯಾಗಿ ಬಾಳಿ ಬದುಕುವ ನಿರ್ಧಾರ ಮಾಡಿ ಶ್ರಮಿಸುವರು ಎಲ್ಲೆ ಇದ್ದರು ಶ್ರೇಷ್ಠವಾಗಿ ಉಳಿಯುತ್ತಾರೆ. ನಾನು ನನ್ನಿಷ್ಟ! ನನ್ನ ಬದುಕು ಎನ್ನುವವರು ಮಠಕ್ಕೆ ಸೇರಿಸಿದರು. ನಶೆ ಹಾದರದ ಬಿಸಿ ಹೆಂಚಿನ ಮೇಲೆ ಸ್ವಲ್ಪ ಕಾಲಬದುಕಿ ವಿಕೃತ ಆನಂದ ಅನುಭವಿಸಿ ಸೀದು ಹೋಗುತ್ತಾರೆ. ಏಕ್ ಮಾರ್ ದೋ ತಕಡ. ತಪ್ಪು ಮಾಡಿದವರನ್ನು ಬೆತ್ತಲೆ ಮಾಡಿ. ಆಗಲಾದರು ಜನಕ್ಕೆ ಅರಿವಾಗಲಿ’ ಎಂದು ಟ್ವೀಟ್‌ ಮಾಡಿದ್ದಾರೆ ಜಗ್ಗೇಶ್‌.

‘ಶ್ರೇಷ್ಠ ಮನುಜನ್ಮ. ಅದು ನಶ್ವರ ಸತ್ಯ. ಆದರೂ, ಆ ನಶ್ವರ ದೇಹ ನಶಿಸುವ ಮುನ್ನ ಸಾರ್ಥಕಪಡಿಸಿ ಬದುಕಬೇಕು. ನಶೆ, ಹಾದರದ ಹಿಂದೆ ಬರಿ ಸಿನಿಮಾ ಅಲ್ಲಾ ಸಮಾಜವೇ ಆಕರ್ಷಿತ ಆಗುತ್ತಿದೆ. ಯಾರು ಶ್ರಮಪಟ್ಟು ಜೀವನ ಗೆದ್ದಿರುತ್ತಾರೆ ಅವರ ಹೆಜ್ಜೆ ತಪ್ಪುದಾರಿ ತುಳಿಯದು. ಯಾರು ವಾಮಮಾರ್ಗದಲ್ಲಿ ಗೆದ್ದಿರುತ್ತಾರೆ ಅವರೇ ನಶೆ ಹಾದರದ ದಾಸರು! ಉಪ್ಪು ತಿಂದವ ನೀರು ಕುಡಿಯುವ’ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.