ADVERTISEMENT

ಯಾಕೆ ಮಾತಾಡಲಿ: ಆಲಿಯಾ ತಿರುಗೇಟು

ಪಾಲಿಟಿಕ್ಸ್‌ ಮಾತಾಡಬಾರದೇಕೆ? ಕಂಗನಾ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2019, 20:02 IST
Last Updated 14 ಮಾರ್ಚ್ 2019, 20:02 IST
ಆಲಿಯಾ ಭಟ್
ಆಲಿಯಾ ಭಟ್   

ಮಣಿಕರ್ಣಿಕಾ ಪಾತ್ರಧಾರಿ ಕಂಗನಾ ರನೋಟ್‌ ಈ ಸಲ ತಮ್ಮ ಕತ್ತಿಯಂಥ ನಾಲಗೆಯನ್ನು ಬಾಲಿವುಡ್‌ ತಾರೆಯರ ಮೇಲೆ ಝಳಪಿಸಿದ್ದಾರೆ.

‘ಸಿನಿರಂಗದವರು ರಾಜಕೀಯದ ಬಗ್ಗೆ ಜಾಗೃತರಾಗಿರಬೇಕು. ರಾಜಕೀಯ ಸ್ಥಿತಿಗತಿಗಳ ಬಗ್ಗೆ ಅರಿವಿದ್ದಲ್ಲಿ ಒಂದು ನಿಲುವು ತಾಳಲು ಸಾಧ್ಯ. ನಿಲುವು ಈ ಪಕ್ಷ, ಆ ಪಕ್ಷ ಎಂಬುದು ಮಾತ್ರವಲ್ಲ, ಯಾವ ಪಕ್ಷವೂ ಯಾಕಲ್ಲ ಎಂಬುದರ ಬಗ್ಗೆಯೂ ನಿಲುವು ತಾಳಲು ಅನುಕೂಲವಾಗುತ್ತದೆ’ ಎನ್ನುವುದು ಅವರ ಧೋರಣೆ.

‘ಇತ್ತೀಚಿಗೆ ಟಿ.ವಿ ಶೋ ಒಂದರಲ್ಲಿ ರಣಬೀರ್ ಕಪೂರ್‌ ‘ನಾನ್ಯಾಕೆ ರಾಜಕೀಯದ ಬಗ್ಗೆ ಮಾತಾಡಲಿ’ ಎಂದು ಹೇಳಿದ್ದರು. ‘ನನ್ನ ಮನೆಗೆ ನೀರು, ವಿದ್ಯುತ್‌ ಎಲ್ಲವೂ ಬರುತ್ತದೆ. ಹಾಗಿದ್ದಾಗ ರಾಜಕೀಯದ ಬಗ್ಗೆ ನಾನ್ಯಾಕೆ ಮಾತಾಡಲಿ’ ಎಂದು ಗೇಲಿ ಮಾಡಿದ್ದರು.

ADVERTISEMENT

‘ಇದು ಹೊಣೆಗೇಡಿತನದ ಹೇಳಿಕೆ. ದೇಶದಲ್ಲಿದ್ದು ದೇಶದ ಆಳುವವರ ಬಗೆಗೆ ಅರಿವಿಲ್ಲದಿದ್ದಲ್ಲಿ ಹೇಗೆ? ನೀವು ಓಡಾಡುವ ಮರ್ಸಿಡಿಸ್ ಬೆಂಜ್‌ ಕಾರು ಈ ದೇಶವಾಸಿಗಳ ಹಣದಿಂದಲೇ ಕೊಂಡಿದ್ದು ಎಂಬ ಪ್ರಜ್ಞೆ ಬೇಡವೇ?’ ಎಂದ ಕಂಗನಾ ರನೋಟ್ ತರಾಟೆಗೆ ತೆಗೆದುಕೊಂಡಿದ್ದರು.
ಕಂಗನಾ ತಮ್ಮ ನಿಲುವನ್ನು ಹೀಗೆ ನಿರ್ಭಿಡೆಯಿಂದ ವ್ಯಕ್ತಪಡಿಸಿರುವುದಕ್ಕೆ ಜಾನ್‌ ಅಬ್ರಹಾಂ ಸಹ ಧ್ವನಿಗೂಡಿಸಿದ್ದರು.
‘ಒಂದು ರಾಜಕೀಯ ನಿಲುವು ತಳೆಯಲು ರಾಜಕೀಯದ ಬಗೆಗೆ ಅರಿವಿರುವುದು ಅತ್ಯಗತ್ಯ. ಸಿರಿಯಾದಿಂದ ಬಿಹಾರಿನವರೆಗೂ ಎಲ್ಲ ತಿಳಿದಿರಬೇಕು ಎಂದರ್ಥವಲ್ಲ. ಆದರೆ, ದೇಶದ ಆಗುಹೋಗುಗಳ ಬಗ್ಗೆ ನಿಮಗೆ ಆಸಕ್ತಿ ಇದ್ದಲ್ಲಿ, ಅವುಗಳನ್ನು ತಿಳಿದುಕೊಂಡಲ್ಲಿ ನಿಮ್ಮ ಅಭಿಪ್ರಾಯವ್ಯಕ್ತಪಡಿಸುವಲ್ಲಿ ತಪ್ಪೇನಿಲ್ಲ. ಈ ನಿಲುವು ನಿಮ್ಮ ಧೋರಣೆಯ ಬಗೆಗಿರಲಿ ಹೊರತು ಪಕ್ಷಗಳ ಬಗ್ಗೆಯಲ್ಲ’ ಎಂದೂ ಅವರು ಸ್ಪಷ್ಟಪಡಿಸಿದ್ದರು.
ಇದೀಗ ಎಲ್ಲವೂ ತಣ್ಣಗಾಗಿದೆ ಎಂಬ ಹೊತ್ತಿನಲ್ಲಿ ರಣಬೀರ್‌ ಕಪೂರ್‌ ಶೋನಲ್ಲಿ ಒಡಗೂಡಿದ್ದ ಆಲಿಯಾ ಭಟ್‌ ಮತ್ತೆ ಈ ವಾದದ ಕಿಡಿಯಾರದಂತೆ ನೋಡಿಕೊಂಡಿದ್ದಾರೆ.

‘ಕಂಗನಾ ರನೋಟ್‌ ನಿರ್ಭಿಡೆಯಿಂದ ತಮ್ಮ ಅಭಿಪ್ರಾಯ ಮಂಡಿಸುತ್ತಾರೆ. ಇದಕ್ಕಾಗಿ ನಾನು ನಿಜವಾಗಿಯೂ ಅವರನ್ನು ಗೌರವಿಸುತ್ತೇನೆ. ನನಗೂ ನನ್ನದೇ ಆದ ಅಭಿಪ್ರಾಯಗಳಿವೆ. ಆದರೆ ಅವೆಲ್ಲವನ್ನೂ ಇನ್ನೊಬ್ಬರ ಮೇಲೆ ಹೇರಲು ಯತ್ನಿಸುವುದಿಲ್ಲ. ಅವೆಲ್ಲವೂ ನನ್ನೊಟ್ಟಿಗೆ ಇರುತ್ತವೆ. ಏನಾದರೂ ಮಾತನಾಡಲೇಬೇಕೆಂಬ ಹುಕಿಗೆ ಬಿದ್ದು, ಮಾತನಾಡಬೇಕಾಗಿಲ್ಲ. ಏನೂ ಮಾತನಾಡದಿದ್ದಲ್ಲಿ ಯಾವ ನಿಲುವೂ ತಳೆದಿಲ್ಲ ಎಂದರ್ಥವೂ ಅಲ್ಲ. ಈಗಾಗಲೇ ಜಗತ್ತು ಅಭಿಪ್ರಾಯಗಳಿಂದ ತುಂಬಿ ಹೋಗಿದೆ. ಒಂದು ಅಭಿಪ್ರಾಯ ಕಡಿಮೆಯಾದರೆ ಅದರಿಂದ ಜಗತ್ತೇನೂ ನಿಂತು ಹೋಗುವುದಿಲ್ಲ. ಪ್ರತಿಯೊಂದರ ಬಗ್ಗೆಯೂ ಎಲ್ಲರಿಗೂ ಏನಾದರೂ ಅಭಿಪ್ರಾಯಗಳಿದ್ದೇ ಇರುತ್ತವೆ. ಆದರೆ, ಕೆಲವೊಮ್ಮೆ ಯಾಕೆ ಸುಮ್ಮನೆ ಮಾತಾಡಬೇಕು ಎಂದು ತುಟಿ ಬಿಚ್ಚುವುದಿಲ್ಲ. ಈ ವಿಷಯದಲ್ಲಿ ನನ್ನ ಅಪ್ಪ ನನಗೆ ಮಾದರಿ. ಸುಮ್ಮನಿರಬೇಕು ಅಥವಾ ನಿರ್ಲಕ್ಷಿಸಬೇಕು ಎಂದೇನೂ ಅಲ್ಲ, ಮಾತಾಡಿದರೆ ಸುಧಾರಣೆಯಾದೀತೆ, ಬದಲಾವಣೆ ಬಂದೀತೆ ಎಂಬುದರ ಮೇಲೆ ಅದು ನಿರ್ಧಾರವಾಗಿರುತ್ತದೆ’ ಎನ್ನುವುದು ಆಲಿಯಾ ಉವಾಚ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.