ADVERTISEMENT

ಏನಿದು ಒಂದು ಗಂಟೆಯ ಕಥೆ?

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 19:30 IST
Last Updated 18 ಮಾರ್ಚ್ 2021, 19:30 IST
‘ಒಂದು ಗಂಟೆಯ ಕಥೆ’ ಚಿತ್ರದ ದೃಶ್ಯ
‘ಒಂದು ಗಂಟೆಯ ಕಥೆ’ ಚಿತ್ರದ ದೃಶ್ಯ   

ಭಿನ್ನ ಶೀರ್ಷಿಕೆಯ ಕಾರಣದಿಂದಲೇ ಗಮನ ಸೆಳೆಯುವ ಹಲವು ಸಿನಿಮಾಗಳು ಈಗಾಗಲೇ ಚಂದನವನದಲ್ಲಿ ಬಿಡುಗಡೆ ಕಂಡಿವೆ. ಕುತೂಹಲ ಹುಟ್ಟಿಸುವ ಟೈಟಲ್ ಮೂಲಕ ಸಿನಿ ಪ್ರೇಕ್ಷಕರನ್ನು ಚಿತ್ರಮಂದಿರದ ಕಡೆಗೆ ಸೆಳೆಯುವ ಪ್ರಯತ್ನವೂ ಇದು ಎಂದು ಹೇಳಬಹುದು. ಈಗ ಈ ಸಾಲಿಗೆ ಇನ್ನೊಂದು ಹೊಸ ಸಿನಿಮಾ ಸೇರ್ಪಡೆಯಾಗುತ್ತಿದೆ. ಸಿನಿಮಾದ ಹೆಸರು ‘ಒಂದು ಗಂಟೆಯ ಕಥೆ’. ಈ ಸಿನಿಮಾ ಇಂದು ಬಿಡುಗಡೆಯಾಗಿದೆ.

‘ಮತ್ತೆ ಮುಂಗಾರು’, ‘ಗುಣ’ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ದ್ವಾರ್ಕಿ ರಾಘವ್‌ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 8 ವರ್ಷಗಳ ನಂತರ ಒಂದು ಗಂಟೆಯ ಕಥೆಯ ಮೂಲಕ ಅವರು ಸಿನಿರಂಗಕ್ಕೆ ಮರಳಿದ್ದಾರೆ. ಹಿಂದೆ ಕನ್ನಡ ಕಿರುತೆರೆ ಹಾಗೂ ಹಿರಿತೆರೆಗಳಲ್ಲಿ ನಟಿಸಿದ್ದ ಅಜಯ್‌ರಾಜ್ ಈ ಚಿತ್ರಕ್ಕೆ ನಾಯಕ. ಶನಾಯ ಕಾಟ್ವೆ ಚಿತ್ರದ ನಾಯಕಿ.

ಅಜಯ್‌ರಾವ್‌ ಸದ್ಯ ಚೆನ್ನೈನಲ್ಲಿ ನೆಲೆಸಿದ್ದಾರೆ. ಕಮಲ್‌ಹಾಸನ್‌ ನಟನೆಯ ‘ಉತ್ತಮ ವಿಲನ್’ ಚಿತ್ರದಲ್ಲಿ ಇವರು ನಟಿಸಿದ್ದಾರೆ. ವೆಟ್ರಿಮಾರನ್ ಅವರ ಸಿನಿಮಾದಲ್ಲೂ ನಟಿಸಿರುವ ಇವರು ಸದ್ಯ ಎರಡು ತಮಿಳು ಚಿತ್ರಗಳಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

ADVERTISEMENT

ಈ ಸಿನಿಮಾದ ಬಗ್ಗೆ ಮಾತನಾಡಿದ ನಾಯಕಿ ಶನಾಯ ‘ಈ ಸಿನಿಮಾ ನನ್ನ ಸಿನಿವೃತ್ತಿಗೆ ಒಂದು ಒಳ್ಳೆಯ ಚಿತ್ರ ಆಗಲಿದೆ ಎಂದು ನಂಬಿದ್ದೇನೆ’ ಎಂದಿದ್ದಾರೆ. ಇದು ನೈಜ ಘಟನೆ ಆಧಾರಿತ ಸಿನಿಮಾ. ದೇಶದಲ್ಲಿ ಸಂಚಲನವನ್ನು ಉಂಟು ಮಾಡಿದ ಘಟನೆಯಿದು. ಪ್ರೇಮಿಯ ಖಾಸಗಿ ಭಾಗವನ್ನು ಕತ್ತರಿಸಿದ ಪ್ರೇಯಸಿಯ ಕಥೆ ಇದು ಎನ್ನಿಸುತ್ತದೆ. ಕಿರುತೆರೆಯ ಹಲವು ಪ್ರತಿಭೆಗಳು ಈ ಸಿನಿಮಾದಲ್ಲಿ ನಟಿಸಿರುವುದು ವಿಶೇಷ.

ಸಂಪೂರ್ಣ ಹಾಸ್ಯಮಯ ಚಿತ್ರ ಇದಾಗಿದ್ದು ಪ್ರೇಕ್ಷಕರಿಗೆ ಮನರಂಜನೆ ನೀಡುವುದರಲ್ಲಿ ಸಂಶಯವಿಲ್ಲ ಎಂದಿದೆ ಚಿತ್ರತಂಡ. ಈಗಾಗಲೇ ಈ ಚಿತ್ರ ಟ್ರೇಲರ್ ಕೂಡ ಬಿಡುಗಡೆಯಾಗಿದ್ದು ಕಚಗುಳಿ ಇಡುವ ಡೈಲಾಗ್‌ಗಳ ಮೂಲಕ ಗಮನ ಸೆಳೆದಿದೆ. ಟ್ರೇಲರ್‌ ತುಂಬಾ ದ್ವಂದ್ವಾರ್ಥದ ಸಂಭಾಷಣೆಗಳೇ ತುಂಬಿವೆ. ಆದರೆ, ‘ಚಿತ್ರ ಹಾಗಿಲ್ಲ, ಈ ಚಿತ್ರದಿಂದ ಸಮಾಜಕ್ಕೆ ಒಂದು ಉತ್ತಮ ಸಂದೇಶವಿದೆ’ ಎನ್ನುತ್ತದೆ ಚಿತ್ರತಂಡ.

ರಿಯಲ್ ವೆಲ್ತ್‌ ವೆಂಚರ್ ಪ್ರೊಡಕ್ಷನ್ಸ್ ಲಾಂಭನದಲ್ಲಿ ಕಶ್ಯಪ್ ದಾಕೋಜು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ದುಶ್ಯಂತ್ ಹಾಗೂ ಶ್ವೇತಾ ದಾಕೋಜು ಈ ಚಿತ್ರದ ಸಹ ನಿರ್ಮಾಪಕರು. ಡೆನಿಸ್ ವಲ್ಲಭನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಸೂರ್ಯಕಾಂತ್ ಛಾಯಾಗ್ರಹಣ ಹಾಗೂ ಗಣೇಶ್ ಮಲ್ಲಯ್ಯ ಸಂಕಲನ ಚಿತ್ರಕ್ಕಿದೆ. ಚಿತ್ರದಲ್ಲಿ ಒಟ್ಟು 123 ಮಂದಿ ನಟಿಸಿದ್ದಾರೆ. ಚಿತ್ರದಲ್ಲಿ ಫಾರ್ಚೂನರ್ ಸಿನಿಮಾ ಖ್ಯಾತಿಯ ಸ್ವಾತಿ ಶರ್ಮಾ, ಪ್ರಕಾಶ್ ತುಮ್ಮಿನಾಡ್‌, ಯಶವಂತ ಸರ್‌ದೇಶಪಾಂಡೆ, ಚಿದಾನಂದ್‌, ಪ್ರಶಾಂತ್ ಸಿದ್ಧಿ, ಸಿಲ್ಲಿಲಲ್ಲಿ ಆನಂದ್‌, ನಾಗೇಂದ್ರ ಶಾ, ಚಂದ್ರಕಲಾ, ರೆಮೊ ರೇಖಾ, ಮೇಫ ಜಕಾತಿ, ಜಯದೇವ್, ಸುಜಯ್, ಸೋಮು, ಎಂ.ಎನ್.ಲಕ್ಷ್ಮೀದೇವಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಅಜಯ್ ರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.