ADVERTISEMENT

ಸಂದರ್ಶನ | ‘ತನುಜಾ’ಗೆ ಜೀವ ತುಂಬಿದ ಸಪ್ತಾ

ಅಭಿಲಾಷ್ ಪಿ.ಎಸ್‌.
Published 2 ಫೆಬ್ರುವರಿ 2023, 21:45 IST
Last Updated 2 ಫೆಬ್ರುವರಿ 2023, 21:45 IST
ಸಪ್ತಾ ಪಾವೂರು
ಸಪ್ತಾ ಪಾವೂರು   

ನಟ ರಿಷಬ್‌ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ ಮೂಲಕ ‘ಪಲ್ಲವಿ’ಯಾಗಿ ಚಂದನವನದಲ್ಲಿ ಮಿಂಚಿದವರು ಮಂಗಳೂರಿನ ಸಪ್ತಾ ಪಾವೂರು. ಇದೀಗ 2020ರಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನಿಮಾ ‘ತನುಜಾ’ದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಸಪ್ತಾ, ತನ್ನ ಸಿನಿಪಯಣ ಹಾಗೂ ಚಿತ್ರದ ಅನುಭವಗಳನ್ನು ತೆರೆದಿಟ್ಟಿದ್ದಾರೆ...

‘ನಾನಿನ್ನೂ ಒಂದನೇ ತರಗತಿಯಲ್ಲಿ ಓದುತ್ತಿದ್ದೆ. ಆಗ ನಟ ವಿಜಯ ರಾಘವೇಂದ್ರ ಅವರ ‘ಚೆಲ್ಲಾಪಿಲ್ಲಿ’ ಸಿನಿಮಾದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟೆ. ಇದಾದ ಬಳಿಕ ಕೆಲ ತುಳು ಚಿತ್ರಗಳಲ್ಲಿ ನಟಿಸಿದೆ. ಬಳಿಕ ‘ದ್ವೈತ’, ರಿಷಬ್‌ ಶೆಟ್ಟಿ ಅವರ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’, ಶಿವರಾಜ್‌ಕುಮಾರ್‌ ಅವರ ಜೊತೆಗೆ ‘ಬೈರಾಗಿ’ ಸಿನಿಮಾಗಳಲ್ಲಿ ನಟಿಸಿದೆ. ಈ ಪೈಕಿ ನನಗೆ ಒಂದು ಗುರುತು ನೀಡಿದ್ದು ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ. ಈಗಲೂ ಹಲವರು ನನ್ನನ್ನು ‘ಪಲ್ಲವಿ’ ಎಂದೇ ಕರೆಯುತ್ತಾರೆ. ಇದು ನನಗೆ ಖುಷಿ ನೀಡಿದೆ. ಈ ಯಶಸ್ಸನ್ನು ನಾನು ನಿರೀಕ್ಷಿಸಿಯೇ ಇರಲಿಲ್ಲ. ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡರೂ, ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿ ಮುಂದಕ್ಕೆ ಹೆಜ್ಜೆ ಇಡುವ ಯಾವುದೇ ಯೋಚನೆ ನನಗಿಲ್ಲ. ಹೀಗಾಗಿ ಓದಿಗೆ ಆದ್ಯತೆ ನೀಡಿದ್ದೇನೆ. ಈ ನಡುವೆ ಉತ್ತಮ ಪಾತ್ರಗಳು ಬಂದರೆ ಸಿನಿಮಾ ಒಪ್ಪಿಕೊಳ್ಳುತ್ತಿದ್ದೇನೆ. ಸಿನಿಮಾ ಆಯ್ಕೆ ವಿಚಾರದಲ್ಲಿ ಅಪ್ಪ–ಅಮ್ಮ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇಂತಹ ಪಾತ್ರಗಳನ್ನೇ ಮಾಡಬೇಕು ಎನ್ನುವ ಯಾವುದೇ ಚೌಕಟ್ಟು ಹಾಕಿಕೊಂಡಿಲ್ಲ. ನಿರೀಕ್ಷೆಗಳೂ ಇಲ್ಲ. ಬಂದ ಅವಕಾಶಗಳನ್ನು ಬಾಚಿಕೊಳ್ಳುತ್ತಿದ್ದೇನೆ’ ಎನ್ನುವುದು ಸಪ್ತಾ ಮಾತು.

‘ತನುಜಾ’ ಅನುಭವ: ‘2021ರಲ್ಲಿ ಈ ಚಿತ್ರದ ಚಿತ್ರೀಕರಣ ಆರಂಭವಾಗಿತ್ತು. ಚಿತ್ರದ ಕಥೆ ನನ್ನನ್ನು ಸೆಳೆದಿತ್ತು. ನಾನೂ ವಿದ್ಯಾರ್ಥಿನಿಯಾಗಿರುವ ಕಾರಣ, ಕಥೆಯನ್ನು ನಾನು ತಕ್ಷಣದಲ್ಲೇ ಗ್ರಹಿಸಿದೆ. ನಾನು ಇಲ್ಲಿಯವರೆಗೂ ಒಂದು ನೈಜ ಪಾತ್ರದ ಪಾತ್ರಧಾರಿಯಾಗಿ ನಟಿಸಿಲ್ಲ. ನೈಜ ಘಟನೆ ಆಧರಿತ ಸಿನಿಮಾವೊಂದರಲ್ಲಿ ಮೊದಲ ಬಾರಿಗೆ ನಟಿಸುತ್ತಿದ್ದೇನೆ. ನಿರ್ದೇಶಕರಾದ ಹರೀಶ್‌ ಎಂ.ಡಿ. ಹಳ್ಳಿ ಅವರ ಪೂರ್ಣ ಬೆಂಬಲದಿಂದಾಗಿ ಈ ಪಾತ್ರಕ್ಕೆ ಜೀವ ತುಂಬಿದೆ. ‘ತನುಜಾ’ ಅವರಿಗಿಂತ, ಅವರ ತಾಯಿ ಹಿರಿಯಮ್ಮ ಅವರ ಜೊತೆ ನನ್ನ ಮಾತುಕತೆ ಹೆಚ್ಚಾಗಿ ನಡೆಯುತ್ತಿತ್ತು. ‘ತನುಜಾ’ಳ ವ್ಯಕ್ತಿತ್ವ, ಆಕೆಯ ಬಾಲ್ಯದ ಬಗ್ಗೆ ಅವರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದೆ. ಇದು ನನ್ನ ನಟನೆಗೆ ಸಹಕಾರಿಯಾಯಿತು’ ಎನ್ನುತ್ತಾರೆ ಸಪ್ತಾ.

ADVERTISEMENT

‘ಚಿತ್ರೀಕರಣದ ಆರಂಭದಲ್ಲೇ ಕಥೆಯ ಕ್ಲೈಮ್ಯಾಕ್ಸ್‌ ದೃಶ್ಯದ ಚಿತ್ರೀಕರಣವಿತ್ತು. ‘ತನುಜಾ’ ಒಂದೇ ಉಸಿರಿನಲ್ಲಿ ಮೆಟ್ರೋ ನಿಲ್ದಾಣದ ಮೆಟ್ಟಿಲುಗಳನ್ನು ಹತ್ತುವ ದೃಶ್ಯವದು. ಚಿತ್ರೀಕರಣದ ಆರಂಭದ ದಿನವಾದ ಕಾರಣ, ಆ ಅದ್ಭುತವಾದ ದೃಶ್ಯಕ್ಕೆ ಹೆಚ್ಚಿನ ಶ್ರಮ ಹಾಕಿದ್ದೆ. ಈ ಶಕ್ತಿಯೇ ಚಿತ್ರದುದ್ದಕ್ಕೂ ಇತ್ತು’ ಎಂದು ನೆನಪಿಸಿಕೊಂಡರು ಸಪ್ತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.