ADVERTISEMENT

ನಕಲಿ ದಾಖಲೆ ನೀಡಿ ವಂಚನೆ: ಸಿಸಿಬಿಗೆ ನಿರ್ದೇಶಕ ಎಸ್‌. ನಾರಾಯಣ್‌ ದೂರು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 13:09 IST
Last Updated 18 ಮಾರ್ಚ್ 2020, 13:09 IST
   

ಬೆಂಗಳೂರು: ತಮಗೆ 1.60 ಕೋಟಿ ರೂಪಾಯಿ ಮೋಸ ಮಾಡಿರುವ ಬಗ್ಗೆ ನಟ, ನಿರ್ದೇಶಕ, ನಿರ್ಮಾಪಕರೂ ಆಗಿರುವ ಎಸ್. ನಾರಾಯಣ್ ಅವರು ಸಿಸಿಬಿ ಡಿಸಿಪಿ ರವಿಕುಮಾರ್ ಅವರಿಗೆ ದೂರು ನೀಡಿದ್ದಾರೆ.

ಕಳೆದ ವರ್ಷ ಎಸ್. ನಾರಾಯಣ್ ಮತ್ತು ಮೂವರು ಸೇರಿ ಸಿನಿಮಾವೊಂದನ್ನು ನಿರ್ಮಾಣ ಮಾಡಲು ಮುಂದಾಗಿದ್ದರು. ಆದರೆ, ಸಿನಿಮಾ ಮುಹೂರ್ತ ಮಾತ್ರವೇ ಆಗಿತ್ತು. ಶೂಟಿಂಗ್ ನಿಂತು ಹೋಗಿತ್ತು.

ಪಾಲುದಾರರು ಸಿನಿಮಾದ ಸಂಭಾವನೆ ಬದಲು ನಿವೇಶನ ಖರೀದಿಸುವಂತೆ ಎಸ್‌. ನಾರಾಯಣ್‌ ಅವರಿಗೆ ಸೂಚಿಸಿದ್ದರು. ಅಂತೆಯೇ ನಾರಾಯಣ್ ಅವರು 1.60 ಕೋಟಿ ಹಣ ಕೊಟ್ಟು ಎಚ್‌.ಬಿ.ಆರ್‌. ಬಡಾವಣೆಯಲ್ಲಿ ನಿವೇಶನವನ್ನು ಖರೀದಿಸಿದ್ದರು.

ADVERTISEMENT

ಆದರೆ, ಖರೀದಿಸಿದ ನಿವೇಶನದ ದಾಖಲೆಗಳು ನಕಲಿ ಆಗಿವೆ. ನಕಲಿ ದಾಖಲೆ ಕೊಟ್ಟು ನನ್ನ ಬಳಿ ಹಣ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ನಾರಾಯಣ್ ಉಲ್ಲೇಖಿಸಿದ್ದಾರೆ.

ನಿವೇಶನ ಕೊಳ್ಳಲು ಬ್ಯಾಂಕ್‌ ನಲ್ಲಿ ಸಾಲ ಮಾಡಿದ್ದೆ. ಸಾಲದ ಮೊತ್ತ ಈಗ 2 ಕೋಟಿ ರೂಪಾಯಿ ದಾಟಿದೆ. ಸಾಲ ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ನ್ಯಾಯ ಒದಗಿಸಿಕೊಡಿ ಎಂದೂ ಪೊಲೀಸರ ಬಳಿ ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.