ಎಕ್ಕ ಚಿತ್ರದಲ್ಲಿ ಸಂಜನಾ, ಯುವ
ಈ ವರ್ಷದ ಮೊದಲಾರ್ಧ ಮುಗಿದು, ದ್ವಿತೀಯಾರ್ಧಕ್ಕೆ ಹೆಜ್ಜೆ ಇಟ್ಟಿದ್ದೇವೆ. ಈ ಅವಧಿಯಲ್ಲಿ ಚಂದನವನದ ತೆರೆಗಳಲ್ಲಿ ಸಿನಿಮಾ ಹಬ್ಬಕ್ಕೆ ತಯಾರಿ ನಡೆದಿದೆ. ಚಿತ್ರಮಂದಿರಗಳತ್ತ ಪ್ರೇಕ್ಷಕರನ್ನು ಸೆಳೆಯುವ ಸಾಮರ್ಥ್ಯವುಳ್ಳ, ಕಾಂಟೆಂಟ್‌ನಿಂದಾಗಿ ಸದ್ದು ಮಾಡುತ್ತಿರುವ, ಪ್ರಮುಖ ನಿರ್ಮಾಣ ಸಂಸ್ಥೆ ತಯಾರಿಸಿದ ಚಿತ್ರಗಳ ತುಣುಕುಗಳು ಇಲ್ಲಿವೆ. ಈ ಪೈಕಿ ಹಲವು ಚಿತ್ರತಂಡಗಳು ಈಗಾಗಲೇ ರಿಲೀಸ್ ದಿನಾಂಕ ಘೋಷಿಸಿದ್ದು, ಇನ್ನೊಂದಿಷ್ಟು ಸಿನಿಮಾಗಳು ಇದೇ ವರ್ಷ ಬರುವ ತಯಾರಿಯಲ್ಲಿವೆ.
ಪಿ.ಆರ್.ಕೆ.ಪ್ರೊಡಕ್ಷನ್ಸ್, ಜಯಣ್ಣ ಕಂಬೈನ್ಸ್ ಹಾಗೂ ಕೆ.ಆರ್.ಜಿ.ಸ್ಟೂಡಿಯೊಸ್ ಹೀಗೆ ಮೂರು ನಿರ್ಮಾಣ ಸಂಸ್ಥೆಗಳು ಜಂಟಿಯಾಗಿ ತಯಾರಿಸಿರುವ ಸಿನಿಮಾ ‘ಎಕ್ಕ’. ‘ರತ್ನನ್ ಪ್ರಪಂಚ’ ಖ್ಯಾತಿಯ ರೋಹಿತ್ ಪದಕಿ ನಿರ್ದೇಶನದ, ಯುವ ರಾಜ್‌ಕುಮಾರ್ ನಟನೆಯ ಈ ಸಿನಿಮಾ ಸದ್ಯ ‘ಬ್ಯಾಂಗಲ್ ಬಂಗಾರಿ’ ಹಾಡಿನ ಮೂಲಕ ಸದ್ದು ಮಾಡುತ್ತಿದೆ. ಈ ನಿರ್ಮಾಣ ಸಂಸ್ಥೆಗಳಿಗೆ ವಿತರಣೆಯ ಹಿಡಿತವಿದ್ದು, ಸಿನಿಮಾ ನೂರಾರು ಚಿತ್ರಮಂದಿರಗಳಿಗೆ ಲಗ್ಗೆ ಇಡುವುದು ಪಕ್ಕಾ.
ಕಿರೀಟಿ, ಶ್ರೀಲೀಲಾ
ಕಿರೀಟಿ ಹಾಗೂ ಶ್ರೀಲೀಲಾ ನಟನೆಯ ‘ಜೂನಿಯರ್’ ಸಿನಿಮಾ ರಿಚ್‌ನೆಸ್‌ನಲ್ಲಿ ಉತ್ಕೃಷ್ಟವಾಗಿ ಕಾಣುತ್ತಿದೆ. ಕಿರೀಟಿಯ ಚೊಚ್ಚಲ ಸಿನಿಮಾ ಇದಾಗಿದ್ದು, ದೇವಿಶ್ರೀ ಪ್ರಸಾದ್ ಸಂಗೀತ ಚಿತ್ರದ ಪ್ಲಸ್ ಪಾಯಿಂಟ್.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆ್ಯಕ್ಷನ್ ಕಟ್ ಹೇಳುತ್ತಿರುವ, ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಜೊತೆಯಾಗಿ ಕಾಣಿಸಿಕೊಳ್ಳಲಿರುವ ಈ ಸಿನಿಮಾ ಆಗಸ್ಟ್‌ನಲ್ಲಿ ಬರಲಿದೆ. ಈ ಹಿಂದೆ ಆಗಸ್ಟ್ 15ಕ್ಕೆ ಸಿನಿಮಾ ರಿಲೀಸ್ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ ಆಗಸ್ಟ್ 14ರಂದು ರಜನಿಕಾಂತ್ ನಟನೆಯ ಮಲ್ಟಿಸ್ಟಾರ್‌ಗಳನ್ನು ಹೊಂದಿರುವ ‘ಕೂಲಿ’ ಸಿನಿಮಾ ಹಾಗೂ ಹೃತಿಕ್ ರೋಷನ್–ಜೂನಿಯರ್ ಎನ್‌ಟಿಆರ್ ನಟನೆಯ ‘ವಾರ್–2’ ಸಿನಿಮಾಗಳು ರಿಲೀಸ್ ಆಗುತ್ತಿರುವ ಕಾರಣ ಚಿತ್ರತಂಡ ಸಿನಿಮಾ ಮುಂದೂಡಲು ಯೋಚಿಸಿದೆ. ‘ಆಗಸ್ಟ್‌ನಲ್ಲಿ ಖಂಡಿತಾ ತೆರೆಗೆ ಬರುತ್ತೇವೆ. ಬೇರೆ ಕಡೆ ಕ್ಲ್ಯಾಶ್ ಮಾಡಿಕೊಳ್ಳಲು ಇಷ್ಟವಿಲ್ಲ. ಎರಡು ಪ್ರಮುಖ ಸಿನಿಮಾಗಳಿಂದ ಚಿತ್ರಮಂದಿರಗಳ ಸಮಸ್ಯೆ ಎದುರಾಗಲಿದೆ’ ಎಂದು ಇತ್ತೀಚೆಗೆ ಅರ್ಜುನ್ ಜನ್ಯ ಹೇಳಿದ್ದರು.
ನಟ ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಅವರು ತಮ್ಮದೇ ಪಿಎ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣ ಮಾಡಿರುವ ‘ಕೊತ್ತಲವಾಡಿ’ ಸಿನಿಮಾ ಆಗಸ್ಟ್ 1ರಂದು ರಿಲೀಸ್ ಆಗುತ್ತಿದೆ. ಶ್ರೀರಾಜ್ ನಿರ್ದೇಶನ ಚೊಚ್ಚಲ ಚಿತ್ರದಲ್ಲಿ ಪೃಥ್ವಿ ಅಂಬಾರ್ ನಾಯಕನಾಗಿ ನಟಿಸಿದ್ದು, ಈ ಸಿನಿಮಾ ಕಾಂಟೆಂಟ್‌ನಿಂದ ಗಮನಸೆಳೆಯುತ್ತಿದೆ.
ದುನಿಯಾ ವಿಜಯ್
ಸೆಪ್ಟೆಂಬರಲ್ಲಿಯೂ ಒಂದೆರಡು ಸಿನಿಮಾ
‘ಕಾಟೇರ’ ಸಿನಿಮಾದ ಕಥೆಗಾರ ಜಡೇಶ ಕೆ. ಹಂಪಿ ನಿರ್ದೇಶನದ, ‘ದುನಿಯಾ’ ವಿಜಯ್ ನಟನೆಯ 29ನೇ ಸಿನಿಮಾ ‘ಲ್ಯಾಂಡ್‌ಲಾರ್ಡ್’ನ ಸೆಪ್ಟೆಂಬರ್ ಮಾಸಾಂತ್ಯದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಗುರುದತ್ ಗಾಣಿಗ ನಿರ್ದೇಶನದ, ಪ್ರಜ್ವಲ್ ದೇವರಾಜ್ ನಟನೆಯ ‘ಕರಾವಳಿ’ ಸಿನಿಮಾವನ್ನು ಸೆಪ್ಟೆಂಬರ್ ಮಾಸಾಂತ್ಯದಲ್ಲಿ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ.
ನಟ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ’ ಸಿನಿಮಾ ಪ್ರೀಕ್ವೆಲ್‌ನ ಶೂಟಿಂಗ್ ಪೂರ್ಣಗೊಂಡಿದೆ. ಅ.2ಕ್ಕೆ ಈ ಸಿನಿಮಾ ವಿಶ್ವದಾದ್ಯಂತ ತೆರೆಕಾಣಲಿದೆ. ಕುಂದಾಪುರ ಬಳಿ 25 ಎಕರೆ ಪ್ರದೇಶದಲ್ಲಿ ಬೃಹತ್ ಸೆಟ್ ಹಾಕಿ ಈ ಸಿನಿಮಾದ ಕಾಲ್ಪನಿಕ ಊರನ್ನು ಸೃಷ್ಟಿಸಿ ಚಿತ್ರೀಕರಣ ನಡೆಸಲಾಗಿದೆ. ಭಾರತೀಯ ಹಾಗೂ ಅಂತರರಾಷ್ಟ್ರೀಯ ತಂತ್ರಜ್ಞರೂ ಈ ಸಿನಿಮಾದಲ್ಲಿದ್ದು, 45 ರಿಂದ 50 ದಿನಗಳ ಕಾಲ ಸುಮಾರು 500 ತರಬೇತಿದಾರರು, 3000ಕ್ಕೂ ಹೆಚ್ಚು ಜೂನಿಯರ್ ಕಲಾವಿದರು ಈ ಸಿನಿಮಾದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು. ಆಸ್ಕರ್ ಪ್ರಶಸ್ತಿಯನ್ನು ಗಮನದಲ್ಲಿಟ್ಟುಕೊಂಡೇ ಈ ಸಿನಿಮಾ ತಯಾರಾಗಿದ್ದು, ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಪೋಸ್ಟರ್ ಮುಖಾಂತರವೇ ಹೊಂಬಾಳೆ ಫಿಲ್ಮ್ಸ್ ತಿಳಿಸಿದೆ.
ದರ್ಶನ್
ಪ್ರಕಾಶ್ ವೀರ್ ನಿರ್ದೇಶನದ, ಜೆ.ಜಯಮ್ಮ ನಿರ್ಮಾಣದ ‘ಡೆವಿಲ್’ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಹಾಡುಗಳ ಚಿತ್ರೀಕರಣ ಪ್ರಗತಿಯಲ್ಲಿದೆ. ಡಿಸೆಂಬರ್‌ನಲ್ಲಿ ಈ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.
ನಟ ಕಿಚ್ಚ ಸುದೀಪ್ ನಟನೆಯ 47ನೇ ಸಿನಿಮಾದ ಶೂಟಿಂಗ್ ಜುಲೈ 7ಕ್ಕೆ ಆರಂಭವಾಗಿದ್ದು, ‘ಮ್ಯಾಕ್ಸ್’ ಚಿತ್ರದ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರೇ ಇದಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ‘ಈ ಸಿನಿಮಾ ಡಿ.25ಕ್ಕೆ ಬರಬೇಕು ಎನ್ನುವುದು ನಮ್ಮ ಹಠ. ಇದು ಅಸಾಧ್ಯವಾದ ಮಾತು. ಆದರೆ ಈ ತಂಡಕ್ಕಿರುವ ಸಾಮರ್ಥ್ಯದಿಂದ ಇದು ಸಾಧ್ಯ’ ಎಂದು ಸುದೀಪ್ ಇತ್ತೀಚೆಗೆ ಹೇಳಿದ್ದರು.
ಧ್ರುವ ಸರ್ಜಾ
ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ನಟನೆಯ ಈ ಸಿನಿಮಾದ ಟೀಸರ್ ಜುಲೈ 10ಕ್ಕೆ ಮುಂಬೈನಲ್ಲಿ ರಿಲೀಸ್ ಆಗಲಿದೆ. ಜುಲೈ 12ರಂದು ಬೆಂಗಳೂರಿನಲ್ಲಿ ಚಿತ್ರತಂಡ ಕಾರ್ಯಕ್ರಮ ಆಯೋಜಿಸಿದ್ದು ಇಲ್ಲಿ ರಿಲೀಸ್ ದಿನಾಂಕವನ್ನೂ ಘೋಷಿಸುವ ಸಾಧ್ಯತೆ ಇದೆ. ನವೆಂಬರ್‌ನಲ್ಲಿ ಪ್ರೇಮ್ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ಇದಾಗಿದ್ದು ಚಿತ್ರವನ್ನು ಕೆ.ವಿ.ಎನ್. ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಬಾಲಿವುಡ್‌ನ ಸಂಜಯ್ ದತ್ ಶಿಲ್ಪಾ ಶೆಟ್ಟಿ ರವಿಚಂದ್ರನ್ ರಮೇಶ್ ಅರವಿಂದ್ ತಾರಾಬಳಗದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.