ಬ್ಲ್ಯಾಕ್ ಶೀಪ್
‘ಕಾಲವೇ ಮೋಸಗಾರ’ ಸೇರಿದಂತೆ ಐದು ಚಿತ್ರಗಳು ಇಂದು (ಜೂ.20) ತೆರೆ ಕಾಣುತ್ತಿವೆ.
ಬುಲೆಟ್
ನಟ ಧರ್ಮ ಕೀರ್ತಿರಾಜ್ ಚಿತ್ರಗಳು ಒಂದರ ಹಿಂದೆ ಒಂದರಂತೆ ಬಿಡುಗಡೆಗೊಳ್ಳುತ್ತಿವೆ. ಆ ಸಾಲಿಗೆ ಮತ್ತೊಂದು ಸೇರ್ಪಡೆ ‘ಬುಲೆಟ್’. ಸತ್ಯಜಿತ್ ಶಬ್ಬೀರ್ ನಿರ್ಮಾಣ ಹಾಗೂ ನಿರ್ದೇಶನವಿದೆ.
‘ನಾನು ಭಾರತಿರಾಜಾ ಅವರ ನಿರ್ದೇಶನದ ‘ಪದಿನಾರು ವಯದಿನಿಲೆ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ನಟನಾಗಿ ಚಿತ್ರರಂಗ ಪ್ರವೇಶಿಸಿದೆ. ಸಂಗೀತ ನಿರ್ದೇಶಕರಾದ ಇಳಯರಾಜ ಅವರು ಶಬ್ಬೀರ್ ಎಂದಿದ್ದ ನನ್ನ ಹೆಸರಿನ ಮುಂದೆ ಸತ್ಯಜಿತ್ ಎಂದು ಸೇರಿಸಿದರು. ಅಂದಿನಿಂದ ನನ್ನ ಹೆಸರು ಸತ್ಯಜಿತ್ ಶಬ್ಬೀರ್. ಈವರೆಗೂ ತೆಲುಗು, ತಮಿಳು, ಮಲಯಾಳ ಹಾಗೂ ಹಿಂದಿ ಭಾಷೆಗಳ 75 ಚಿತ್ರಗಳಲ್ಲಿ ನಟಿಸಿದ್ದೇನೆ. ಮೂಲತಃ ಕರ್ನಾಟಕದವನಾಗಿರುವ ನಾನು ಆನಂತರ ಚೆನ್ನೈ ಹಾಗೂ ಮುಂಬೈನಲ್ಲಿ ನೆಲೆಸಿದ್ದೆ. ಮೊದಲ ಚಿತ್ರವನ್ನು ಕನ್ನಡದಲ್ಲೇ ನಿರ್ಮಿಸಿ, ನಿರ್ದೇಶಿಸಬೇಕೆಂಬ ಆಸೆಯಿತ್ತು. ಅದು ಈಗ ಈಡೇರಿದೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಿದು’ ಎಂದಿದ್ದಾರೆ ನಿರ್ದೇಶಕರು.
ಶ್ರೀಯಾ ಶುಕ್ಲ ನಾಯಕಿ. ಹಿರಿಯ ನಟಿ ಭವ್ಯ, ಶೋಭರಾಜ್, ಶಿವ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ರಾಜ್ ಭಾಸ್ಕರ್ ಸಂಗೀತ ನಿರ್ದೇಶನ, ಪಿ.ವಿ.ಆರ್ ಸ್ವಾಮಿ ಛಾಯಾಚಿತ್ರಗ್ರಹಣ ಹಾಗೂ ಗುರುಪ್ರಸಾದ್ ಸಂಕಲನ ಈ ಚಿತ್ರಕ್ಕಿದೆ.
ಬುಲೆಟ್
****
ಡೆಡ್ಲಿ ಲವರ್ಸ್
ನಾಗೇಂದ್ರ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಚಿತ್ರವಿದು. ಸಂಕಲನದ ಜವಾಬ್ದಾರಿಯನ್ನು ಅವರೇ ಹೊತ್ತುಕೊಂಡಿದ್ದಾರೆ. ಅಖಿಲ್ ಕುಮಾರ್ ಬಂಡವಾಳ ಹೂಡುವುದರ ಜತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.
‘ಎಸ್.ಉಮೇಶ್ ಬಳಿ ಕೆಲಸ ಕಲಿತುಕೊಂಡು ಚಿತ್ರದಲ್ಲಿ ಆರು ಜವಾಬ್ದಾರಿಗಳನ್ನು ಹೊತ್ತುಕೊಂಡಿದ್ದೇನೆ. ಪ್ರೇಮಿಗಳಿಬ್ಬರು ಭೂಗತಲೋಕಕ್ಕೆ ಕಾಲಿಟ್ಟು ಖಳನಾಯಕನಿಂದ ಡ್ರಗ್ಸ್ ಹಣವನ್ನು ಕದಿಯುತ್ತಾರೆ. ಅಲ್ಲಿಂದ ನಂತರ ಏನೆಲ್ಲ ಆಗುತ್ತದೆ ಎಂಬುದೇ ಚಿತ್ರದ ಕಥೆ. ಮಂಚನಬೆಲೆ ಡ್ಯಾಂ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ’ ಎಂದಿದ್ದಾರೆ ನಾಗೇಂದ್ರ.
ತನುಪ್ರಸಾದ್ ನಾಯಕಿ. ಪ್ರೇಮಾ ಗೌಡ, ಭಾಸ್ಕರ್, ವಿನೋದ್, ಲಹರಿ ವೇಲು ಮುಂತಾದವರು ನಟಿಸಿದ್ದಾರೆ. ಲಯ ಕೋಕಿಲ ಸಂಗೀತ, ಹೆಚ್.ಎನ್.ನರಸಿಂಹಮೂರ್ತಿ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.
****
‘ಬ್ಲ್ಯಾಕ್ ಶೀಪ್
ಬಹುತೇಕ ಹೊಸಬರಿಂದಲೇ ಕೂಡಿರುವ ‘ಬ್ಲ್ಯಾಕ್ ಶೀಪ್’ ಚಿತ್ರವಿದು. ಜೀವನ್ ಹಳ್ಳಿಕಾರ್ ಚಿತ್ರಕಥೆ, ನಿರ್ದೇಶನವಿದೆ. ಅಶ್ವಿನಿ ಗುರುಚರಣ್ ಬಂಡವಾಳ ಹೂಡಿದ್ದಾರೆ.
‘ಕ್ರೈಂ, ಸಸ್ಪೆನ್ಸ್, ಥ್ರಿಲ್ಲರ್ ಜಾನರ್‌ನ ಸಿನಿಮಾ. ಒಂದಷ್ಟು ನೈಜ ಘಟನೆಗಳನ್ನು ಸಿನಿಮಾದಲ್ಲಿ ಬಳಸಲಾಗಿದೆ. ನಾಯಕ ಮತ್ತು ಖಳನಾಯಕರ ನಡುವೆ ನಡೆಯುವ ಸಂಘರ್ಷದಲ್ಲಿ ನಾಯಕನಿಗೆ ಬದುಕಿನ ಕೆಲ ಘಟನೆಗಳು ಮರೆತು ಹೋಗುತ್ತವೆ. ನಾಯಕ ಹಾಗೆ ಮರೆತ ವಿಷಯಗಳನ್ನು ಹುಡುಕಲು ಯಾವ ರೀತಿ ಪ್ರಾರಂಭಿಸುತ್ತಾನೆ ಎಂಬುದೇ ಚಿತ್ರಕಥೆ. ಬೆಂಗಳೂರು, ಮಂಗಳೂರು, ಮುಂಬೈ ಮೊದಲಾದೆಡೆ ಚಿತ್ರೀಕರಣ ನಡೆಸಲಾಗಿದೆ’ ಎಂದಿದ್ದಾರೆ ನಿರ್ದೇಶಕರು.
ವಿಶಾಲ್‌ಕಿರಣ್ ಚಿತ್ರದ ನಾಯಕ. ಶಿವಾಂಗಿ ದಾವೆ ನಾಯಕಿ. ಪ್ರಶಾಂತ್.ವಿ.ಹರಿ, ನಿಶಾ ಹೆಗಡೆ, ಸಿದ್ಲುಂಗು ಶ್ರೀಧರ್, ಕೃಷ್ಣ ಹೆಬ್ಬಾಳೆ, ಸುಂದರ್ ವೀಣಾ, ಪುನೀತ್, ದೀಪಿಕಾ ಅಡ್ತಲೆ ಮುಂತಾದವರು ಅಭಿನಯಿಸಿದ್ದಾರೆ. ಅಭಿಜಿತ್ ಮಹೇಶ್-ಶೈಲೇಶ್ ಕುಮಾರ್ ಸಾಹಿತ್ಯದ ಗೀತೆಗಳಿಗೆ ಸಿದ್ಧಾರ್ಥ್ ಕಾಮತ್ ಸಂಗೀತ ಸಂಯೋಜಿಸಿದ್ದಾರೆ. ದೇವು ಛಾಯಾಚಿತ್ರಗ್ರಹಣ, ಎಸ್.ಆಕಾಶ್ ಮಹೇಂದ್ರಕರ್ ಸಂಕಲನವಿದೆ.
****
ಮಾತೊಂದ ಹೇಳುವೆ
ಹುಬ್ಬಳ್ಳಿ-ಧಾರವಾಡದ ಹುಡುಗ ಹಾಗೂ ಮೈಸೂರು ಭಾಗದ ಹುಡುಗಿಯ ಪ್ರೇಮ ಕಥೆಯನ್ನು ಹೊಂದಿರುವ ಚಿತ್ರವಿದು. ಮಯೂರ್ ಕಡಿ ನಾಯಕನಾಗಿ ನಟಿಸುವುದರ ಜತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಅಪೂರ್ವ ಆರಾಧ್ಯ, ಗಿರೀಶ್ ಶಿವಣ್ಣ, ಪಿ.ಡಿ. ಸತೀಶ್ ಮುಂತಾದವರು ನಟಿಸಿದ್ದಾರೆ.
ಮಹೇಶ್ವರ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣಗೊಂಡಿದೆ. ಉಲ್ಲಾಸ್ ಕುಲಕರ್ಣಿ ಸಂಗೀತ, ಪರ್ವತೇಶ್ ಪೋಳ ಛಾಯಾಚಿತ್ರಗ್ರಹಣ ಹಾಗೂ ಅಭಯ್ ಕಡಿ ಸಂಕಲನವಿದೆ.
ಮಾತೊಂದ ಹೇಳುವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.