ADVERTISEMENT

‘ಮನರೂಪ’ದ ಗುಮ್ಮ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2019, 19:45 IST
Last Updated 28 ಮಾರ್ಚ್ 2019, 19:45 IST
ಕಿರಣ ಹೆಗಡೆ, ನಿಶಾ ಬಿ.ಆರ್‌., ನಿಶಾ ಬಿ.ಆರ್‌.
ಕಿರಣ ಹೆಗಡೆ, ನಿಶಾ ಬಿ.ಆರ್‌., ನಿಶಾ ಬಿ.ಆರ್‌.   

‘ಹೇ! ನಾವು ಕರಡಿ ಗುಹೆ ಸಿಗುವವರೆಗೂ ಹೀಗೆ ಸಾಗುತ್ತಲೇ ಇರೋಣ’ –ಹೀಗೆಂದು ಒಂದು ಗಂಡು ಧ್ವನಿ ಕತ್ತಲರಾತ್ರಿಯ ಆ ಒಂಟಿ ರಸ್ತೆಯಲ್ಲಿ ಸಾಗುವ ಕಾರಿನಲ್ಲಿ ಹೇಳುತ್ತದೆ. ಆ ಕಾರಿನಲ್ಲಿ ಮೂವರು ಪಯಣಿಸುತ್ತಿರುವಂತೆ ಮೇಲ್ನೋಟಕ್ಕೆ ಕಾಣುತ್ತದೆ. ಕೊನೆಗೆ, ಸಂಪೂರ್ಣವಾಗಿ ಸಂಭಾಷಣೆ ಆಲಿಸಿದಾಗ ಐವರು ಸ್ನೇಹಿತರ ದೂರದ ಪ್ರಯಾಣ ಎನ್ನುವುದು ಅರಿವಾಗುತ್ತದೆ. ಇದು ‘ಮನರೂಪ’ ಚಿತ್ರದ ಮೋಷನ್‌ ಪೋಸ್ಟರ್‌ನ ದೃಶ್ಯ.

ಮೋಷನ್‌ ಪೋಸ್ಟರ್‌ ಬಿಡುಗಡೆಯ ಬಳಿಕ ನಿರ್ದೇಶಕ ಕಿರಣ ಹೆಗಡೆ ಮೈಕ್‌ ಕೈಗೆತ್ತಿಕೊಂಡರು. ಅವರ ಮಾತು ಅಸ್ತಿತ್ವವಾದದ ಸುತ್ತೆಲ್ಲಾ ಸುತ್ತಾಡಿ ಕೊನೆಗೆ ಕರಡಿ ಗುಹೆಯ ಗುಮ್ಮನತ್ತ ಹೊರಳಿತು.

‘1981ರಿಂದ 1996ರ ನಡುವೆ ಜನಿಸಿದವರ ಕಥೆ ಇದು. ಈ ಅವಧಿಯಲ್ಲಿ ಜನಿಸಿದ ಯುವಜನಾಂಗದ್ದು ಸ್ವಾರ್ಥ, ಅತಿಯಾಗಿ ತಮ್ಮನ್ನೇ ತಾವು ಪ್ರೀತಿಸುವುದು, ತಮ್ಮನ್ನೇ ಎಲ್ಲರೂ ಗಮನಿಸಬೇಕು ಎಂಬ ಅಭಿಲಾಷೆ ಹೊಂದಿರುತ್ತಾರೆ. ಅವರು ಎಲ್ಲಿಯೂ ನೆಲೆಯೂರುವುದಿಲ್ಲ. ಅಪರೂಪದ ಸಂಗತಿ ಅರಸಿಕೊಂಡು ತಿರುಗಾಡುವುದು ಅವರ ಮನಸ್ಥಿತಿ. ಅದರ ಸುತ್ತ ಕಥೆ ಹೊಸೆಯಲಾಗಿದೆ. ಇದು ಹಾರರ್‌ ಚಿತ್ರವಲ್ಲ’ ಎಂದು ಸ್ಪಷ್ಟಪಡಿಸಿದರು ಕಿರಣ ಹೆಗಡೆ.

ADVERTISEMENT

‘ನಾನು ಕೂಡ ಇದೇ ಮನಸ್ಥಿತಿಯವನು’ ಎಂದು ಹೇಳಲು ಅವರು ಹಿಂಜರಿಕೆ ತೋರಲಿಲ್ಲ.

ಸೈಕಲಾಜಿಕಲ್‌ ಕ್ರೈಮ್‌ ಥ್ರಿಲ್ಲರ್‌ ಚಿತ್ರ ಇದು. ಶಿರಸಿ, ಸಿದ್ದಾಪುರದ ಕಾಡಿನಲ್ಲಿ ಚಿತ್ರೀಕರಣ ಮಾಡಲಾಗಿದೆಯಂತೆ. ಪ್ರಯಾಣ, ಹೊಸ ಸ್ಥಳಗಳ ಅನ್ವೇಷಣೆ, ಹಳೆ ಸ್ನೇಹದ ನೆನಪುಗಳ ಕನವರಿಕೆ, ಮನಸ್ಸಿನೊಳಗಿನ ಕತ್ತಲು, ಪ್ರೇಮದ ಪಾವಿತ್ರ್ಯದ ಸುತ್ತವೇ ಚಿತ್ರಕಥೆ ಸಾಗಲಿದೆಯಂತೆ. ಐವರು ಸ್ನೇಹಿತರಿಗೆ ಗುಮ್ಮ ಯಾವ ರೀತಿ ಕಾಟ ನೀಡುತ್ತದೆ ಎನ್ನುವುದನ್ನು ಸಿನಿಮಾದಲ್ಲಿಯೇ ನೋಡಬೇಕು. ಮನುಷ್ಯರ ಮನಸ್ಸಿನ ವಿವಿಧ ಛಾಯೆಗಳ ಮೇಲೆ ಚಿತ್ರ ಬೆಳಕು ಚೆಲ್ಲಲಿದೆ ಎನ್ನುವುದು ಚಿತ್ರತಂಡದ ಅಂಬೋಣ.

ಸರ್‌ವಣ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಗೋವಿಂದ್ ರಾಜ್‌ ಅವರದ್ದು. ದಿಲೀಪ್‌ ಕುಮಾರ್, ಅನುಷಾ ರಾವ್, ನಿಶಾ ಬಿ.ಆರ್‌., ಆರ್ಯನ್‌, ಶಿವಪ್ರಸಾದ್, ಅಮೋಘ್‌ ಸಿದ್ಧಾರ್ಥ್‌, ಗಜ ನೀನಾಸಂ, ಪ್ರಜ್ವಲ್‌ ಗೌಡ ತಾರಾಗಣದಲ್ಲಿದ್ದಾರೆ. ಜೂನ್‌ನಲ್ಲಿ ಜನರ ಮುಂದೆ ಬರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.