ADVERTISEMENT

ಜವಾನ್ ಟೀಸರ್ ಬಿಡುಗಡೆ | ಬೋಳು ತಲೆಯಲ್ಲಿ ಕಾಣಿಸಿಕೊಂಡ ಶಾರುಖ್‌ ಖಾನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜುಲೈ 2023, 7:03 IST
Last Updated 10 ಜುಲೈ 2023, 7:03 IST
ಶಾರುಖ್‌ ಖಾನ್‌
ಶಾರುಖ್‌ ಖಾನ್‌   

‌ಅಟ್ಲಿ ನಿರ್ದೇಶನದ, ಬಾಲಿವುಡ್‌ ನಟ ಶಾರುಖ್‌ ಖಾನ್‌ ನಟನೆಯ 'ಜವಾನ್' ಚಿತ್ರದ ಟೀಸರ್(ಪ್ರಿವ್ಯೂ) ಇಂದು ಬಿಡುಗಡೆಯಾಗಿದ್ದು, ಅಭಿಮಾನಿಗಳ ಗಮನ ಸೆಳೆದಿದೆ.

ಪಠಾಣ್‌ ಗೆಲುವಿನಲ್ಲಿ ತೇಲಾಡುತ್ತಿರವ ಶಾರುಖ್‌ ಮತ್ತೊಂದು ಹಿಟ್‌ ಚಿತ್ರ ನೀಡಲು ಕಾತುರಾಗಿದ್ದಾರೆ. ತಮಿಳು ನಿರ್ದೇಶಕ ಅಟ್ಲಿ ಜೊತೆಗೆ ಕೈ ಜೋಡಿಸಿರುವ ಅವರು 'ಜವಾನ್‌‘ನಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಎರಡು ನಿಮಿಷಗಳ ಟೀಸರ್‌ನಲ್ಲಿ ಶಾರುಖ್‌ ಅವರ ಹಲವು ಅವತಾರಗಳು ನಮ್ಮ ಮುಂದೆ ಕಾಣಿಸಿಕೊಳ್ಳುತ್ತದೆ. ಇಷ್ಟೊಂದು ವಿಭಿನ್ನ ಲುಕ್‌ನಲ್ಲಿ ಶಾರುಖ್‌ ಹಿಂದೆಂದೂ ಕಾಣಿಸಿಕೊಂಡಿರಲಿಲ್ಲ. ಅವರ ಒಂದೊಂದು ಲುಕ್‌ ಕೂಡ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿಸಿವೆ ಎಂದು ಅಭಿಮಾನಿಗಳು ಹೇಳಿದ್ದಾರೆ.

ADVERTISEMENT

ಶಾರುಖ್‌ ಖಾನ್‌ಗೆ ಜೊತೆಯಾಗಿ ನಟಿ ನಯನತಾರಾ ಕಾಣಿಸಿಕೊಳ್ಳಲಿದ್ದು, ಟೀಸರ್‌ನಲ್ಲಿ ಬಾಸ್ ಲೇಡಿ ಲುಕ್‌ನಲ್ಲಿ ಮಿಂಚಿದ್ದಾರೆ. ಉಳಿದಂತೆ ಸೀರೆಯುಟ್ಟು ಕಾದಾಡುವ ದೀಪಿಕಾ ಪಡುಕೋಣೆ, ವಿಜಯ್‌ ಸೇತುಪತಿ ಟೀಸರ್‌ನ ಕೊನೆಯಾರ್ಧದಲ್ಲಿ ಕಾಣಿಸಿಕೊಂಡಿದ್ದಾರೆ.

ಟೀಸರ್‌ನ ಕೊನೆಯಲ್ಲಿ ಶಾರುಖ್‌ ತಮ್ಮ ಬೋಳು ತಲೆಯನ್ನು ಪ್ರದರ್ಶಿಸುತ್ತಾರೆ. ಅರ್ಧ ಮುಖಕ್ಕೆ ಮಾಸ್ಕ್‌, ಬೋಳು ತಲೆ ಸೇರಿದಂತೆ ಶಾರುಖ್ ಒಂದೊಂದು ಗೆಟಪ್‌ ಚಿತ್ರದ ಬಗೆಗಿನ ನಿರೀಕ್ಷೆ ದುಪ್ಪಟ್ಟು ಮಾಡಿವೆ.

ಚಿತ್ರ ಬಿಡುಗಡೆಯ ಬಗ್ಗೆ ಶಾರುಖ್‌ ಖಾನ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್‌ 7ಕ್ಕೆ ಚಿತ್ರ ತೆರೆ ಮೇಲೆ ಮಿಂಚಲಿದೆ. ತಮಿಳು, ತೆಲುಗು, ಹಿಂದಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಟೀಸರ್‌ನಲ್ಲಿ (ಪ್ರಿವ್ಯೂ) ಏನಿದೆ?

ಟೀಸರ್‌ನುದ್ದಕ್ಕೂ ಶಾರುಖ್‌ ಖಾನ್‌ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್‌ನ ಮೊದಲಾರ್ಧದಲ್ಲಿ ಮಾಸ್‌ ಡೈಲಾಗ್‌ ಮೂಲಕ ಶಾರುಖ್‌ ಖಾನ್‌ ಎಂಟ್ರಿಯಾಗುತ್ತದೆ. ಅರ್ಧ ಮುಖಕ್ಕೆ ಮಾಸ್ಕ್‌ ಹಾಕಿಕೊಂಡಿರುವ ಶಾರುಖ್‌ ನೋಡುಗರಲ್ಲಿ ಭಯ ಹುಟ್ಟಿಸುವುದಂತು ಗ್ಯಾರಂಟಿ. ಇಡೀ ಮುಖಕ್ಕೆ ಬ್ಯಾಂಡೆಡ್‌ ಮಾಡಿಕೊಂಡಿರುವ ಶಾರುಖ್‌ ಕೊನೆಯರ್ಧದಲ್ಲಿ ಕಾಣಿಸುತ್ತಾರೆ. ಬ್ಯಾಂಡೆಡ್‌ ಬಿಚ್ಚಿ ಬೋಳು ತಲೆ ಪ್ರದರ್ಶಿಸುವಲ್ಲಿ ಟೀಸರ್ ಮುಕ್ತಾಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.