ADVERTISEMENT

‘ಅಟ್ಯಾಕ್’ನಲ್ಲಿ ಜಾನ್ ಅಬ್ರಹಾಂ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 19:45 IST
Last Updated 15 ಜುಲೈ 2019, 19:45 IST
ಜಾನ್‌ ಅಬ್ರಹಾಂ, ಅಕ್ಷಯ್‌ ಕುಮಾರ್‌
ಜಾನ್‌ ಅಬ್ರಹಾಂ, ಅಕ್ಷಯ್‌ ಕುಮಾರ್‌   

ಜಾನ್ ಅಬ್ರಹಾಂ ನಟನೆಯ ‘ಬಾಟ್ಲಾ ಹೌಸ್‌’ ಆಗಸ್ಟ್‌ 15ರಂದು ಬಿಡುಗಡೆಯಾಗುತ್ತಿದೆ. ಆ ಚಿತ್ರ ಬಿಡುಗಡೆಗೂ ಮುನ್ನ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ತನ್ನ ಮುಂದಿನ ಚಿತ್ರದ ಬಗ್ಗೆ ಸುಳಿವು ನೀಡಿದ್ದಾರೆ.ಲಕ್ಷ್ಯ ರಾಜ್ ಆನಂದ್ ನಿರ್ದೇಶನದ ‘ಅಟ್ಯಾಕ್’ ಚಿತ್ರದಲ್ಲಿ ಜಾನ್‌ ಅಬ್ರಹಾಂ ನಾಯಕನಾಗಿ ನಟಿಸುತ್ತಿದ್ದಾರೆ.

ಈ ಚಿತ್ರವನ್ನುಧೀರಜ್ ವಾಧವನ್ ಮತ್ತು ಅಜಯ್ ಕಪೂರ್ ಅವರ ಕೈಟಾ ಪ್ರೊಡಕ್ಷನ್ಸ್ ಮತ್ತು ಜಾನ್‌ ಅವರ ಜೆಎ ಎಂಟರ್‌ಟೇನ್‌ಮೆಂಟ್‌ ನಿರ್ಮಾಣ ಮಾಡುತ್ತಿದೆ. ಈ ಹಿಂದೆ ಈ ತಂಡ ‘ಪರಮಾಣು’ ಹಾಗೂ ‘ರೋಮಿಯೊ ಅಕ್ಬರ್‌ ವಾಲ್ಟರ್‌’ ಚಿತ್ರಗಳನ್ನು ನಿರ್ಮಿಸಿತ್ತು. ಡಿಸೆಂಬರ್‌ ತಿಂಗಳಲ್ಲಿ ಈ ಚಿತ್ರದ ಮುಹೂರ್ತ ನೆರವೇರಲಿದೆ.

ಜಾನ್‌ ಅಬ್ರಹಾಂ ನಟನೆಯ ‘ಬಾಟ್ಲಾ ಹೌಸ್‌’ ಹಾಗೂ ಅಕ್ಷಯ್‌ ಕುಮಾರ್‌ ‘ಮಿಷನ್‌ ಮಂಗಳ್‌’ ಸಿನಿಮಾವು ಸ್ವಾತಂತ್ರ್ಯದಿನದಂದು ಒಂದೇ ದಿನ ಬಿಡುಗಡೆಯಾಗುತ್ತಿದೆ. ಇವರಿಬ್ಬರು‘ಗರಂ ಮಸಾಲ’, ‘ಹೌಸ್ ಫುಲ್-2’ ಮತ್ತು ‘ದೇಸಿ ಬಾಯ್ಸ್’ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದರು. ಉತ್ತಮ ಸ್ನೇಹಿತರೂ ಕೂಡ. ಈಗ ಇಬ್ಬರ ಚಿತ್ರಗಳುಒಂದೇ ದಿನ ಬಿಡುಗಡೆಯಾಗುತ್ತಿರುವುದರಿಂದ ಮನಸ್ತಾಪ ಉಂಟಾಗಬಹುದೇನೋ ಎಂದು ಬಾಲಿವುಡ್‌ ಮಾತನಾಡಿಕೊಳ್ಳುತ್ತಿದೆ.

ADVERTISEMENT

‘ನಮ್ಮಿಬ್ಬರ ನಡುವೆ ಅಂತಹ ಯಾವುದೇ ಕೆಟ್ಟ ಭಾವನೆಗಳಿಲ್ಲ. ನಾವಿಬ್ಬರೂ ಎಂದಿಗೂ ಉತ್ತಮ ಸ್ನೇಹಿತರೇ. ಇಬ್ಬರು ನಟರ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾಗುವುದು ದೊಡ್ಡ ವಿಚಾರವೇನಲ್ಲ. ಒಂದೇ ದಿನ ಬಿಡುಗಡೆಯಾಗಿ, ಬಾಕ್ಸಾಫೀಸಿನಲ್ಲಿ ಹಿಟ್‌ ಆದ ಆದೆಷ್ಟೋ ಸಿನಿಮಾಗಳು ಇವೆ’ಎಂದು ಜಾನ್‌ ಸ್ಪಷ್ಟಪಡಿಸಿದ್ದಾರೆ.

ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಸಾಹೊ’ ಸಿನಿಮಾ ಕೂಡ ಅದೇ ದಿನ ಬಿಡುಗಡೆಯಾಗುತ್ತಿದೆ.

‘ಒಂದು ವೇಳೆ ವಿವಾದ ಆಗಿದ್ದರೆ, ಅಂತಹ ವಿವಾದಗಳನ್ನು ಸೃಷ್ಟಿ ಮಾಡಲು ನನಗೆ ಇಷ್ಟ. ಎರಡು ದಿನದ ಹಿಂದೆ ನಾನು ಅವರಿಗೆ ಸಂದೇಶವೊಂದನ್ನು ಕಳುಹಿಸಿದ್ದೆ. ಖಂಡಿತವಾಗಲೂ ನಮ್ಮಿಬ್ಬರ ನಡುವೆ ಏನೂ ಮನಸ್ತಾಪಗಳಿಲ್ಲ. ಒಂದೇ ದಿನ ನಮ್ಮಿಬ್ಬರ ಸಿನಿಮಾ ಬಿಡುಗಡೆಯಾಗುತ್ತಿದೆ ಅಷ್ಟೇ. ನಾವು ವೀಕ್ಷಕರಿಗೆ ಉತ್ತಮ ಸಿನಿಮಾಗಳನ್ನು ಆಯ್ಕೆ ಮಾಡುವ ಅವಕಾಶ ಒದಗಿಸುತ್ತಿದ್ದೇವೆ. ಎರಡೂ ಸಿನಿಮಾಗಳು ತುಂಬ ಚೆನ್ನಾಗಿವೆ ಎಂದು ನಾನು ಹೇಳಬಲ್ಲೆ. ಪ್ರೇಕ್ಷಕ ಒಂದು ಸಿನಿಮಾ ಆಯ್ಕೆ ಮಾಡುವುದಾದರೆ ನನ್ನ ಸಿನಿಮಾ ಚೆನ್ನಾಗಿದೆ. ಹಾಗೇ ‘ಮಂಗಳ್‌ ಮಿಷನ್‌’ ಹಾಗೂ ‘ಸಾಹೊ’ ಎರಡೂ ಅತ್ಯುತ್ತಮ ಚಿತ್ರಗಳು’ ಎಂದು ಹೇಳಿದ್ದಾರೆ.

ಎರಡೂ ಚಿತ್ರಗಳ ಟ್ರೇಲರ್‌ಗಳು ಬಿಡುಗಡೆಯಾಗಿದ್ದು, ಎರಡೂ ಸಿನಿಮಾಕ್ಕೂ ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ‘ಮಿಷನ್‌ ಮಂಗಳ್‌’ ಭಾರತದ ಮಂಗಳಯಾನದ ಸತ್ಯಕತೆಯನ್ನಾಧರಿಸಿದರೆ,ದೆಹಲಿಯ ಬಾಟ್ಲಾ ಹೌಸ್‌ನಲ್ಲಿ ಆಶ್ರಯ ಪಡೆದಿದ್ದ ಉಗ್ರರ ವಿರುದ್ಧದ ಕಾರ್ಯಾಚರಣೆಯ ಕತೆಯನ್ನು ಬಾಟ್ಲಾ ಹೌಸ್‌ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.