ಇತ್ತೀಚೆಗಷ್ಟೇ ‘ಕೆಡಿ’ ಚಿತ್ರದ ‘ಶಿವ ಶಿವ..’ ಹಾಡಿಗೆ ಧ್ವನಿಯಾಗಿದ್ದ ಗಾಯಕ ಕೈಲಾಶ್ ಖೇರ್ ಕನ್ನಡದಲ್ಲಿ ಹಲವು ಹಿಟ್ ಹಾಡುಗಳನ್ನು ನೀಡಿದ್ದಾರೆ. ಇದೀಗ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ವೀರ ಕಂಬಳ’ ಚಿತ್ರದ ಹಾಡೊಂದಕ್ಕೆ ಅವರು ದನಿಯಾಗಿದ್ದಾರೆ.
ಕಂಬಳ ಕ್ರೀಡೆಯನ್ನು ಆಧರಿಸಿದ ಈ ಸಿನಿಮಾವನ್ನು ಅರುಣ್ ರೈ ತೋಡಾರ್ ನಿರ್ಮಾಣ ಮಾಡಿದ್ದು, ಚಿತ್ರವು ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಮೂಡಿಬರುತ್ತಿದೆ. ತುಳುವಿನಲ್ಲಿ ‘ಬಿರ್ದುದ ಕಂಬಳ’ ಎಂಬ ಶೀರ್ಷಿಕೆಯಲ್ಲಿ ಈ ಸಿನಿಮಾ ಬರುತ್ತಿದೆ. ‘ಈ ಸಿನಿಮಾ ಮಣ್ಣಿನ ಕಥೆಯನ್ನು ಹೊಂದಿದೆ. ಸಾಂಸ್ಕೃತಿಕ ವಿಷಯವನ್ನು ಹೊಂದಿರುವ ಈ ಚಿತ್ರವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ್ದಾರೆ. ಹಾಡನ್ನು ಮಣಿಕಾಂತ್ ಕದ್ರಿ ಅತ್ಯುತ್ತಮವಾಗಿ ಸಂಯೋಜಿಸಿದ್ದಾರೆ. ರಘು ಶಾಸ್ತ್ರಿ ಅವರ ಸಾಹಿತ್ಯವೂ ಅದ್ಭುತವಾಗಿದೆ’ ಎಂದಿದ್ದಾರೆ ಕೈಲಾಶ್ ಖೇರ್.
ಚಿತ್ರಕ್ಕೆ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಆರ್. ಗಿರಿ ಛಾಯಾಚಿತ್ರಗ್ರಹಣ, ಶ್ರೀನಿವಾಸ್ ಪಿ.ಬಾಬು ಸಂಕಲನ, ಮದನ್-ಹರಿಣಿ ನೃತ್ಯ ನಿರ್ದೇಶನ, ಡಿಫರೆಂಟ್ ಡ್ಯಾನಿ, ಮಾಸ್ ಮಾದ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಆದಿತ್ಯ, ಪ್ರಕಾಶ್ ರಾಜ್, ರವಿಶಂಕರ್, ಶೋಭರಾಜ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.