
ಬೆಳ್ಳಿ ಪದಕ ಗೆದ್ದ ಜಗ್ಗೇಶ್ ಪತ್ನಿ ಪರಿಮಳ
ಚಿತ್ರ:ಇನ್‌ಸ್ಟಾಗ್ರಾಂ
ಪ್ರತಿಭೆ ಯಾರ ಸ್ವತ್ತಲ್ಲ, ಅದು ಸಾಧಕರ ಸ್ವತ್ತು. ಸಾಧನೆ ಮಾಡೋದಕ್ಕೆ ಯಾವ ವಯಸ್ಸಾದರೇನು? ಸಾಧಿಸುವ ಛಲವೊಂದಿದ್ದರೆ ಯಾವುದು ಅಸಾಧ್ಯವಲ್ಲ. ಹೀಗೆ 58ನೇ ವಯಸ್ಸಿನಲ್ಲಿ ನವರಸ ನಾಯಕ ಜಗ್ಗೇಶ್ ಅವರ ಪತ್ನಿ ಪರಿಮಳ ಜಗ್ಗೇಶ್‌ರವರು ರಾಜ್ಯ ಮಟ್ಟದ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದು ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.
ಬೆಳ್ಳಿ ಪದಕ ಗೆದ್ದ ಖುಷಿಯಲ್ಲಿ ನಟನ ಪತ್ನಿ
ನಿರಂತರ ಪ್ರಯತ್ನವು ಅಸಾಧ್ಯವನ್ನು ಸಾಧಿಸುವಂತೆ ಮಾಡುತ್ತದೆ ಎಂದು ಸಾಬೀತುಪಡಿಸಿದ್ದಾರೆ ನಟ ಜಗ್ಗೇಶ್ ಅವರ ಧರ್ಮಪತ್ನಿ ಪರಿಮಳ. ಖ್ಯಾತ ಆಹಾರ ತಜ್ಞೆ ಡಾ. ಪರಿಮಳ ಜಗ್ಗೇಶ್ (h.c.) ಅವರು ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಸಾಧಕಿಯಾಗಿ ಹೊರಹೊಮ್ಮಿದ್ದಾರೆ.
ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ (KSRA) ವತಿಯಿಂದ ಬೆಂಗಳೂರಿನ ‘ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ’ (SAI) ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ‘3ನೇ ನಾಗರಾಜ ರಾವ್ ಜಗದಾಳೆ ಶೂಟಿಂಗ್ ಸ್ಪರ್ಧೆ ಮತ್ತು ಚಾಂಪಿಯನ್‌ಶಿಪ್–2026’ ರಲ್ಲಿ ಪರಿಮಳ ಅವರು ಪಾಲ್ಗೊಂಡಿದ್ದರು. ನಿರಂತರ ಪರಿಶ್ರಮದಿಂದ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಬೆಳ್ಳಿ ಪದಕ
ಪತ್ನಿಯ ಸಾಧನೆ ಬಗ್ಗೆ ನಟ ಜಗ್ಗೇಶ್ ಅವರು ಹಾಡಿಹೊಗಳಿದ್ದಾರೆ. ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಪರಿಮಳ– ನಾನು ಬದುಕಲ್ಲಿ ಆಯ್ಕೆ ಮಾಡಿಕೊಂಡ ಶ್ರೇಷ್ಠ ವ್ಯಕ್ತಿತ್ವದ ಛಲಗಾತಿ. ಆಕೆ ಚಿಂತನೆ ಸದಾ ಆಶಾದಾಯಕ. ಎಸ್‌ಎಸ್‌ಎಲ್‌ಸಿಯಲ್ಲಿ ಓದುವಾಗ ನಮ್ಮಿಬ್ಬರ ಮದುವೆಯಾಯಿತು. ಆಗ ನಾನು ತಂದೆಯಿಂದ ದೂರವಾಗಿ ಸಾಮಾನ್ಯರಲ್ಲಿ ಸಾಮಾನ್ಯ ಜೀವಿ, ಒಂದು ದಿನದ ಸಣ್ಣ ಪಾತ್ರಕ್ಕೆ ಅಲೆಯುತ್ತಿದ್ದ ದಿನಗಳು’ ಎಂದಿದ್ದಾರೆ.
‘ಆಗ ಅವಳ ಬೇಡಿಕೆ, ದಯವಿಟ್ಟು ನನ್ನ ಓದಿಸು ಎಂದು, ಅದಕ್ಕೆ ನಾನು ಒಪ್ಪಿ ಈಸ್ಟ್ ವೆಸ್ಟ್ ಕಾಲೇಜಿಗೆ ಸೇರಿಸಿದೆ. ಪಿಯುಸಿಯಲ್ಲಿ ರ್‍ಯಾಂಕ್ ನಂತರ ಬಿಎಂಎಸ್‌ನಲ್ಲಿ BE ARC, ನಂತರ ಕಂಪ್ಯೂಟರ್ ಡಿಪ್ಲೊಮಾ, ನಂತರ ವೈದ್ಯಕೀಯ ಪ್ರತಿಲೇಖನ ಬಳಿಕ ಡಯಟ್ ಕಂಪನಿ. ಮೋದಿಯವರ ಉತ್ತೇಜನ ಪ್ರಯುಕ್ತ ಶ್ರೀ ಅನ್ನ ಆಹಾರ ಪದ್ಧತಿಯ ಬಗ್ಗೆ ಪುಸ್ತಕ ಬರವಣಿಗೆ. ಇತ್ತೀಚೆಗೆ ಅಂದರೆ 57ನೇ ವಯಸ್ಸಿನಲ್ಲಿ ಹೊಸ ಪ್ರಯತ್ನ. ಶೂಟಿಂಗ್ ಅಕಾಡೆಮಿ ಸೇರ್ಪಡೆಗೊಂಡು ಇಂದು ರಾಜ್ಯ ಮಟ್ಟದ ಶೂಟಿಂಗ್‌ನಲ್ಲಿ ಬೆಳ್ಳಿ ಪದಕ’ ಎಂದಿದ್ದಾರೆ.
‘ಇದನ್ನು ಉಲ್ಲೇಖಿಸಲು ಕಾರಣ, ಮನುಷ್ಯರಾಗಿ ನಾವು ಹುಟ್ಟಿದ್ದೇ ಜಗತ್ತು ಗೆಲ್ಲಲು ವಿನಹಃ, ಏನು ಆಗದು ನನ್ನಿಂದ ಎಂದು ಕಾರಣ ಹೇಳಿ ಆಯುಷ್ಯ ಮುಗಿಸಿ ಹೋಗಲು ಅಲ್ಲಾ. ಪರಿಮಳನ ಪ್ರತಿಭೆ ಪ್ರಯತ್ನದಂತೆ ನನ್ನ ಎಲ್ಲಾ ನಲ್ಮೆಯ ಹೆಣ್ಣುಕುಲ ಯತ್ನಿಸಿ, ನೀವು ಹೆಣ್ಣಾಗಿ ಹುಟ್ಟಿದರೆ ಅದು ನಿಮ್ಮ ಅದೃಷ್ಟ ಹಾಗೂ ದೇವರ ಕೃಪೆಯಿಂದ ಎಂದು ಸಂತೋಷಪಡಿ. ಸಂಸಾರ ಸರಿಯಾಗಿ ತೂಗಿಸಿ, ಜೊತೆ ಜೊತೆಗೆ ಸಾಧಕರಾಗಿ ಎಂಬುದು ನನ್ನ ಹಾರೈಕೆ ಆಶಯ. ಗಂಡನಾಗಿ ಮಡದಿ ಪರಿಮಳನಿಗೆ ಹೃದಯಪೂರ್ವಕ ಶುಭಕಾಮನೆಗಳು’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.