ADVERTISEMENT

ಕನಸು ಮಾರಾಟಕ್ಕಿದೆ

​ಪ್ರಜಾವಾಣಿ ವಾರ್ತೆ
Published 11 ಮೇ 2020, 19:30 IST
Last Updated 11 ಮೇ 2020, 19:30 IST
ಕನಸು ಮಾರಾಟಕ್ಕಿದೆ ಚಿತ್ರದಲ್ಲಿ ಸ್ವಸ್ತಿಕಾ ಪೂಜಾರಿ, ಪ್ರಜ್ಞೇಶ್‌ ಶೆಟ್ಟಿ
ಕನಸು ಮಾರಾಟಕ್ಕಿದೆ ಚಿತ್ರದಲ್ಲಿ ಸ್ವಸ್ತಿಕಾ ಪೂಜಾರಿ, ಪ್ರಜ್ಞೇಶ್‌ ಶೆಟ್ಟಿ   

ಹಾಸ್ಯ ನಟರೇ ತುಂಬಿದ್ದ ‘ಮನೆ ಮಾರಾಟಕ್ಕಿದೆ’ ಕಾಮಿಡಿ ಸಿನಿಮಾ ಕನ್ನಡದಲ್ಲಿ ಇತ್ತೀಚೆಗೆ ತೆರೆಕಂಡಿತ್ತು. ಬಹುತೇಕ ಕಾಮಿಡಿ ಕಲಾವಿದರಿಂದಲೇ ಸಿದ್ಧಗೊಂಡಿರುವ ‘ಕನಸು ಮಾರಾಟಕ್ಕಿದೆ’ ಚಿತ್ರಈಗ ತೆರೆಕಾಣಲು ಸಜ್ಜಾಗಿದೆ. ಇದು ಕನಸುಗಳನ್ನು ಹೊತ್ತು ಬಣ್ಣದ ಲೋಕಕ್ಕೆ ಕಾಲಿಟ್ಟಿರುವ ಕರಾವಳಿಯ ಉದಯೋನ್ಮುಖ ಪ್ರತಿಭೆಗಳ ತಂಡ ಸಿದ್ಧಪಡಿಸಿರುವ ಚಿತ್ರ.

ಕೊರೊನಾ ಹರಡುವ ಮೊದಲು ಈ ಚಿತ್ರವನ್ನು ಏಪ್ರಿಲ್‌ 26ಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿತ್ತು. ಲಾಕ್‌ಡೌನ್‌ ತೆರವಾದ ನಂತರ ಸಂದರ್ಭ ನೋಡಿ ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ.

ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದ ಸ್ಮಿತೇಶ್ ಎಸ್.ಬಾರ್ಯ ಚಿತ್ರರಂಗದ ಸೆಳೆತದಿಂದ ನಿರ್ದೇಶಕನ ಟೊಪ್ಪಿ ಧರಿಸಿದ್ದಾರೆ. ಇದು ಇವರ ಪ್ರಥಮ ಪ್ರಯತ್ನ. ‘ಕಾಮಿಡಿ ಕಿಲಾಡಿಗಳು ಸೀಜನ್ 1ರ’ ಕಲಾವಿದರಾದ ಗೋವಿಂದೇಗೌಡ, ಸೂರ್ಯ ಕುಂದಾಪುರ, ಧೀರಜ್‍ ಮಂಗಳೂರು, ಚಿದಂಬರ ಹಾಗೂ ಅನೀಶ್‍ ಪೂಜಾರಿ ಈ ಚಿತ್ರದಲ್ಲಿ ನಟಿಸುವ ಜತೆಗೆ ಚಿತ್ರಕಥೆ, ಸಂಭಾಷಣೆ ಹಾಗೂ ಸಹ ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ. ಹಿರಿಯ ನಟ ಸಿದ್ಲಿಂಗು ಶ್ರೀಧರ್ ಪ್ರಮುಖ ಪಾತ್ರವೊಂದಕ್ಕೆ ಬಣ್ಣಹಚ್ಚಿದ್ದಾರೆ.

ADVERTISEMENT

ನಾಯಕನಾಗಿ ಬಣ್ಣಹಚ್ಚಿರುವ ಪ್ರಜ್ಞೇಶ್‌ ಶೆಟ್ಟಿಗೂ ಇದು ಮೊದಲ ಚಿತ್ರ. ಬಣ್ಣದ ಲೋಕದಲ್ಲಿ ವಿಹರಿಸುವ ಕನಸಿನೊಂದಿಗೆ ಅವರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರದು ಮುಗ್ಧ ಮತ್ತು ಕಾಲೇಜು ವಿದ್ಯಾರ್ಥಿಯ ಪಾತ್ರವಂತೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಕನ್ನಡದ ಚಿತ್ರಗಳಲ್ಲಿ ನಟಿಸಿರುವ ಸ್ವಸ್ತಿಕಾ ಪೂಜಾರಿ ಮತ್ತು ತುಳು ಚಿತ್ರಗಳಲ್ಲಿ ನಟಿಸಿರುವ ನವ್ಯಾ ಪೂಜಾರಿ ನಾಯಕಿಯರಾಗಿ ಅದೃಷ್ಟ ಪರೀಕ್ಷೆಗೆ ಒಡ್ಡಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ,ಹಾಸನ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಇದೊಂದು ಕಾಮಿಡಿ ಥ್ರಿಲ್ಲರ್‌ ಸಿನಿಮಾ. ಕನಸುಗಳ ಬೆನ್ನೇರಿ ಹೋಗುವ ಯುವಕನ ಕಥೆಯನ್ನು ಕಾಮಿಡಿ ಮತ್ತು ಥ್ರಿಲ್ಲರ್‌ ಬೆರೆಸಿ ಹೇಳಲಾಗಿದೆ ಎನ್ನುತ್ತಾರೆ ನಟ ಅನೀಶ್‍ ಪೂಜಾರಿ.

ಮಡಿಕೇರಿಯ ಶಿವಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ಸಂತೋಷ್‍ ಆಚಾರ್ಯ ಗುಂಪಲಾಜೆ ಅವರದು. ವಿ.ನಾಗೇಂದ್ರ ಪ್ರಸಾದ್, ಕವಿರಾಜ್, ‘ಭರ್ಜರಿ’ ಖ್ಯಾತಿಯ ಚೇತನ್‍ ಕುಮಾರ್, ಸುಖೇಶ್‍ ಶೆಟ್ಟಿ ಸಾಹಿತ್ಯ ಬರೆದಿದ್ದಾರೆ. ಐದು ಹಾಡುಗಳಿಗೆಗಾಯಕಿ ಮಾನಸ ಹೊಳ್ಳ ಸಂಗೀತ ಸಂಯೋಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.