ಬೆಂಗಳೂರು: ‘ಆಡಿದ ಮಾತಿಗೆ ಕ್ಷಮೆ ಕೇಳಬೇಕು ಎಂದು ಎಲ್ಲರೂ ಪಟ್ಟುಹಿಡಿದಿದ್ದಾರೆ’ ಎಂದು ಉಲ್ಲೇಖಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (ಕೆಎಫ್‌ಸಿಸಿ) ಅಧ್ಯಕ್ಷ ನರಸಿಂಹಲು ಎಂ. ಅವರು ಮೇ 30ರಂದು ಕಮಲ್ ಹಾಸನ್‌ಗೆ ಪತ್ರ ರವಾನಿಸಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಮಂಗಳವಾರ(ಜೂನ್ 3) ಕಮಲ್ ಹಾಸನ್ ಸುದೀರ್ಘ ಪತ್ರವೊಂದನ್ನು ನರಸಿಂಹಲು ಅವರಿಗೆ ಬರೆದಿದ್ದಾರೆ. ‘ಕರ್ನಾಟಕ ರಾಜ್ಯದ ಜನತೆಯ ಮೇಲೆ ಗೌರವವಿಟ್ಟುಕೊಂಡು ಈ ಮಾತುಗಳನ್ನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ’ ಎಂದು ಅವರು ಉಲ್ಲೇಖಿಸಿದ್ದಾರೆ.
‘ಥಗ್‌ಲೈಫ್’ ಸಿನಿಮಾದ ಆಡಿಯೊ ಬಿಡುಗಡೆ ಕಾರ್ಯಕ್ರಮದಲ್ಲಿ ನೈಜ ವಾತ್ಸಲ್ಯದಿಂದ ಡಾ.ರಾಜ್‌ಕುಮಾರ್ ಕುಟುಂಬದ ಬಗ್ಗೆ ಅದರಲ್ಲೂ ಶಿವರಾಜ್‌ಕುಮಾರ್ ಅವರ ಬಗ್ಗೆ ಆಡಿದ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಇದು ನನಗೆ ನೋವುಂಟು ಮಾಡಿದೆ. ನಾವೆಲ್ಲರೂ ಒಂದೇ ಹಾಗೂ ಒಂದೇ ಕುಟುಂಬದವರು ಎಂದು ತಿಳಿಸಲು ನನ್ನ ಮಾತುಗಳಿದ್ದವೇ ಹೊರತು ಕನ್ನಡವನ್ನು ಕೆಳಮಟ್ಟದಲ್ಲಿ ನೋಡುವುದಕ್ಕಾಗಿರಲಿಲ್ಲ. ಕನ್ನಡ ಭಾಷೆಯ ಶ್ರೀಮಂತ ಪರಂಪರೆಯ ಬಗ್ಗೆ ಯಾವುದೇ ತಕರಾರು ಅಥವಾ ಚರ್ಚೆ ಇಲ್ಲ.
ತಮಿಳಿನಂತೆಯೇ, ಕನ್ನಡಕ್ಕೆ ಹೆಮ್ಮೆಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿದೆ. ಇದನ್ನು ನಾನು ಬಹಳ ವರ್ಷಗಳಿಂದ ಮೆಚ್ಚಿಕೊಂಡಿದ್ದೇನೆ. ನನ್ನ ವೃತ್ತಿಜೀವನದುದ್ದಕ್ಕೂ, ಕನ್ನಡಿಗರ ಅಪಾರ ಪ್ರೀತಿಯನ್ನು ನಾನು ಆನಂದಿಸಿದ್ದೇನೆ. ಕನ್ನಡ ಭಾಷೆಯ ಮೇಲಿನ ನನ್ನ ಪ್ರೀತಿ ನೈಜವಾಗಿದೆ. ಕನ್ನಡಿಗರು ತಮ್ಮ ಮಾತೃಭಾಷೆಯ ಬಗ್ಗೆ ಹೊಂದಿರುವ ಪ್ರೀತಿಯ ಬಗ್ಗೆ ನನಗೆ ಅಪಾರ ಗೌರವವಿದೆ.
ಎಲ್ಲಾ ಭಾರತೀಯ ಭಾಷೆಗಳಿಗೆ ಸಮನಾದ ಗೌರವ ನೀಡಬೇಕು ಎನ್ನುವ ಆಶಯದವನು ನಾನು. ಜೊತೆಗೆ ಒಂದು ಭಾಷೆಯ ಮೇಲೆ ಮತ್ತೊಂದರ ಪ್ರಾಬಲ್ಯವನ್ನು ವಿರೋಧಿಸಿದವನು. ಇಂತಹ ಅಸಮತೋಲನವು ಭಾರತದ ಭಾಷಾ ಸಾಮರಸ್ಯವನ್ನು ದುರ್ಬಲಗೊಳಿಸಲಿದೆ. ತಮಿಳು, ಕನ್ನಡ, ತೆಲುಗು, ಮಲಯಾಳ ಮತ್ತು ಈ ನೆಲದ ಎಲ್ಲಾ ಭಾಷೆಗಳೊಂದಿಗಿನ ನನ್ನ ಬಾಂಧವ್ಯ ಶಾಶ್ವತ.
ಸಿನಿಮಾ, ನನಗೆ ಗೊತ್ತಿರುವ ಹಾಗೂ ನಾನು ಮಾತನಾಡುವ ಭಾಷೆ. ಸಿನಿಮಾ ಎನ್ನುವುದು ಒಂದು ಸಾರ್ವತ್ರಿಕ ಭಾಷೆ ಹಾಗೂ ಇದಕ್ಕೆ ಪ್ರೀತಿ ಹಾಗೂ ಬಾಂಧವ್ಯವೊಂದೇ ತಿಳಿದಿದೆ. ನನ್ನ ಮಾತುಗಳು ನಮ್ಮೊಳಗೆ ಆ ಬಾಂಧವ್ಯ, ಐಕ್ಯತೆ ಸೃಷ್ಟಿಯಾಗಲಿ ಎನ್ನುವ ಕಾರಣಕ್ಕಾಗಿತ್ತು.
ನನ್ನ ಹಿರಿಯರು ನನಗೆ ಕಲಿಸಿದ ಪ್ರೀತಿ ಮತ್ತು ಬಾಂಧವ್ಯವನ್ನೇ ನಾನು ಹಂಚಿಕೊಳ್ಳಲು ಬಯಸಿದ್ದೆ. ಇದೇ ಪ್ರೀತಿ ಮತ್ತು ಬಾಂಧವ್ಯದಿಂದಲೇ ಶಿವಣ್ಣ ಆಡಿಯೊ ಬಿಡುಗಡೆ ಸಮಾರಂಭಕ್ಕೆ ಹಾಜರಾಗಿದ್ದರು. ಈ ವಿವಾದದ ಕಾರಣದಿಂದಾಗಿ ಶಿವಣ್ಣ ಇಷ್ಟೊಂದು ಮುಜುಗರ ಅನುಭವಿಸಬೇಕಾಯಿತು ಎಂದು ನನಗೆ ನಿಜವಾಗಿಯೂ ವಿಷಾದವಿದೆ. ಆದರೆ ನಮ್ಮಿಬ್ಬರ ನಡುವಿನ ಪ್ರೀತಿ ಮತ್ತು ಗೌರವ ಯಾವಾಗಲೂ ಉಳಿಯುತ್ತದೆ ಮತ್ತು ಈಗ ಇನ್ನಷ್ಟು ಗಟ್ಟಿಯಾಗುತ್ತದೆ ಎಂಬ ನಂಬಿಕೆ ಇದೆ.
ಸಿನಿಮಾ ಜನರ ನಡುವಿನ ಸೇತುವೆಯಾಗಿ ಉಳಿಯಬೇಕೇ ವಿನಾ ಅವರನ್ನು ವಿಭಜಿಸುವ ಗೋಡೆಯಾಗಬಾರದು. ಇದು ನನ್ನ ಹೇಳಿಕೆಯ ಉದ್ದೇಶವಾಗಿತ್ತು ಮತ್ತು ನಾನು ಎಂದಿಗೂ ಸಾರ್ವಜನಿಕ ಅಶಾಂತಿ ಮತ್ತು ಹಗೆತನಕ್ಕೆ ಅವಕಾಶ ನೀಡಿಲ್ಲ, ನೀಡುವುದೂ ಇಲ್ಲ.
ನನ್ನ ಮಾತುಗಳ ಹಿಂದಿದ್ದ ಅರ್ಥವನ್ನು ಅರಿತು ಅದನ್ನು ಸ್ವೀಕರಿಸುತ್ತಾರೆ ಎನ್ನುವ ಭರವಸೆ ಇದೆ. ಈ ತಪ್ಪು ತಿಳಿವಳಿಕೆ ತಾತ್ಕಾಲಿಕವಾಗಿದ್ದು, ನಮ್ಮ ಪರಸ್ಪರ ಪ್ರೀತಿ ಮತ್ತು ಗೌರವದ ಬಗ್ಗೆ ಪುನರುಚ್ಚರಿಸಲು ಇದು ಒಂದು ಅವಕಾಶ ಎಂದು ನಾನು ಪ್ರಾಮಾಣಿಕವಾಗಿ ನಂಬುತ್ತೇನೆ.
ಇದು ಭಾಷೆಯ ವಿಷಯ. ಪತ್ರದಲ್ಲೂ ಕ್ಷಮೆ ಕೇಳಿಲ್ಲ. ಕ್ಷಮೆ ಕೇಳದಿದ್ದರೆ ಇದು ಬಗೆಹರಿಯುವುದಿಲ್ಲ. ಭಾಷೆ ವಿಷಯ ಬಂದಾಗ ಯಾರೂ ಸುಮ್ಮನಿರುವುದಿಲ್ಲ. ಇದನ್ನು ಹಗುರವಾಗಿ ತೆಗೆದುಕೊಂಡರೆ ರಾಜ್ಯದ ಜನತೆಯೇ ಕ್ಷಮಿಸುವುದಿಲ್ಲ.–ನರಸಿಂಹಲು ಎಂ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.