ADVERTISEMENT

ಮೂವಿ ಮಾಫಿಯ ನನ್ನ ವೈಯಕ್ತಿಕ ಜೀವನವನ್ನು ಕೆಡಿಸಿದೆ: ಕಂಗನಾ

ಪ್ರಜಾವಾಣಿ ವಿಶೇಷ
Published 21 ಜುಲೈ 2020, 6:29 IST
Last Updated 21 ಜುಲೈ 2020, 6:29 IST
ಕಂಗನಾ
ಕಂಗನಾ   

ನಟ ಸುಶಾಂತ್ ಸಿಂಗ್ ಸಾವಿನ ಬಳಿಕ ‘ಮೂವಿ ಮಾಫಿಯಾ’ ಹಾಗೂ ‘ಸ್ವಜನಪಕ್ಷಪಾತ’ಗಳ ಬಗ್ಗೆ ಬಾಲಿವುಡ್‌ ಅಂಗಳದಲ್ಲಿ ಅನೇಕ ಮಾತುಗಳು ಕೇಳಿ ಬರುತ್ತಿವೆ. ಮೊದಲಿನಿಂದಲೂ ಬಾಲಿವುಡ್‌ ಅಂಗಳವನ್ನು ಮೂವಿ ಮಾಫಿಯಾ ಎಂದು ಕರೆಯುತ್ತಿದ್ದ ಕಂಗನಾ ಈಗ 'ರಿಪಬ್ಲಿಕ್ ಟಿವಿ'ಗೆ ನೀಡಿದ ಸಂದರ್ಶನದಲ್ಲಿ ಮತ್ತೆ ತುಟಿ ಬಿಚ್ಚಿದ್ದಾರೆ

‘ಬಾಲಿವುಡ್‌ನ ಕೆಲ ಖ್ಯಾತನಾವರು ಮೂವಿ ಮಾಫಿಯಾ ನಡೆಸುತ್ತಿದ್ದಾರೆ. ಈ ಮೂವಿ ಮಾಫಿಯಾ ನನ್ನ ಜೀವನವನ್ನೇ ನಾಶ ಮಾಡುವ ಪ್ರಯತ್ನ ಮಾಡಿದೆ’ ಎಂದು ದೂರಿದ್ದಾರೆ ಕಂಗನಾ.

'ಮೂವಿ ಮಾಫಿಯಾದ ಕೆಲವೊಂದು ಕಾರ್ಯತಂತ್ರಗಳಿಂದ ನನ್ನ ಹಣಕಾಸಿನ ಭವಿಷ್ಯ, ಸಾಮಾಜಿಕ ಜೀವನ ಹಾಗೂ ವೃತ್ತಿ ಬದುಕು ಹಾಳಾಗಿದೆ. ಈ ಮೂವಿ ಮಾಫಿಯಾದಲ್ಲಿರುವ ತಂಡದವರು ತುಂಬಾ ಚಾಣಾಕ್ಷರು. ಅವರು ಗಾಡ್‌ಫಾದರ್ ಇಲ್ಲದೇ ಚಿತ್ರರಂಗಕ್ಕೆ ಬರುವವರನ್ನು ಸಹಿಸುವುದಿಲ್ಲ. ಆ ಕಾರಣಕ್ಕೆ ಆರಂಭದಲ್ಲೇ ಅಂತಹವರನ್ನು ಚಿವುಟಿ ಹಾಕಲು ಪ್ರಯತ್ನ ಮಾಡುತ್ತಾರೆ. ತುಂಬಾ ಚಾಣಾಕ್ಷತನದಿಂದ ಯೋಜನೆ ರೂಪಿಸುತ್ತಾರೆ. ನಾನು 2016ರಲ್ಲಿ ವೃತ್ತಿ ಬದುಕಿನ ಉನ್ನತ ಸ್ಥಾನಕ್ಕೇರಿದ್ದೆ. ‘ತನು ವೆಡ್ಸ್ ಮನು ರಿಟರ್ನ್ಸ್‌’ ನಾನು ನೀಡಿದ ಅತೀ ದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾ ಎಂಬುದು ಎಲ್ಲರಿಗೂ ಗೊತ್ತು. ನಂತರ ನಾನು 19 ಬ್ರಾಂಡ್‌ಗಳಿಗೆ ಸಹಿ ಹಾಕಿದ್ದೆ. ಬಹುಶಃ ಅದು 2016ರವರೆಗೂ ಯಾವ ನಾಯಕಿಯೂ ಮಾಡಿರದ ಅತೀ ದೊಡ್ಡ ಕೆಲಸ ಎನ್ನಿಸುತ್ತದೆ. ಆಗ 2013ರಲ್ಲಿ ನನ್ನೊಂದಿಗೆ ಸಂಬಂಧ ಕಳೆದುಕೊಂಡಿದ್ದ ಮಾಜಿ ಪ್ರೇಮಿ ಮರಳಿ ಬಂದು ನನ್ನ ಮೇಲೆ ಅರ್ಥವಿಲ್ಲದ ಕೇಸ್ ದಾಖಲಿಸಿದ್ದ. ಆ ಕೇಸ್‌ನಿಂದ ನಾನುಎಲ್ಲಾ ಬ್ರಾಂಡ್‌ಗಳಿಂದ ಹೊರ ಬರಬೇಕಾಯ್ತು. ನಾನು ಆ ಒಪ್ಪಂದಗಳನ್ನು ನಂಬಿಕೊಂಡು ಕೆಲವೊಂದು ಕಡೆ ಹಣ ಹೂಡಿಕೆ ಮಾಡಿದ್ದೆ. ಇದರಿಂದ ತುಂಬಾನೇ ತೊಂದರೆ ಅನುಭವಿಸಬೇಕಾಯ್ತು’ ಎಂದು ಹಿಂದಿನ ದಿನಗಳನ್ನು ನೆನೆದಿದ್ದರು.

ADVERTISEMENT

‘ಮೂವಿ ಮಾಫಿಯಾ ಗ್ಯಾಂಗ್‌ ನನ್ನನ್ನು ಪುರುಷ ವ್ಯಾಮೋಹಿ ಎಂದು ಕರೆದಿದ್ದರು. ಅವಳು ಪುರುಷರಿಗೆ ನಗ್ನವಾಗಿರುವ ಚಿತ್ರಗಳನ್ನು ಕಳುಹಿಸುತ್ತಾಳೆ, ಪುರುಷರನ್ನು ವ್ಯಾಮೋಹಿಸುತ್ತಾಳೆ. ಅದೆಲ್ಲಾ ಅವಳ ರಕ್ತದಲ್ಲೇ ಇದೆ ಎಂದಿದ್ದರು. ಇದರಿಂದ ನನ್ನ ಮದುವೆಗೂ ಅಡ್ಡಿಯಾಗಿತ್ತು’ ಎಂದು ನೋವಿನಿಂದ ಮಾತನಾಡಿದ್ದರು ಕಂಗನಾ.

‘ಮನುಷ್ಯನ ಜೀವನದಲ್ಲಿ ಮುಖ್ಯವಾಗಿ 3 ಅಂಶಗಳಿರುತ್ತದೆ. ಒಂದು ಭಾವನಾತ್ಮಕ ಜೀವನ, ಇನ್ನೊಂದು ಸಾಮಾಜಿಕ ಜೀವನ ಹಾಗೂ ವೃತ್ತಿಜೀವನ. ಅದನ್ನು ಬಿಟ್ಟರೆ ಬೇರೆ ಏನಿದೆ. ನನ್ನ ಜೀವನದ 3 ಮೂರು ಹಂತವನ್ನು ಮೂವಿ ಮಾಫಿಯಾ ತಂಡ ಹಾಳು ಮಾಡಿದೆ. ಹೀಗೆ ಮಾಡಿದರೆ ಯಾರಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎನ್ನಿಸುವುದಿಲ್ಲ’ ಎಂದು ಕಂಗನಾ ಪ್ರಶ್ನಿಸಿದ್ದಾರೆ.

ಸುಶಾಂತ್‌ ಸಾವಿಗೆ ನೇರ ಹೊಣೆ

ಈ ಸಂದರ್ಶನದಲ್ಲಿ ಸುಶಾಂತ್‌ ಸಿಂಗ್ ರಜಪೂತ್‌ ಸಾವಿಗೂ ಕರಣ್‌ ಜೋಹರ್‌ಗೂ ನೇರ ಸಂಬಂಧ ಇದೆ ಎಂದು ಹೇಳಿದ್ದಾರೆ. ಅಲ್ಲದೇ ಕರಣ್‌ ತಮ್ಮ ‘ಬಾಲ್ಯ ಸ್ನೇಹಿತ’ ಆದಿತ್ಯ ಚೋಪ್ರಾ ಜೊತೆ ಸೇರಿ ಸುಶಾಂತ್ ವೃತ್ತಿ ಬದುಕನ್ನು ನಾಶ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಕರಣ್‌ ಸುಶಾಂತ್‌ ಅವರನ್ನು ’ಫ್ಲಾಪ್‌ ಸ್ಟಾರ್‌’ ಎಂದು ಕರೆದಿದ್ದಲ್ಲದೇ ಅವರ ಯಾವುದೇ ಸಿನಿಮಾಗಳೂ ಥಿಯೇಟರ್‌ಗಳು ಬಿಡುಗಡೆಯಾಗದಂತೆ ಮಾಡಿದ್ದಾರೆ ಎಂದು ದೂಷಿಸಿದ್ದಾರೆ.

ಕಂಗನಾ ಪ್ರಕಾರ ಆದಿತ್ಯ ಸುಶಾಂತ್‌ಗೆ ಯಶ್‌ ರಾಜ್‌ ಫಿಲ್ಮಂ ಟ್ಯಾಲೆಂಟ್ ಏಜೆನ್ಸಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿಸಿದ್ದರು. ಅಲ್ಲದೇ ಅವರಿಗೆ ಬೇರೆ ಯಾವುದೇ ಸಿನಿಮಾಗಳಲ್ಲಿ ಕೆಲಸ ಮಾಡಲು ಅವಕಾಶ ಇಲ್ಲದಂತೆ ಮಾಡಿದ್ದರು. ಅಲ್ಲದೇ ಭಾಜಿರಾವ್ ಮಸ್ತಾನಿ, ರಾಮ್‌ ಲೀಲಾ ಮುಂತಾದ ಸಿನಿಮಾಗಳಲ್ಲಿ ಕೆಲಸ ಮಾಡಲು ಆದಿತ್ಯ ಸುಶಾಂತ್‌ಗೆ ಅವಕಾಶ ನೀಡಲಿಲ್ಲ. ಅದರ ಬದಲು ರಣವೀರ್ ಸಿಂಗ್‌ಗೆ ಅವಕಾಶ ಸಿಗುವಂತೆ ನೋಡಿಕೊಂಡರು ಎಂದಿದ್ದಾರೆ.

‘ಸುಶಾಂತ್‌ಗೆ ಚಮಚಗಿರಿ ಮಾಡುವುದು ತಿಳಿದಿರಲಿಲ್ಲ. ಆ ಕಾರಣಕ್ಕೆ ಈ ಮೂವಿ ಮಾಫಿಯಾ ಗ್ಯಾಂಗ್ ಅವರ ವೃತ್ತಿಬದುಕನ್ನು ನಾಶ ಮಾಡಿದೆ. ಯಾವಾಗ ಯಶ್‌ ರಾಜ್‌ ಫಿಲ್ಸ್‌ ಶೇಖರ್‌ ಕಪೂರ್‌ ಅವರನ್ನು ಹೊರ ದಬ್ಬಿದರೋ ಆಗ ಸುಶಾಂತ್ ಅವರ ಜೊತೆಗಿನ ಎಲ್ಲಾ ಬಂಧನವನ್ನು ಕಡಿದುಕೊಂಡಿದ್ದರು. ಅಲ್ಲದೇ ಹಿಟ್ ಸಿನಿಮಾಗಳನ್ನು ನೀಡಿದ್ದರು’

‘ಎರಡು ವರ್ಷಗಳ ಕಾಲ ಸಿನಿಮಾರಂಗದಲ್ಲಿ ಕಷ್ಟ ಅನುಭವಿಸಿದ್ದ ಸುಶಾಂತ್‌ ‘ಎಂ. ಎಸ್‌. ಧೋನಿ: ಅನ್‌ಟೋಲ್ಡ್‌ ಸ್ಟೋರಿ’ ಎಂಬ ಹಿಟ್ ಸಿನಿಮಾ ನೀಡಿದ್ದರು. ಆಗ ಆದಿತ್ಯ ಚೋಪ್ರಾನ ಜೊತೆ ಬಾಲ್ಯ ಸ್ನೇಹಿತ ಕರಣ್‌ ಸೇರಿ ಸುಶಾಂತ್ ವೃತ್ತಿಜೀವನವನ್ನು ನಾಶ ಮಾಡುವ ಯೋಜನೆ ಹಾಕಿಕೊಂಡಿದ್ದರು. ಆ ಕಾರಣಕ್ಕೆ ಅವರನ್ನು ಸಿನಿಮಾಗಳನ್ನು ಥಿಯೇಟರ್‌ನಲ್ಲಿ ಬಿಡುಗಡೆ ಮಾಡಲು ಬಿಡದೇ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುವಂತೆ ಮಾಡಿದ್ದರು.

ಒಟ್ಟಾರೆ ಸುಶಾಂತ್ ಸಾವಿಗೆ ಕರಣ್ ಜೋಹರ್ ಕಾರಣ ಎಂದು ನೇರವಾಗಿ ನುಡಿದಿದ್ದಾರೆ ಕಂಗನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.