ನಟ ರಮೇಶ್ ಅರವಿಂದ್ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ‘ದೈಜಿ’ ಚಿತ್ರೀಕರಣ ಭರದಿಂದ ಸಾಗಿದೆ. ‘ಶಿವಾಜಿ ಸುರತ್ಕಲ್’ ಖ್ಯಾತಿಯ ಆಕಾಶ್ ಶ್ರೀವತ್ಸ ನಿರ್ದೇಶನದ ಚಿತ್ರಕ್ಕೆ ನಟ ದಿಗಂತ್ ಸೇರ್ಪಡೆಗೊಂಡಿದ್ದಾರೆ.
‘ಇದು ರಮೇಶ್ ಅರವಿಂದ್ ಅವರ 106ನೇ ಚಿತ್ರ. ದಿಗಂತ್, ರಮೇಶ್ ಅರವಿಂದ್ ಅವರ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಮೇಶ್ ಅರವಿಂದ್ ಸೂರ್ಯನ ಪಾತ್ರದಲ್ಲಿ, ರಾಧಿಕಾ ನಾರಾಯಣ್ ಭೂಮಿಯ ಪಾತ್ರದಲ್ಲಿ, ದಿಗಂತ್ ಗಗನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ನಡೆಯುತ್ತಿದ್ದು ಶೇಕಡ 50ರಷ್ಟು ಚಿತ್ರೀಕರಣ ಮುಕ್ತಾಯಗೊಂಡಿದೆ’ ಎಂದಿದೆ ಚಿತ್ರತಂಡ.
ರವಿ ಕಶ್ಯಪ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶ್ರೀಶಾ ಕುದುವಳ್ಳಿ ಛಾಯಾಚಿತ್ರಗ್ರಹಣವಿದೆ. ‘ಚಿತ್ರದ ಶೀರ್ಷಿಕೆ ‘ದೈಜಿ’ಗೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಅರ್ಥಗಳಿವೆ. ಕೊಂಕಣಿಯಲಿ ‘ದೈಜಿ’ ಎಂದರೆ ರಕ್ತ ಸಂಬಂಧ. ಜಪಾನೀ ಭಾಷೆಯಲ್ಲಿ ‘ದೈಜಿ’ ಎಂದರೆ ಬಹಳ ಕಾಳಜಿ ವಹಿಸಬೇಕಾದ ವಿಚಾರ. ಮಿಸ್ಟರಿ ಅಥವಾ ಹಾರರ್ ಕಥೆಯುಳ್ಳ ಚಿತ್ರ’ ಎಂದಿದ್ದಾರೆ ನಿರ್ದೇಶಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.