ADVERTISEMENT

ಥಿಯೇಟರ್‌ನಲ್ಲೇ ‘ತಲೈವಿ’ ದರ್ಶನ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 9:58 IST
Last Updated 10 ಜೂನ್ 2020, 9:58 IST
‘ತಲೈವಿ’ ಚಿತ್ರದ ಪೋಸ್ಟರ್‌
‘ತಲೈವಿ’ ಚಿತ್ರದ ಪೋಸ್ಟರ್‌   

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜಯಲಲಿತಾ ಅವರದು ವರ್ಣರಂಜಿತ ವ್ಯಕ್ತಿತ್ವ. ಅವರು ನಿಧನರಾಗಿ ಮೂರೂವರೆ ವರ್ಷಗಳು ಕಳೆದಿವೆ. ಬೆಳ್ಳಿತೆರೆ ಮತ್ತು ರಾಜಕೀಯ ಎರಡೂ ಕ್ಷೇತ್ರದಲ್ಲೂ ಯಶಸ್ಸು ಕಂಡ ಅವರ ಜೀವನಗಾಥೆಯನ್ನು ಎ.ಎಲ್‌. ವಿಜಯ್‌ ಪರದೆ ಮೇಲೆ ತರುತ್ತಿರುವುದು ಎಲ್ಲರಿಗೂ ಗೊತ್ತಿದೆ. ಇದಕ್ಕೆ ‘ತಲೈವಿ’ ಎಂಬ ಟೈಟಲ್‌ ಇಡಲಾಗಿದೆ.

ಬಾಲಿವುಡ್‌ ನಟಿ ಕಂಗನಾ ರನೋಟ್‌, ಜಯಲಲಿತಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈಗಾಗಲೇ, ಈ ಚಿತ್ರದ ಟೀಸರ್‌ ಮತ್ತು ಫಸ್ಟ್‌ಲುಕ್‌ ಕೂಡ ಬಿಡುಗಡೆಯಾಗಿದೆ. ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಇದು ನಿರ್ಮಾಣವಾಗುತ್ತಿದೆ. ಈ ನಡುವೆಯೇ ‘ತಲೈವಿ’ಯ ಡಿಜಿಟಲ್‌ ಹಕ್ಕುಗಳು ₹ 55 ಕೋಟಿಗೆ ಮಾರಾಟವಾಗಿರುವ ಸುದ್ದಿ ಕಾಲಿವುಡ್‌ ಅಂಗಳದಿಂದ ಹೊರಬಿದ್ದಿದೆ.

ಒಟಿಟಿ ವೇದಿಕೆಯಲ್ಲಿ ಮುಂಚೂಣಿಯಲ್ಲಿರುವ ನೆಟ್‌ಫ್ಲಿಕ್ಸ್‌ಗೆ ‘ತಲೈವಿ’ಯ ಹಿಂದಿ ಅವತರಣಿಕೆಯ ಹಕ್ಕುಗಳು ಮಾರಾಟವಾಗಿವೆಯಂತೆ. ತಮಿಳು ಅವತರಣಿಕೆಯ ಹಕ್ಕುಗಳು ಅಮೆಜಾನ್‌ ಪ್ರೈಮ್‌ ಪಾಲಾಗಿದೆ. ಜಯಲಲಿತಾ ಅವರ ರಾಜಕೀಯ ಪಯಣದ ಸುತ್ತ ಇದರ ಕಥೆ ಹೆಣೆಯಲಾಗಿದೆ.

‘ತಲೈವಿ’ ಚಿತ್ರವನ್ನು ನಿರ್ದೇಶಕ ವಿಜಯ್‌ ಮತ್ತು ನಿರ್ಮಾಪಕರು ಥಿಯೇಟರ್‌ ಮೂಲಕವೇ ಬಿಡುಗಡೆಗೆ ನಿರ್ಧರಿಸಿದ್ದಾರೆ. ಅಂದಹಾಗೆ ಇದೇ ಜೂನ್‌ 26ರಂದೇ ಸಿನಿಮಾ ಬಿಡುಗಡೆಗೆ ತೀರ್ಮಾನಿಸಲಾಗಿತ್ತು. ಆದರೆ, ಕೊರೊನಾ ಭೀತಿ ಪರಿಣಾಮ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ.

ADVERTISEMENT

ರಾಜಕೀಯಕ್ಕೆ ಧುಮುಕುವ ಮೊದಲು ಜಯಲಲಿತಾ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಹಾಗಾಗಿ, ಅವರ ಜೀವನಗಾಥೆಯು ಪರದೆ ಮೇಲೆ ಹೇಗೆ ಚಿತ್ರಿತವಾಗಿದೆ ಎಂಬ ಕುತೂಹಲ ಆಕೆಯ ಅಭಿಮಾನಿಗಳಲ್ಲೂ ಇದೆ.

ಜಯಲಲಿತಾ ಅವರ ಜೀವನದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಂ.ಜಿ. ರಾಮಚಂದ್ರನ್ ಅವರ ಪಾತ್ರ ಮಹತ್ವದ್ದಾಗಿದೆ. ಎಂಜಿಆರ್‌ ಪಾತ್ರದಲ್ಲಿ ನಟ ಅರವಿಂದ್‌ ಸ್ವಾಮಿ ಕಾಣಿಸಿಕೊಂಡಿದ್ದಾರೆ. ಪ್ರಕಾಶ್‌ ರೈ ಅವರದು ಎಂ. ಕರುಣಾನಿಧಿ ಪಾತ್ರ. ಮಧೂ ಅವರು ಜಾನಕಿ ರಾಮಚಂದ್ರನ್ ಆಗಿ ನಟಿಸಿದ್ದಾರೆ. ಇದಕ್ಕೆ ವಿಷ್ಣು ಇಂದೂರಿ ಹಾಗೂ ಶೈಲೇಶ್‌ ಸಿಂಗ್ ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.