ADVERTISEMENT

ಕಿಸ್ ಕೊಡಲು ಸಿದ್ಧ!

ಇದು ‘ತುಂಟ ತುಟಿಗಳ ಆಟೊಗ್ರಾಫ್’ ಎಂದಿದೆ ಚಿತ್ರ ತಂಡ

​ಪ್ರಜಾವಾಣಿ ವಾರ್ತೆ
Published 10 ಜನವರಿ 2019, 19:45 IST
Last Updated 10 ಜನವರಿ 2019, 19:45 IST
ವಿರಾಟ್ ಮತ್ತು ಶ್ರೀಲೀಲಾ
ವಿರಾಟ್ ಮತ್ತು ಶ್ರೀಲೀಲಾ   

ಮನರಂಜನೆಯ ಚುಂಬನವನ್ನು ಸಿನಿಮಾ ವೀಕ್ಷಕರಿಗೆ ಕೊಡಲು ಸಿದ್ಧವಾಗಿರುವ ಚಿತ್ರ ‘ಕಿಸ್’. ಇದು ‘ತುಂಟ ತುಟಿಗಳ ಆಟೊಗ್ರಾಫ್’ ಎಂದು ಕೂಡ ಚಿತ್ರತಂಡ ಹೇಳಿಕೊಂಡಿದೆ. ಸಿನಿಮಾ ಶೀರ್ಷಿಕೆ ಹಾಗೂ ಸಿನಿಮಾ ಬಗ್ಗೆ ನೀಡಿರುವ ವಿವರಣೆ ಕೇಳಿ ಯುವಕರ ಮೈಬಿಸಿ ಹೆಚ್ಚಾಗದೆ ಇದ್ದೀತೆ?!

ಅಂದಹಾಗೆ, ‘ಈ ಚಿತ್ರದಲ್ಲಿ ಅಶ್ಲೀಲ ದೃಶ್ಯಗಳು ಒಂಚೂರೂ ಇಲ್ಲ. ಎಲ್ಲ ವಯಸ್ಸಿನವರೂ ಮುಜುಗರವಿಲ್ಲದೆ ನೋಡಬಹುದಾದ ಸಿನಿಮಾ ಇದು’ ಎಂದು ನಿರ್ದೇಶಕ ಎ.ಪಿ. ಅರ್ಜುನ್ ಸ್ಪಷ್ಟಪಡಿಸಿದ್ದಾರೆ. ಸಿನಿಮಾ ಬಗ್ಗೆ ಮಾಹಿತಿ ನೀಡಲು ಅರ್ಜುನ್ ಅವರು ಸುದ್ದಿಗೋಷ್ಠಿ ಕರೆದಿದ್ದರು. ಸಿನಿಮಾ ನಾಯಕ ವಿರಾಟ್, ನಾಯಕಿ ಶ್ರೀಲೀಲಾ, ನಟ ದತ್ತಣ್ಣ ಸೇರಿದಂತೆ ಹಲವರು ಅಲ್ಲಿದ್ದರು. ‘ಕಿಸ್ ಸಿದ್ಧವಾಗಿದೆ. ನಾವಿನ್ನು ಕಿಸ್ ಕೊಡುವುದೊಂದೇ ಬಾಕಿ. ಆಮೇಲೆ ಸಿನಿಮಾ ವೀಕ್ಷಕರು ನಮಗೆ ಕಿಸ್ ಕೊಡುತ್ತಾರೆ’ ಎನ್ನುತ್ತ ಮಾತು ಆರಂಭಿಸಿದ ಅರ್ಜುನ್, ಚಿತ್ರವನ್ನು ಫೆಬ್ರುವರಿಯಲ್ಲಿ ತೆರೆಗೆ ತರುವ ಉದ್ದೇಶ ಇದೆ ಎಂದರು.

ಚಿತ್ರದ ನಾಯಕ ಮತ್ತು ನಾಯಕಿ ಸಿನಿಮಾ ರಂಗಕ್ಕೆ ಹೊಸಬರು. ನೃತ್ಯಕ್ಕೆ ಹೆಜ್ಜೆ ಹಾಕುವುದರಿಂದ ಆರಂಭಿಸಿ, ಹೊಡೆ–ಬಡಿ ದೃಶ್ಯಗಳನ್ನು ನಿಭಾಯಿಸುವುದರವರೆಗಿನ ತರಬೇತಿಯನ್ನು ಅವರಿಗೆ ಒಂಬತ್ತು ತಿಂಗಳ ಅವಧಿಯಲ್ಲಿ ನೀಡಲಾಗಿದೆ. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಒಂದು ದೃಶ್ಯದ ಚಿತ್ರೀಕರಣಕ್ಕಾಗಿ ಒಂದೆರಡು ತಿಂಗಳು ಕಾಯಬೇಕಾಯಿತು. ನಡುವೆ, ನಿರ್ಮಾಪಕ ವಿ. ರವಿಕುಮಾರ್ ಅವರು ಚುನಾವಣಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದರು. ಚಿತ್ರ ವಿಳಂಬ ಆಗಲು ಇವು ಕೂಡ ಕಾರಣ ಎಂದರು ಅರ್ಜುನ್.

ADVERTISEMENT

ಒಂದು ಹಾಡನ್ನು ಏಳು ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಇನ್ನೊಂದನ್ನು ವಿದೇಶದಲ್ಲಿ ಸೆರೆ ಹಿಡಿಯಲಾಗಿದೆ. ‘ಕಿಸ್ ಅಂದರೆ ಏನು ಎಂಬುದನ್ನು ಯಾರಿಗೂ ವಿವರಿಸಿ ಹೇಳಬೇಕಾಗಿಲ್ಲ. ಆ ಪದ ಕೇಳಿದ ತಕ್ಷಣವೇ ಅದರ ಅರ್ಥವೂ ಗೊತ್ತಾಗುತ್ತದೆ. ಚಿತ್ರದ ಕಥೆ ನಿಂತಿರುವುದು ಕೂಡ ಕಿಸ್ ಮೇಲೆಯೇ’ ಎಂದರು ಅರ್ಜುನ್.

ನಾಯಕ ವಿರಾಟ್ ಅವರಿಗೆ ಇದು ಮೊದಲ ಸಿನಿಮಾ. ‘ನಂದು ಇದರಲ್ಲಿ ಶ್ರೀಮಂತ ಹುಡುಗನ ಪಾತ್ರ. ಎಲ್ಲರ ಜೊತೆಯಲ್ಲೂ ಸ್ನೇಹದಿಂದ ಇರುವ ವ್ಯಕ್ತಿತ್ವ ಅದು’ ಎಂದರು ವಿರಾಟ್. ‘ಸಿನಿಮಾದಲ್ಲಿ ಎಷ್ಟು ಬಾರಿ ಕಿಸ್ ಕೊಟ್ಟಿದ್ದೀರಿ’ ಎಂದು ಪ್ರಶ್ನಿಸಿದಾಗ ಒಮ್ಮೆ ನಾಚಿ ನೀರಾದರು. ನಂತರ, ‘ಅದನ್ನು ತಿಳಿಯಲು ಸಿನಿಮಾ ನೋಡಿ’ ಎಂದರು.

‘ನಂದು ಎನರ್ಜೆಟಿಕ್ ಹಾಗೂ ಬಬ್ಲಿ ಆಗಿರುವ ಹುಡುಗಿಯ ಪಾತ್ರ. ಈ ಪಾತ್ರದ ಹೆಸರು ನಂದಿನಿ. ಎಲ್ಲರಲ್ಲೂ ಒಬ್ಬಳು ನಂದಿನಿ ಇರುತ್ತಾಳೆ. ಈ ಸಿನಿಮಾದಲ್ಲಿ ನಟನೆಗೆ ಬಹಳ ಅವಕಾಶ ಇದೆ’ ಎಂದು ಒಂದೇ ಉಸುರಿಗೆ ಹೇಳಿದರು ನಾಯಕಿ ಶ್ರೀಲೀಲಾ.

ವಿ. ರವಿಕುಮಾರ್ ಅವರು ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಎ.ಜೆ. ಶೆಟ್ಟಿ ಛಾಯಾಗ್ರಹಣ, ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಚಿತ್ರಕ್ಕೆ ಇದೆ.

ಕಿಸ್? ಸಿನಿಮಾ ಬೇಡ!

ಚಿತ್ರದ ಶೀರ್ಷಿಕೆ ‘ಕಿಸ್’ ಎಂಬುದು ತಿಳಿದ ನಂತರ ನಾಯಕಿ ಶ್ರೀಲೀಲಾ ಅವರ ತಾಯಿ, ‘ನೀನು ಇದರಲ್ಲಿ ಅಭಿನಯಿಸುವುದು ಬೇಡ. ನಿನ್ನ ಪಾಡಿಗೆ ವಿದ್ಯಾಭ್ಯಾಸದ ಬಗ್ಗೆ ಗಮನ ಕೊಡು’ ಎಂದು ಹೇಳಿದ್ದರಂತೆ.

ಆದರೆ, ನಿರ್ದೇಶಕ ಅರ್ಜುನ್ ಅವರು ನಂತರ ಚಿತ್ರದ ಕಥೆ ವಿವರಿಸಿ, ಅವರ ತಾಯಿಯನ್ನು ಒಪ್ಪಿಸಿದರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.