ADVERTISEMENT

ಪ್ರೇಕ್ಷಕರ ಸಂಖ್ಯೆ ಮಿತಿ ಆದೇಶ ಹಿಂಪಡೆಯಿರಿ: ಸುಧಾಕರ್‌ಗೆ ನಿರ್ಮಾಪಕರ ಮನವಿ

ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಭೇಟಿಯಾದ ನಿರ್ಮಾಪಕರು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 7:34 IST
Last Updated 6 ಏಪ್ರಿಲ್ 2021, 7:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಶೇ 50 ನಿರ್ಬಂಧ ಆದೇಶ ಶುಕ್ರವಾರದಿಂದ ಅನುಷ್ಠಾನವಾಗಲಿದ್ದು, ಈ ಹಿನ್ನೆಲೆಯಲ್ಲಿ ಚಿತ್ರ ನಿರ್ಮಾಪಕರು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರನ್ನು ಭೇಟಿಯಾಗಿ ನಿರ್ಬಂಧ ಆದೇಶ ರದ್ದುಗೊಳಿಸುವಂತೆ ಮನವಿ ಸಲ್ಲಿಸಿದೆ.

‘ನಿರ್ಮಾಪಕರು ಸಂಕಷ್ಟದಲ್ಲಿದ್ದಾರೆ. ಚಿತ್ರಮಂದಿರದಿಂದ ಕೋವಿಡ್‌ ಹರಡುತ್ತಿದೆ ಎಂದು ಯಾರೂ ಹೇಳಿಲ್ಲ. ಚಿತ್ರಮಂದಿರಗಳಲ್ಲಿ ಎಲ್ಲ ಮಾದರಿಯ ಮುಂಜಾಗೃತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಬೇರೆ ಯಾವ ರಾಜ್ಯಗಳಲ್ಲೂ ಶೇ 50ರಷ್ಟು ಮಾತ್ರ ಸೀಟು ಭರ್ತಿ ಆದೇಶವನ್ನು ಹೊರಡಿಸಿಲ್ಲ. ಆದರೆ, ನಮ್ಮ ಕರ್ನಾಟಕದಲ್ಲೇಕೆ ಈ ಮಲತಾಯಿ ಧೋರಣೆ. ನಿರ್ಬಂಧ ಆದೇಶವನ್ನು ಸರ್ಕಾರ ಹಿಂಪಡೆಯಬೇಕು’ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಡಿ.ಕೆ.ರಾಮಕೃಷ್ಣ ಹೇಳಿದರು.

‘ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾದ ಮೂರ್ನಾಲ್ಕು ದಿನ ಹೌಸ್‌ಫುಲ್‌ ಇರುತ್ತದೆ. ನಂತರದ ದಿನಗಳಲ್ಲಿ ಶೇ 40–60ರವರೆಗೆ ಮಾತ್ರ ಪ್ರೇಕ್ಷಕರ ಸಂಖ್ಯೆ ಇರುತ್ತದೆ. ಪ್ರೇಕ್ಷಕರ ಸಂಖ್ಯೆಯನ್ನು ಶೇ 50 ನಿರ್ಬಂಧ ಮಾಡಿದರೆ ಜನರು ಭಯ ಬೀಳುತ್ತಾರೆ. ಈ ನಿರ್ಬಂಧವನ್ನು ತೆಗೆಯಲು ಮನವಿ ಮಾಡಿದ್ದೇವೆ. ಚಿತ್ರರಂಗ ಸಂಕಷ್ಟದಲ್ಲಿದೆ. ನಿರ್ಬಂಧ ಹಾಕಿದರೆ ಬಾಡಿಗೆ ಕಟ್ಟಲು, ವಿದ್ಯುತ್‌ ಬಿಲ್‌ ಪಾವತಿಸಲೂ ಕಷ್ಟವಾಗಲಿದೆ. ನಿರ್ಮಾಪಕರು ಬದುಕಲು ಸಾಧ್ಯವಿಲ್ಲ. ಕೋವಿಡ್‌ ನಿಯಂತ್ರಣ ಎಲ್ಲರ ಕರ್ತವ್ಯ. ಇದಕ್ಕೆ ನಾವು ಸಹಕರಿಸುತ್ತೇವೆ. ಮುಖ್ಯಮಂತ್ರಿ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದು, ಕಾದು ನೋಡುತ್ತೇವೆ’ ಎಂದು ನಿರ್ಮಾಪಕ ಕೆ.ಮಂಜು ಹೇಳಿದರು.

ADVERTISEMENT

ಮುಖ್ಯಮಂತ್ರಿ ಜೊತೆ ಚರ್ಚಿಸಿ ನಿರ್ಧಾರ

‘ನಿರ್ಮಾಪಕರ ಮನವಿಯ ಕುರಿತು ಮುಖ್ಯಮಂತ್ರಿಯ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ. ತಾಂತ್ರಿಕ ಸಲಹಾ ಸಮಿತಿ ಶೇ 50ಕ್ಕಿಂತ ಹೆಚ್ಚಿನ ಪ್ರೇಕ್ಷಕರ ಸಂಖ್ಯೆಗೆ ಅವಕಾಶ ನೀಡಬಾರದು ಎಂದು ಹೇಳಿದೆ. ಕಲ್ಯಾಣ ಮಂಟಪ, ಶಾಲಾ ಕಾಲೇಜು, ಸಾರ್ವಜನಿಕ ಸಾರಿಗೆಯಲ್ಲಿನ ಜನರ ಸಂಖ್ಯೆ ನಿರ್ಬಂಧದ ಕುರಿತೂ 20 ದಿನಗಳ ಮುಂಚಿತವಾಗಿಯೇ ಸಮಿತಿಯು ಮುಖ್ಯಮಂತ್ರಿಯವರಿಗೆ ಸಲಹೆಯನ್ನು ನೀಡಿತ್ತು’ ಎಂದು ಸಚಿವ ಸುಧಾಕರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.